ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿ, ಬಳಿಕ ಮದುವೆಗೆ ನಿರಾಕರಿಸಿ ಮಗು ಜನಿಸಿದ ನಂತರ ವಂಚನೆ ಎಸಗಿದ ಆರೋಪಕ್ಕೆ ಸಂಬಂಧಿಸಿದ ಪುತ್ತೂರಿನ ಕೃಷ್ಣಾ ಜೆ. ರಾವ್ ವಿರುದ್ಧದ ಪ್ರಕರಣದಲ್ಲಿ ಹೈಕೋರ್ಟ್‌ನಲ್ಲಿ ನಡೆದ ಮಧ್ಯಸ್ಥಿಕೆ (ಮೆಡಿಯೇಷನ್) ಪ್ರಕ್ರಿಯೆ ವಿಫಲವಾಗಿದೆ.
ಹೈಕೋರ್ಟ್ ನಿರ್ದೇಶನದಂತೆ ನಡೆದ ರಾಜಿ ಸಂಧಾನದ ವೇಳೆ ಸಂತ್ರಸ್ತೆಯನ್ನು ವಿವಾಹವಾಗಲು ಆರೋಪಿ ಒಪ್ಪದ ಕಾರಣ ಸಂಧಾನ ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ, ತನ್ನ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಕೃಷ್ಣಾ ಜೆ. ರಾವ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 11ರಂದು ಸಂಜೆ 4.30ಕ್ಕೆ ಮುಂದೂಡಿದೆ.
ಪ್ರಕರಣದ ಮುಂದಿನ ವಿಚಾರಣೆಯವರೆಗೆ ಈ ಹಿಂದೆ ನೀಡಲಾಗಿದ್ದ ಮಧ್ಯಂತರ ತಡೆಯಾಜ್ಞೆ ಹಾಗೂ ಸಂತ್ರಸ್ತೆ ಮತ್ತು ಮಗುವಿನ ಪಾಲನೆಗಾಗಿ ಪ್ರತಿ ತಿಂಗಳು ₹75 ಸಾವಿರ ನೀಡುವಂತೆ ನೀಡಿದ್ದ ಆದೇಶವನ್ನು ನ್ಯಾಯಾಲಯ ಮುಂದುವರಿಸಿದೆ.
ಸಂತ್ರಸ್ತೆ 2025ರ ಜೂನ್‌ನಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪ್ರಕರಣದ ಮುಂದಿನ ಎಲ್ಲ ಪ್ರಕ್ರಿಯೆಗಳನ್ನು ರದ್ದುಪಡಿಸುವಂತೆ ಕೋರಿ ಆರೋಪಿ ತಮ್ಮ ಪರ ವಕೀಲ ಪಿ.ಪಿ. ಹೆಗ್ಡೆ ಅವರ ಮೂಲಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಮಧ್ಯಂತರ ತಡೆಯಾಜ್ಞೆ ನೀಡುವ ಜೊತೆಗೆ, ಸಂತ್ರಸ್ತೆ ಹಾಗೂ ಮಗುವಿನ ಪಾಲನೆಗಾಗಿ ಪ್ರತಿ ತಿಂಗಳು ₹75 ಸಾವಿರ ಪಾವತಿಸುವಂತೆ ಆದೇಶಿಸಿತ್ತು.
ನಂತರ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಅವಕಾಶ ನೀಡಲಾಗಿದ್ದು, ಹೈಕೋರ್ಟ್ ನೇಮಕಗೊಳಿಸಿದ್ದ ಮಧ್ಯಸ್ಥಿಕೆದಾರರಾದ ಹಿರಿಯ ವಕೀಲೆ ಎಸ್. ಸುಶೀಲ ಅವರು ಎರಡೂ ಪಕ್ಷಗಳೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದ್ದಾರೆ. ಆದರೆ ಆರೋಪಿ ಮದುವೆಗೆ ಒಪ್ಪದ ಕಾರಣ ಸಂಧಾನ ವಿಫಲವಾಗಿದೆ ಎಂದು ತಿಳಿದುಬಂದಿದೆ.
























