ಪುತ್ತೂರು: ಇಲ್ಲಿನ ಪ್ರೆಸ್ ಕ್ಲಬ್ ಮುಂಭಾಗ ಮಂಗಳವಾರ ಸಂಜೆ ಶಾಸಕರ ಬೆಂಬಲಿಗರಿಂದ ನಡೆದ ಗಲಾಟೆ ಪ್ರಕರಣದಲ್ಲಿ ಶಾಸಕರ ಅಂಗರಕ್ಷಕರೇ ಮುಂಭಾಗದಲ್ಲಿ ನಿಂತು ಗಲಾಟೆ ನಡೆಸಿದ್ದಾರೆ. ಹಾಗಾಗಿ ಘಟನೆಯ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿಯ ಮಾಧ್ಯಮ ವಕ್ತಾರ ರಾಜೇಶ್ ಬನ್ನೂರು ಆಗ್ರಹಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರಿನಲ್ಲಿ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ತೋರಿಸುತ್ತಿವೆ ಎಂದು ಆರೋಪಿಸಿರುವ ಅವರು, ಪುತ್ತೂರು ವಿಧಾನಸಭಾ ಕ್ಷೇತ್ರ, ಪುತ್ತೂರು ಪ್ರೆಸ್‌ಕ್ಲಬ್ ಮುಂಭಾಗ ನಡೆದ ಘಟನೆಗೆ ಸಂಬಂಧಿಸಿ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಶಾಸಕರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಶಾಸಕರ ಆಪ್ತರು ಎನ್ನಲಾದವರು ಹಕೀಂ ಕೂರ್ನಡ್ಕ ಅವರೊಂದಿಗೆ ಗಲಾಟೆ ನಡೆಸಿರುವುದು ಪುತ್ತೂರಿನ ಕಾನೂನು ಸುವ್ಯವಸ್ಥೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಆರೋಪಿಸಿದರು.
ವೈಯಕ್ತಿಕ ಅಥವಾ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೆ ಅವುಗಳನ್ನು ಕಾನೂನು ಮತ್ತು ಪೊಲೀಸ್ ವ್ಯವಸ್ಥೆಯ ಮೂಲಕ ಬಗೆಹರಿಸಬೇಕು. ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ನಡೆಸುವುದು ಸರಿಯಲ್ಲ. ಜನಪ್ರತಿನಿಧಿಗಳು ತಮ್ಮ ಬೆಂಬಲಿಗರ ವರ್ತನೆಯ ಮೇಲೂ ನಿಯಂತ್ರಣ ಹೊಂದಿರಬೇಕು ಎಂದು ಬಿಜೆಪಿ ಮುಖಂಡರು ಹೇಳಿದರು.
‘ಪುತ್ತೂರು ಗೂಂಡಾ ರಾಜ್ಯವಾಗುತ್ತಿದೆ’:
ಪುರುಷರಕಟ್ಟೆ, ದರ್ಬೆ ಸೇರಿದಂತೆ ಇತ್ತೀಚಿನ ಕೆಲವು ಘಟನೆಗಳನ್ನು ಉಲ್ಲೇಖಿಸಿದ ಬಿಜೆಪಿ ಮುಖಂಡರು, ಪುತ್ತೂರಿನಲ್ಲಿ ಸಾರ್ವಜನಿಕರು ನಿರ್ಭಯವಾಗಿ ಓಡಾಡುವ ವಾತಾವರಣಕ್ಕೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿದರು.
ಪೊಲೀಸ್ ವಾಹನದ ಮೇಲೆ ದಾಳಿ, ನ್ಯಾಯ ಕೇಳಲು ಬಂದವರ ಮೇಲೆಯೇ ಪ್ರಕರಣ ದಾಖಲಾಗುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಲಾಟೆಗಳು ನಡೆಯುತ್ತಿರುವುದು ಕಾನೂನು ಸುವ್ಯವಸ್ಥೆಯ ಬಗ್ಗೆ ಆತಂಕ ಮೂಡಿಸಿದೆ. ಪೊಲೀಸ್ ಇಲಾಖೆ ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದರು.
ಟೀಕೆ ಮಾಡುವ ಹಕ್ಕಿಗೆ ಧಕ್ಕೆ ಆರೋಪ
ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ನೀಡಿದೆ. ಆದರೆ ಶಾಸಕರನ್ನು ಟೀಕಿಸುವವರನ್ನು ವೈಯಕ್ತಿಕವಾಗಿ ನಿಂದಿಸುವುದು ಹಾಗೂ ಬೆಂಬಲಿಗರ ಮೂಲಕ ಬೆದರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಬಿಜೆಪಿ ಆರೋಪಿಸಿತು.
