tamanvi
ಅಪರಾಧ

ವೃದ್ಧೆಯ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ ದರೋಡೆ: ಮೂರು ದಿನದಲ್ಲೇ ಇಬ್ಬರು ಆರೋಪಿಗಳ ಬಂಧನ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗೆ ನುಗ್ಗಿ 76 ವರ್ಷದ ವೃದ್ಧೆಯ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ ಪ್ರಕರಣವನ್ನು ಮಂಗಳೂರು ನಗರ ಪೊಲೀಸರು ಮೂರು ದಿನಗಳೊಳಗೆ ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

maithri

ಆ.3ರಂದು ಮಧ್ಯಾಹ್ನ 1.15ರ ಸುಮಾರಿಗೆ ವೃದ್ಧೆ ಮನೆಯಲ್ಲಿದ್ದ ವೇಳೆ ಬಾಗಿಲು ಬಡಿದ ಶಬ್ದ ಕೇಳಿ ಬಾಗಿಲು ತೆರೆದಿದ್ದಾರೆ. ಈ ವೇಳೆ ಇಬ್ಬರು ಅಪರಿಚಿತರು ಮನೆ ಬಾಡಿಗೆಗೆ ಬೇಕಿದೆ ಎಂದು ಮಾತನಾಡುತ್ತಾ, ಬಾಗಿಲನ್ನು ಬಲವಂತವಾಗಿ ದೂಡಿ ಮನೆಯೊಳಗೆ ಪ್ರವೇಶಿಸಿದ್ದರು. ಬಳಿಕ ವೃದ್ಧೆಯನ್ನು ಕೆಳಕ್ಕೆ ಬೀಳಿಸಿ ಹಲ್ಲೆ ನಡೆಸಿ, ಅವರ ಬಳಿಯಿದ್ದ ಚಿನ್ನದ ಸರ ಮತ್ತು ಬಳೆಯನ್ನು ದೋಚಿಕೊಂಡು ಪರಾರಿಯಾಗಿದ್ದರು.

ದೋಚಲಾದ ಚಿನ್ನಾಭರಣವು ಒಟ್ಟು 24 ಗ್ರಾಂ ತೂಕ ಹೊಂದಿದ್ದು, ಅಂದಾಜು ₹3 ಲಕ್ಷ ಮೌಲ್ಯದ್ದಾಗಿದೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಖಚಿತ ಮಾಹಿತಿ ಆಧರಿಸಿ ಆ.7ರಂದು ಮರೋಳಿ ಬಳಿ ಕಾರ್ಯಾಚರಣೆ ನಡೆಸಿ ಬಾಲ ಸುಬ್ರಮಣ್ಯ (49), ಉರ್ವ ಹಾಗೂ ಶ್ಯಾಮ್‌ಕುಮಾರ್ (33), ತೊಕ್ಕೊಟ್ಟು, ಹಾಲಿ ಮಣ್ಣಗುಡ್ಡ ನಿವಾಸಿ ಎಂಬುವರನ್ನು ಬಂಧಿಸಲಾಗಿದೆ.

ಬಂಧಿತರಿಂದ ಕಳವು ಮಾಡಿದ್ದ ಸಂಪೂರ್ಣ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿ ಬಾಲ ಸುಬ್ರಮಣ್ಯ ವಿರುದ್ಧ ಈ ಹಿಂದೆ ಬಜಪೆ ಠಾಣೆಯಲ್ಲಿ ಎರಡು ಸುಲಿಗೆ, ಮುಲ್ಕಿ ಠಾಣೆಯಲ್ಲಿ ಒಂದು ಸುಲಿಗೆ, ಮಂಗಳೂರು ಪೂರ್ವ ಠಾಣೆಯಲ್ಲಿ ಒಂದು ಸುಲಿಗೆ, ಮಂಗಳೂರು ಉತ್ತರ ಠಾಣೆಯಲ್ಲಿ ಒಂದು ಕಳವು ಹಾಗೂ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಒಂದು ಸುಲಿಗೆ ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ವಿಜಯ ಕ್ರಾಂತಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಉಳ್ಳಾಲ ಠಾಣೆ ಇನ್‌ಸ್ಪೆಕ್ಟರ್ ವಿರೂಪಾಕ್ಷ ಸ್ವಾಮಿ, ಕೊಣಾಜೆ ಠಾಣೆ ಪಿಎಸ್‌ಐಗಳಾದ ನಾಗರಾಜ್ ಹಾಗೂ ಪುನೀತ್ ಗಾಂವಕರ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಅಪರಿಚಿತರು ಮನೆಗೆ ಬಂದಾಗ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ವಿಶೇಷವಾಗಿ ಒಂಟಿಯಾಗಿ ವಾಸಿಸುವ ಮಹಿಳೆಯರ ಮನೆಗಳ ಆವರಣದಲ್ಲಿ ಸಿಸಿಟಿವಿ ಅಳವಡಿಸಿಕೊಂಡು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 117