ಪುತ್ತೂರು: ಕರಾವಳಿ ಮೀನುಗಾರರ ಸುರಕ್ಷತೆ ವಿಚಾರದಲ್ಲಿ ರಾಜ್ಯ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯವನ್ನು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ತೀವ್ರವಾಗಿ ಖಂಡಿಸಿದ್ದಾರೆ.
ಆಗಸ್ಟ್ 18ರಂದು ನಡೆದ ವಿಧಾನ ಪರಿಷತ್ ಅಧಿವೇಶನದಲ್ಲಿ ಕರಾವಳಿ ಮೀನುಗಾರರ ಸುರಕ್ಷತೆ ಹಾಗೂ ಲೈಫ್ ಜಾಕೆಟ್ ವಿತರಣೆಗೆ ಸಂಬಂಧಿಸಿದಂತೆ ಅವರು ಕೇಳಿದ ಲಿಖಿತ ಪ್ರಶ್ನೆಗೆ ಸರ್ಕಾರ ನೀಡಿದ ಉತ್ತರದಲ್ಲಿ ಹಲವು ಆತಂಕಕಾರಿ ಅಂಶಗಳು ಬಹಿರಂಗವಾಗಿವೆ.
ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಒಟ್ಟು 215 ಮೀನುಗಾರರು ಸಾವನ್ನಪ್ಪಿದ್ದಾರೆ. ಆದರೆ ಮೀನುಗಾರರ ಸುರಕ್ಷತೆಗಾಗಿ ಅಗತ್ಯವಿರುವ ಲೈಫ್ ಜಾಕೆಟ್‌ಗಳ ವಿತರಣೆಯಲ್ಲಿ ಸರ್ಕಾರದ ಕಾರ್ಯಕ್ಷಮತೆ ಪ್ರಶ್ನಾರ್ಹವಾಗಿದೆ ಎಂದು ಕಿಶೋರ್ ಕುಮಾರ್ ಆರೋಪಿಸಿದ್ದಾರೆ.
ಉತ್ತರ ಕನ್ನಡದಲ್ಲಿ ಲೈಫ್ ಜಾಕೆಟ್ ವಿತರಣೆ ಶೂನ್ಯ: 2025-26ನೇ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 57 ಮೀನುಗಾರರು ಸಾವನ್ನಪ್ಪಿದ್ದರೂ, ಇದೇ ಅವಧಿಯಲ್ಲಿ ಸರ್ಕಾರ ವಿತರಿಸಿದ ಲೈಫ್ ಜಾಕೆಟ್‌ಗಳ ಸಂಖ್ಯೆ ಶೂನ್ಯ ಎಂದು ಅವರು ತಿಳಿಸಿದ್ದಾರೆ.
ದಕ್ಷಿಣ ಕನ್ನಡದಲ್ಲೂ ನಿರ್ಲಕ್ಷ್ಯ: 2023-24 ಹಾಗೂ 2024-25ನೇ ಸಾಲಿನಲ್ಲಿ ಮಂಗಳೂರು ಭಾಗದಲ್ಲಿ ಎಂಟು ಮೀನುಗಾರರು ಅಪಘಾತದಲ್ಲಿ ಮೃತಪಟ್ಟಿದ್ದು, ಈ ಎರಡೂ ವರ್ಷಗಳಲ್ಲಿ ವಿತರಿಸಲಾದ ಲೈಫ್ ಜಾಕೆಟ್‌ಗಳ ಸಂಖ್ಯೆ ಶೂನ್ಯವಾಗಿದೆ ಎಂದು ಕಿಶೋರ್ ಕುಮಾರ್ ಹೇಳಿದ್ದಾರೆ.
ಉಡುಪಿಯಲ್ಲಿ 90 ಸಾವು: ಕಳೆದ ಮೂರು ವರ್ಷಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 90 ಮೀನುಗಾರರು ಸಾವನ್ನಪ್ಪಿದ್ದಾರೆ. ಈ ಅವಧಿಯಲ್ಲಿ ಕ್ರಮವಾಗಿ 180, 170 ಹಾಗೂ 193 ಲೈಫ್ ಜಾಕೆಟ್‌ಗಳನ್ನು ಮಾತ್ರ ವಿತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
“ಮೀನುಗಾರಿಕೆಗೆ ತೆರಳುವ ದೋಣಿಗಳಲ್ಲಿ ಲೈಫ್ ಜಾಕೆಟ್ ಕಡ್ಡಾಯ ಎಂದು ಆದೇಶಿಸುವ ಸರ್ಕಾರ, ಅದೇ ಮೀನುಗಾರರಿಗೆ ಅಗತ್ಯ ರಕ್ಷಣಾ ಪರಿಕರಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಸಾವುಗಳು ಸಂಭವಿಸುತ್ತಿರುವ ಜಿಲ್ಲೆಗಳಲ್ಲೇ ಲೈಫ್ ಜಾಕೆಟ್ ವಿತರಣೆ ಶೂನ್ಯವಾಗಿರುವುದು ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ,” ಎಂದು ಕಿಶೋರ್ ಕುಮಾರ್ ಪುತ್ತೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇವಲ ಕಾಗದದ ಮೇಲೆ 604 ಲಕ್ಷ ರೂ. ಅನುದಾನ ಮೀಸಲಿಟ್ಟಿದ್ದೇವೆ ಎಂದು ಹೇಳಿಕೊಳ್ಳದೆ, ತಕ್ಷಣವೇ ಕರಾವಳಿಯ ಮೂರು ಜಿಲ್ಲೆಗಳ ಮೀನುಗಾರರಿಗೆ ಅಗತ್ಯವಿರುವಷ್ಟು ಲೈಫ್ ಜಾಕೆಟ್‌ಗಳನ್ನು ವಿತರಿಸಬೇಕು. ಮೀನುಗಾರರ ಜೀವಕ್ಕೆ ಸರ್ಕಾರ ಬೆಲೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.






















