ಪುತ್ತೂರು: ವಿಶ್ವದಾದ್ಯಂತ ಕರಾಟೆ ಕುರಿತು ಜಾಗೃತಿ ಮೂಡಿಸುವ ಜೊತೆಗೆ 2030ರೊಳಗೆ 8 ಕೋಟಿ ಭಾರತೀಯ ನಾಗರಿಕರಿಗೆ ಉಚಿತ ಆತ್ಮರಕ್ಷಣಾ ತರಬೇತಿ ನೀಡುವ ಗುರಿಯನ್ನು ಹೊಂದಿರುವ World Karate Masters Association (WKMA) ವತಿಯಿಂದ 3ನೇ ಗಿನ್ನೆಸ್ ವಿಶ್ವ ದಾಖಲೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
2026ರ ಆಗಸ್ಟ್ 16ರಂದು ಚೆನ್ನೈನ ಕೋಯಂಬೇಡು, ಸೇಂಟ್ ಥಾಮಸ್ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಸೈನ್ಸ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಲಂಡನ್‌ನ ಗಿನ್ನೆಸ್ ಹೆಡ್‌ಕ್ವಾರ್ಟರ್ಸ್‌ನ ಪ್ರತಿನಿಧಿ/ಅಧಿಕಾರಿಯೂ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಕರಾಟೆಪಟುವೂ 30 ನಿಮಿಷಗಳ ಕಾಲ ನಿರಂತರವಾಗಿ 10 ಕರಾಟೆ ತಂತ್ರಗಳನ್ನು ಪ್ರದರ್ಶಿಸುವ ಮೂಲಕ ಹೊಸ ಗಿನ್ನೆಸ್ ವಿಶ್ವ ದಾಖಲೆ ಸ್ಥಾಪಿಸುವ ಪ್ರಯತ್ನದಲ್ಲಿ ಪಾಲ್ಗೊಂಡರು.
ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪುತ್ತೂರಿನ ಸುಧಾನ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಸಾನ್ವಿತಾ ಎಂ. ರೈ ಭಾಗವಹಿಸಿ ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಗೊಂಡಿದ್ದಾರೆ.
ಶಿಹಾನ್ ಸುರೇಶ್ ಎಂ. ಅವರ ಮಾರ್ಗದರ್ಶನದಲ್ಲಿ ಯುನೈಟೆಡ್ ಕರಾಟೆ ಬುಡೋಕಾನ್ ಇಂಟರ್‌ನ್ಯಾಷನಲ್ನಲ್ಲಿ ತರಬೇತಿ ಪಡೆಯುತ್ತಿರುವ ಸಾನ್ವಿತಾ, ಮನೋಜ್ ಮತ್ತು ಸ್ವಪ್ನಾ ರೈ ದಂಪತಿಯ ಎರಡನೇ ಪುತ್ರಿ.
ಕರಾಟೆ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಸಾನ್ವಿತಾ ಎಂ. ರೈ ಅವರ ಈ ಸಾಧನೆಗೆ ಕುಟುಂಬಸ್ಥರು, ಶಿಕ್ಷಕರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.






















