ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದ ಬರಿಯಿಪುರ್ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಪ್ರಭಾಸ್ ಮಂಡಲ್ ಮಂಗಳವಾರ ರಾತ್ರಿ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ. ಮಗನ ಕೃತ್ಯಕ್ಕೆ ಸ್ವತಃ ತಾಯಿಯೇ ಆಕ್ರೋಶ ಹೊರಹಾಕಿದ್ದು, ಶವ ತರಲು ತಾನು ಹೋಗುವುದಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ಮಂಗಳವಾರ ತಡರಾತ್ರಿ 12.45ರ ಸುಮಾರಿಗೆ ಬರುಯಿಪುರದ ಸೂರ್ಯಪುರದಲ್ಲಿ ಎನ್ ಕೌಂಟರ್ ನಡೆಸಲಾಯಿತು. ಆರೋಪಿ ಪ್ರಭಾಸ್ ಮಂಡಲ್ನನ್ನು ಸ್ಥಳ ಮಹಜರು ನಡೆಸಲು ಕರೆದೊಯ್ದಿದ್ದರು. ಸಾರ್ವಜನಿಕರ ಆಕ್ರೋಶದಿಂದ ತಪ್ಪಿಸಿಕೊಳ್ಳಲು ಪೊಲೀಸರು ತಡರಾತ್ರಿ ಈ ಕಾರ್ಯಾಚರಣೆ ನಡೆಸಿದ್ದರು.
ಆದರೆ, ಕತ್ತಲೆಯ ಲಾಭ ಪಡೆಯಲು ಯತ್ನಿಸಿದ ಪ್ರಭಾಸ್, ದಿಢೀರನೆ ಪೊಲೀಸರ ಸರ್ವಿಸ್ ರಿವಾಲ್ವರ್ ಕಸಿದುಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಅಷ್ಟೇ ಅಲ್ಲದೆ ಪೊಲೀಸರ ಮೇಲೆಯೇ ಒಂದು ಸುತ್ತು ಗುಂಡು ಹಾರಿಸಿದ್ದಾನೆ. ತಕ್ಷಣವೇ ಎಚ್ಚೆತ್ತ ಪೊಲೀಸರು ಆತ್ಮರಕ್ಷಣೆಗಾಗಿ ಆತನ ಮೇಲೆ ಪ್ರತಿದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಪ್ರಭಾಸ್‌ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಹುಡುಗಿಯನ್ನು ಹಿಂಸಿಸಿದವನು ಸತ್ತಿದ್ದೇ ಒಳ್ಳೆಯದಾಯಿತು:
ತನ್ನ ಮಗ ಎನ್‌ಕೌಂಟರ್‌ನಲ್ಲಿ ಹತನಾಗಿರುವ ಸುದ್ದಿ ಕೇಳಿ ತಾಯಿ ಸಂಧ್ಯಾ ಮಂಡಲ್ ತೀವ್ರ ದುಃಖಿತರಾಗಿದ್ದರೂ, ಮಗನ ಕೃತ್ಯವನ್ನು ಖಂಡಿಸಿದ್ದಾರೆ. ಒಬ್ಬ ತಾಯಿಯಾಗಿ ನನಗೆ ದುಃಖವಾಗುತ್ತಿದೆ ನಿಜ. ಆದರೆ ಅವನು ಮಾಡಿದ ಪಾಪದ ಕೃತ್ಯಕ್ಕೆ ಅವನಿಗೆ ತಕ್ಕ ಶಿಕ್ಷೆಯೇ ಸಿಕ್ಕಿದೆ. ಆ ಪುಟ್ಟ ಹುಡುಗಿಯನ್ನು ಅವನು ಎಷ್ಟು ಹಿಂಸಿಸಿದ್ದನೋ, ಹಾಗಾಗಿ ಅವನು ಸತ್ತಿದ್ದೇ ಒಳ್ಳೆಯದಾಯಿತು. ನಾನು ಅವನ ಶವವನ್ನು ಮನೆಗೆ ತರಲು ಹೋಗುವುದಿಲ್ಲ, ಅವನ ಮುಖ ನೋಡಲು ಸಹ ನನಗೆ ಇಷ್ಟವಿಲ್ಲ. ಅವನು ನನ್ನ ಮಾತು ಕೇಳದೆ ಯಾವಾಗಲೂ ಕುಡಿದು ತಿರುಗುತ್ತಿದ್ದ ಎಂದಿದ್ದಾರೆ.
ಕಳೆದ ಶನಿವಾರ ರಾತ್ರಿ ಸೂರ್ಯಪುರದ ಪೊದೆಗಳು ಹಾಗೂ ಕಾಡುಗಳಿಂದ ಆವೃತವಾದ ಏಕಾಂತ ಜಾಗದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಕ್ರೂರವಾಗಿ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿತ್ತು. ಭಾನುವಾರ ಬೆಳಗ್ಗೆ ಬರುಯಿಪುರದ ಕೊಳವೊಂದರಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು.
ಬಾಲಕಿಯ ಶವ ಎಲ್ಲಿದೆ ಎಂಬುದನ್ನು ಪೊಲೀಸರಿಗೆ ತೋರಿಸಿದ್ದೇ ಈ ಪ್ರಭಾಸ್ ಮಂಡಲ್. ಈ ಪ್ರಕರಣದ ಪ್ರಮುಖ ಆರೋಪಿ ಆನಂದ್ ಸರ್ದಾರ್ ಮತ್ತು ಆತನ ಸಹಚರರು ಆ ಹುಡುಗಿಯನ್ನು ಅಪಹರಿಸಿ ಮರಳಿ ಕರೆತರಲು ತನಗೆ 10,000 ರೂಪಾಯಿ ಸುಪಾರಿ ಕೊಡುವುದಾಗಿ ಒಪ್ಪಿಕೊಂಡಿದ್ದರು ಎಂದು ಪ್ರಭಾಸ್ ಪೊಲೀಸರ ಮುಂದೆ ಬಾಯಿಬಿಟ್ಟಿದ್ದ. ಸದ್ಯ ಪ್ರಕರಣದ ಇತರ ಆರೋಪಿಗಳಿಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.






















