tamanvi
ರಾಜ್ಯ ವಾರ್ತೆ

ವಾಲ್ಮೀಕಿ ನಿಗಮ ಹಗರಣ: ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಆ.21ರಂದು ಪುತ್ತೂರಿನಲ್ಲಿ ಬಿಜೆಪಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಹಣದ ದುರುಪಯೋಗದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪುತ್ತೂರು ನಗರ ಹಾಗೂ ಗ್ರಾಮಾಂತರ ಮಂಡಲಗಳ ವತಿಯಿಂದ ಆ.21ರಂದು ಪ್ರತಿಭಟನೆ ನಡೆಯಲಿದೆ.

ಶುಕ್ರವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಅಮರ ಜವಾನ್ ಸ್ಮಾರಕ ಜ್ಯೋತಿ ಬಳಿ ಪ್ರತಿಭಟನಾ ಸಭೆ ನಡೆಯಲಿದ್ದು, ಬಳಿಕ ಸಹಾಯಕ ಆಯುಕ್ತರ ಮೂಲಕ ಮನವಿ ಸಲ್ಲಿಸಲಾಗುವುದು ಎಂದು ಬಿಜೆಪಿ ಪುತ್ತೂರು ನಗರ ಮಂಡಲದ ಮಾಧ್ಯಮ ವಕ್ತಾರ ರಾಜೇಶ್ ಬನ್ನೂರು ತಿಳಿಸಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕಾಸು ಅಕ್ರಮ ಪ್ರಕರಣವನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಅಧಿಕೃತವಾಗಿ ಒಪ್ಪಿಕೊಂಡಿದ್ದರು ಎಂದು ಬಿಜೆಪಿ ಆರೋಪಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ. ನಾಗೇಂದ್ರ ವಿರುದ್ಧ ಸಿಬಿಐ ಮೂರು ದೋಷಾರೋಪಣಾ ಪಟ್ಟಿಗಳು ಹಾಗೂ ಜಾರಿ ನಿರ್ದೇಶನಾಲಯ (ಇ.ಡಿ.) ಒಂದು ಆರೋಪಪಟ್ಟಿ ಸಲ್ಲಿಸಿದೆ. ನಾಗೇಂದ್ರ ಅವರು ಪ್ರಕರಣದಲ್ಲಿ ಜೈಲು ಸೇರಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಎಂದು ಬಿಜೆಪಿ ದೂರಿದೆ.

ಇಂತಹ ಆರೋಪಗಳನ್ನು ಎದುರಿಸುತ್ತಿರುವ ಬಿ. ನಾಗೇಂದ್ರ ಅವರನ್ನು ನೂತನ ಸಚಿವ ಸಂಪುಟದಲ್ಲಿ ಮತ್ತೆ ಸಚಿವರನ್ನಾಗಿ ಮಾಡಿರುವುದು ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಮಾಡಿರುವ ಅನ್ಯಾಯ ಎಂದು ಬಿಜೆಪಿ ಆರೋಪಿಸಿದೆ.

ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬಿಜೆಪಿ ಮನವಿ ಮಾಡಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts