ಅಪರಾಧ

ಕ್ಷುಲ್ಲಕ ವಿಚಾರಕ್ಕೆ ಮುಂಬೈ ರೈಲಿನಲ್ಲಿ ಹತ್ಯೆ: ಮಂಗಳೂರಿಗೆ ಪರಾರಿಯಾಗುವ ಹೊತ್ತಿನಲ್ಲಿ ಬಂಧತನಾದ ರೋಷನ್ ಸುವರ್ಣ!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ: ಮುಂಬೈ ಲೋಕಲ್ ರೈಲಿನಲ್ಲಿ 22 ವರ್ಷದ ಮಯಾಂಕ್ ಲೋಹರ್ ಅವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಪ್ರಕರಣದ ಆರೋಪಿಯಾಗಿರುವ ರೋಷನ್ ಸುವರ್ಣ (30) ನನ್ನು ಪೊಲೀಸರು ಕೇವಲ 15 ಗಂಟೆಗಳಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಹಾಗೂ ಆರೋಪಿಯ ಶರ್ಟ್ ಮೇಲಿದ್ದ ಕಂಪನಿಯ ಲೋಗೋ ಪೊಲೀಸರಿಗೆ ಮಹತ್ವದ ಸುಳಿವಾಗಿ ಪರಿಣಮಿಸಿದೆ.

maithri

ಮೂಲತಃ ಮೀರಾ ಭಾಯಂದರ್ ನಿವಾಸಿಯಾಗಿರುವ ರೋಷನ್ ಸುವರ್ಣನನ್ನು ಬುಧವಾರ ಬಂಧಿಸಲಾಗಿದ್ದು, ಆತ ಮಂಗಳೂರಿಗೆ ಪರಾರಿಯಾಗಲು ಯೋಜನೆ ರೂಪಿಸಿದ್ದ ಎನ್ನಲಾಗಿದೆ. ಆದರೆ ಪನ್ವೇಲ್ ರೈಲು ನಿಲ್ದಾಣದಲ್ಲಿ ಪೊಲೀಸರು ಆತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ರೋಷನ್ ತನ್ನ ತಂದೆ ಮತ್ತು ಸಹೋದರನೊಂದಿಗೆ ಮುಂಬೈ ವಿಮಾನ ನಿಲ್ದಾಣದ ಸಮೀಪದ ಕಾರ್ಗೋ ಹ್ಯಾಂಡ್ಲಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಬಾರ್‌ಕೋಡ್ ಸಂಬಂಧಿತ ಕಾರ್ಯಗಳನ್ನು ನಿರ್ವಹಿಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ವಿಚಾರಣೆಯಲ್ಲಿ ರೋಷನ್ ಅಪರಾಧವನ್ನು ಒಪ್ಪಿಕೊಂಡಿದ್ದು, ಘಟನೆ ಬಳಿಕ ತನ್ನ ಚಲನವಲನಗಳ ಬಗ್ಗೆ ಮಾಹಿತಿ ನೀಡಿದ್ದಾನೆ. ಮಂಗಳವಾರ ಕೆಲಸ ಮುಗಿದ ಬಳಿಕ ಆತ ಒಂದು ಸಂಪೂರ್ಣ ರಮ್ ಬಾಟಲಿಯನ್ನು ಸೇವಿಸಿದ್ದೆ ಎಂದು ತಿಳಿಸಿದ್ದಾನೆ.

ಭಾರೀ ಮಳೆಯ ಹಿನ್ನೆಲೆಯಲ್ಲಿ ಅಂಧೇರಿ ಪೂರ್ವ ಭಾಗದಿಂದ ಕ್ಯಾಬ್‌ನಲ್ಲಿ ಮನೆಗೆ ತೆರಳುವ ಯೋಚನೆ ಮಾಡಿದ್ದ ಆತ, ಸಂಚಾರ ದಟ್ಟಣೆ ತಪ್ಪಿಸಲು ನಂತರ ಲೋಕಲ್ ರೈಲಿನಲ್ಲಿ ಪ್ರಯಾಣಿಸಲು ನಿರ್ಧರಿಸಿದ್ದ. ಅಂಧೇರಿ ನಿಲ್ದಾಣದಿಂದ ಚರ್ಚ್‌ಗೇಟ್-ನಲಾಸೋಪಾರಾ ಫಾಸ್ಟ್ ಲೋಕಲ್ ರೈಲಿನ ಪ್ರಥಮ ದರ್ಜೆ ಬೋಗಿಗೆ ಹತ್ತಿದ್ದ.

ಕ್ಷುಲ್ಲಕ ವಿಚಾರಕ್ಕೆ ಆರಂಭವಾದ ವಾಗ್ವಾದ

ರೈಲು ಅಂಧೇರಿ ಮತ್ತು ಬೊರಿವಲಿ ನಿಲ್ದಾಣಗಳ ಮಧ್ಯೆ ಸಂಚರಿಸುತ್ತಿದ್ದ ವೇಳೆ ಮಳೆಯ ಕಾರಣ ರೈಲಿನ ಬಾಗಿಲು ಮುಚ್ಚುವ ವಿಚಾರವಾಗಿ ರೋಷನ್ ಮತ್ತು ಸಹ ಪ್ರಯಾಣಿಕ ಮಯಾಂಕ್ ಲೋಹರ್ ನಡುವೆ ವಾಗ್ವಾದ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವೇಳೆ ಕೋಪಗೊಂಡ ರೋಷನ್ ತನ್ನ ಬಳಿಯಿದ್ದ ಚಾಕುವಿನಿಂದ ಮಯಾಂಕ್ ಅವರ ಹೊಟ್ಟೆ ಮತ್ತು ಎದೆಗೆ ಇರಿದಿದ್ದಾನೆ. ಬಳಿಕ ಬೊರಿವಲಿ ನಿಲ್ದಾಣದಲ್ಲಿ ಇಳಿದು ಜನಸಮೂಹದ ನಡುವೆ ಪರಾರಿಯಾಗಿದ್ದ.

ಪ್ಲಾಟ್‌ಫಾರ್ಮ್ ಸಂಖ್ಯೆ 6ರಿಂದ ಹೊರಬಂದ ರೋಷನ್ ಆಟೋರಿಕ್ಷಾದ ಮೂಲಕ ಮೀರಾ ರೋಡ್‌ನಲ್ಲಿರುವ ತನ್ನ ಮನೆಗೆ ತೆರಳಿದ್ದ. ಅಲ್ಲಿ ಸ್ನಾನ ಮಾಡಿ, ಕೆಲ ಬಟ್ಟೆಗಳನ್ನು ಬ್ಯಾಗಿಗೆ ಹಾಕಿಕೊಂಡು, “ಶೀಘ್ರದಲ್ಲೇ ಹಿಂದಿರುಗುತ್ತೇನೆ” ಎಂದು ಕುಟುಂಬ ಸದಸ್ಯರಿಗೆ ತಿಳಿಸಿ ಮನೆಯಿಂದ ಹೊರಟಿದ್ದ. ಬಳಿಕ ಕ್ಯಾಬ್ ಮೂಲಕ ಪನ್ವೇಲ್‌ಗೆ ತೆರಳಿದ್ದ ಆತ, ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಂಗಳೂರಿಗೆ ತೆರಳಲಿದ್ದ ಬಸ್‌ಗೆ ಟಿಕೆಟ್ ಬುಕ್ ಮಾಡಿಕೊಂಡಿದ್ದನೆಂದು ತನಿಖೆಯಿಂದ ತಿಳಿದುಬಂದಿದೆ.

ಇನ್ನೂ ಜೀವಂತವಾಗಿದ್ದಾನೆಯೇ?

ಬಂಧನಕ್ಕೂ ಮುನ್ನ ರೋಷನ್, ಮಯಾಂಕ್ ಇನ್ನೂ ಜೀವಂತವಾಗಿದ್ದಾನೆಯೇ? ಎಂದು ಪೊಲೀಸರನ್ನು ಪ್ರಶ್ನಿಸಿದ್ದಾನೆ ಎನ್ನಲಾಗಿದೆ. ಆರಂಭದಲ್ಲಿ ಪೊಲೀಸರು ಮಯಾಂಕ್ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿಸಿದ್ದು, ಬಳಿಕ ಮೃತಪಟ್ಟಿರುವ ವಿಚಾರ ತಿಳಿಸಿ ಬಂಧಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 113