ಹಕೀಂ ಕೂರ್ನಡ್ಕ ಅವರು ತಮ್ಮ ಮೇಲೆ ಜೀವಭಯವಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿರುವುದನ್ನು ಉಲ್ಲೇಖಿಸಿದ ಬಿಜೆಪಿ, ಜನಪ್ರತಿನಿಧಿಗಳು ಟೀಕೆ ಹಾಗೂ ವಿರೋಧವನ್ನು ರಾಜಕೀಯವಾಗಿ ಎದುರಿಸಬೇಕೇ ಹೊರತು ವೈಯಕ್ತಿಕ ಸಂಘರ್ಷವಾಗಿ ಪರಿವರ್ತಿಸಬಾರದು ಎಂದು ಹೇಳಿತು.
‘ಪ್ರೆಸ್‌ಕ್ಲಬ್ ಮುಂಭಾಗದ ಘಟನೆ ದುರದೃಷ್ಟಕರ’
ತಮಗಾದ ಅನ್ಯಾಯ ಹಾಗೂ ಕಾಂಗ್ರೆಸ್ ಪಕ್ಷದೊಳಗಿನ ವಿಚಾರಗಳ ಕುರಿತು ಮಾಧ್ಯಮಗಳ ಮುಂದೆ ಹೇಳಿಕೆ ನೀಡಲು ಹಕೀಂ ಕೂರ್ನಡ್ಕ ಅವರು ಪ್ರೆಸ್‌ಕ್ಲಬ್‌ಗೆ ಆಗಮಿಸಿದ್ದರು. ಈ ವೇಳೆ ಅವರನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ನಡೆಸಲಾಗಿದೆ ಎಂದು ಬಿಜೆಪಿ ಆರೋಪಿಸಿತು.
ಪುತ್ತೂರು ಪೇಟೆಯ ಪ್ರಮುಖ ಪ್ರದೇಶದಲ್ಲಿರುವ ಪ್ರೆಸ್‌ಕ್ಲಬ್ ಮುಂಭಾಗವೇ ಇಂತಹ ಘಟನೆ ನಡೆದಿರುವುದು ದುರದೃಷ್ಟಕರ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಕಾನೂನುಬದ್ಧವಾಗಿ ಹಾಗೂ ಮಾಧ್ಯಮಗಳ ಮೂಲಕ ಹೇಳಿಕೊಳ್ಳಲು ಸಾಧ್ಯವಾಗದಂತಹ ವಾತಾವರಣ ನಿರ್ಮಾಣವಾಗಬಾರದು ಎಂದು ಮುಖಂಡರು ಹೇಳಿದರು.
ನಿಷ್ಪಕ್ಷಪಾತ ತನಿಖೆಗೆ ಆಗ್ರಹ
ಪ್ರೆಸ್‌ಕ್ಲಬ್ ಮುಂಭಾಗ ನಡೆದ ಘಟನೆಯ ಬಗ್ಗೆ ಪೊಲೀಸ್ ಇಲಾಖೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಅಶಾಂತಿ ಹಾಗೂ ಭಯದ ವಾತಾವರಣ ಸೃಷ್ಟಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಪೊಲೀಸರು ಕಾರ್ಯನಿರ್ವಹಿಸಬೇಕು ಎಂದು ಬಿಜೆಪಿ ಆಗ್ರಹಿಸಿತು.
ಇದಲ್ಲದೆ, ಪೋಕ್ಸೋ ಪ್ರಕರಣದಲ್ಲಿ ಆರೋಪಿ ಎಂದು ಉಲ್ಲೇಖಿಸಲಾದ ಅನು ಪಡೀಲ್ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಒತ್ತಾಯಿಸಿತು.
ಪುತ್ತೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಸಾರ್ವಜನಿಕರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದರು.
ಗ್ರಾಮಾಂತರ ಮಂಡಲ ಉಪಾಧ್ಯಕ್ಷರಾದ ವಿರೂಪಾಕ್ಷ ಭಟ್ ಮಚ್ಚಿಮಲೆ, ಹರಿಪ್ರಸಾದ್ ಯಾದವ್, ಪ್ರಧಾನ ಕಾರ್ಯದರ್ಶಿ ಸುನೀಲ್ ದಡ್ಡು, ನಗರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ್ ಪೆರಿಯತ್ತೋಡಿ, ಶಶಿಧರ್ ನಾಯಕ್ ಉಪಸ್ಥಿತರಿದ್ದರು.























