ರಾಜಕೀಯ

SIR ಪ್ರಕ್ರಿಯೆ ಪೂರ್ಣ: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ2.04 ಲಕ್ಷ ಮತದಾರರು | ಅಂತಿಮ ಮತದಾರರ ಪಟ್ಟಿ ಪ್ರಕಟ: 1,038 ಹೆಸರು ಡಿಲೀಟ್‌, 3,645 ಹೊಸ ಮತದಾರರು

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಅಂತಿಮ ಪಟ್ಟಿಯ ಪ್ರಕಾರ ಕ್ಷೇತ್ರದಲ್ಲಿ ಒಟ್ಟು 2,04,181 ಮತದಾರರಿದ್ದು, ಇವರಲ್ಲಿ 1,00,703 ಪುರುಷರು ಹಾಗೂ 1,03,478 ಮಹಿಳೆಯರಿದ್ದಾರೆ. ಪುರುಷರಿಗಿಂತ 2,775 ಮಹಿಳಾ ಮತದಾರರು ಹೆಚ್ಚಿದ್ದಾರೆ.

1,038 ಹೆಸರುಗಳ ಕಡಿತ, 3,645 ಹೊಸ ಮತದಾರರ ಸೇರ್ಪಡೆ

ಪರಿಷ್ಕರಣೆಗೂ ಮುನ್ನ ಪುತ್ತೂರು ಕ್ಷೇತ್ರದಲ್ಲಿ 2,16,542 ಮತದಾರರಿದ್ದರು. ಪರಿಷ್ಕರಣೆ ಪ್ರಕ್ರಿಯೆಯಲ್ಲಿ 1,038 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದ್ದು, ಎರಡನೇ ಹಂತದಲ್ಲಿ ನಮೂನೆ-6ರ ಮೂಲಕ 3,645 ಹೊಸ ಮತದಾರರನ್ನು ಸೇರ್ಪಡೆಗೊಳಿಸಲಾಗಿದೆ.

ಮನೆಮನೆ ಸಮೀಕ್ಷೆಯ ವೇಳೆ ಮೃತಪಟ್ಟವರು, ಶಾಶ್ವತವಾಗಿ ಸ್ಥಳಾಂತರಗೊಂಡವರು ಹಾಗೂ ದ್ವಿಪ್ರತಿ ನೋಂದಣಿ ಹೊಂದಿದವರು ಸೇರಿದಂತೆ ವಿವಿಧ ವರ್ಗದ ಮತದಾರರನ್ನು ಗುರುತಿಸಲಾಗಿತ್ತು.

ಒಟ್ಟು 12,330 ಮತದಾರರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿದ್ದು, ಈ ಪೈಕಿ 12,060 ಮಂದಿ ಅರ್ಹರೆಂದು ದೃಢಪಟ್ಟಿದ್ದಾರೆ. ಉಳಿದ 270 ಮಂದಿಯನ್ನು ಅನರ್ಹರೆಂದು ಗುರುತಿಸಲಾಗಿದೆ.

ಯುವ ಮತದಾರರು 3,027

ಅಂತಿಮ ಮತದಾರರ ಪಟ್ಟಿಯಲ್ಲಿ 18ರಿಂದ 19 ವರ್ಷ ವಯಸ್ಸಿನ 3,027 ಯುವ ಮತದಾರರಿದ್ದಾರೆ. ಅಲ್ಲದೆ, 2,067 ಅಂಗವಿಕಲ ಮತದಾರರು ಹಾಗೂ 85 ವರ್ಷ ಮೇಲ್ಪಟ್ಟ 1,533 ಮತದಾರರು ಪಟ್ಟಿಯಲ್ಲಿದ್ದಾರೆ.

ಮತಗಟ್ಟೆಗಳ ಸಂಖ್ಯೆ 245ಕ್ಕೆ ಏರಿಕೆ

ಎಸ್‌ಐಆರ್‌ಗೂ ಮೊದಲು ಪುತ್ತೂರು ಕ್ಷೇತ್ರದಲ್ಲಿ 221 ಮತಗಟ್ಟೆಗಳಿದ್ದವು. 1,200ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳನ್ನು ವಿಭಜಿಸಿ 24 ಹೊಸ ಮತಗಟ್ಟೆಗಳನ್ನು ರಚಿಸಲಾಗಿದೆ. ಇದರಿಂದ ಕ್ಷೇತ್ರದ ಒಟ್ಟು ಮತಗಟ್ಟೆಗಳ ಸಂಖ್ಯೆ 245ಕ್ಕೆ ಏರಿಕೆಯಾಗಿದೆ.

ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸಿ

ಅಂತಿಮ ಪಟ್ಟಿಯಲ್ಲಿ ಹೆಸರು ಇಲ್ಲದ ಅರ್ಹ ಮತದಾರರು ನಮೂನೆ-6ರ ಮೂಲಕ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ಹೆಸರು ತೆಗೆದುಹಾಕಲು ನಮೂನೆ-7 ಹಾಗೂ ಮತದಾರರ ವಿವರಗಳಲ್ಲಿ ತಿದ್ದುಪಡಿ ಮಾಡಲು ನಮೂನೆ-8ರ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.

ಮತದಾರರು ತಮ್ಮ ಹೆಸರುಗಳನ್ನು ಬೂತ್ ಮಟ್ಟದ ಅಧಿಕಾರಿ (BLO) ಮೂಲಕ ಅಥವಾ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ https://voters.eci.gov.in ನಲ್ಲಿ ಪರಿಶೀಲಿಸಬಹುದು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts