ಪುತ್ತೂರು: ಪುತ್ತೂರಿನ ಮಾಜಿ ಸೈನಿಕರ ಸಂಘ, ಅಮರ ಜವಾನ್ ಜ್ಯೋತಿ ಸಂರಕ್ಷಣಾ ಸಮಿತಿ ಹಾಗೂ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ನಗರದ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಗುರುವಾರ 94ನೇ ವಾಯುಸೇನಾ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುಡಾ ಅಧ್ಯಕ್ಷ ಅಮಲಾ ರಾಮಚಂದ್ರ ಮಾತನಾಡಿ, ದೇಶಕ್ಕಾಗಿ ಸೇವೆ ಸಲ್ಲಿಸುವುದು ಜೀವನದಲ್ಲಿ ಸಿಗುವ ಅಪೂರ್ವ ಕ್ಷಣ. ಸಾಹಸ, ಧೈರ್ಯ, ದೇಶಸೇವೆಗೆ ವಾಯುಸೇನೆ ಉತ್ತಮ ಆಯ್ಕೆ. ಆಧುನಿಕ ಕಾಲದ ಯುದ್ಧದಲ್ಲಿ ವಾಯುಸೇನೆಯ ಕೊಡುಗೆ ಅತ್ಯಂತ ಮಹತ್ವದ್ದು ಎಂದರು.
ಸಾರ್ಜೆಂಟ್ ಶ್ರೀಪ್ರಕಾಶ್ ಕುಕ್ಕಾಜೆ ಪ್ರಧಾನ ಭಾಷಣಗೈದು ವಾಯುಪಡೆಯ ಬಗೆಗೆ ಹಾಗೂ ಸಶಸ್ತ್ರ ಪಡೆಗಳಲ್ಲಿನ ಉದ್ಯೋಗಾವಕಾಶಗಳ ಬಗೆಗೆ ಮಾಹಿತಿ ನೀಡಿದರು.
ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಸಾರ್ಜೆಂಟ್ ವಸಂತ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮತ್ತು ಕರ್ನಲ್ ಡಿ.ಜಿ. ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಂಬಿಕಾ ವಿದ್ಯಾಲಯದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
























