ರಾಜಕೀಯ

ಆರ್ಯಾಪು, ಕುರಿಯ ಕಾಮಗಾರಿಗಳ ಚರ್ಚೆಗೆ ಆಹ್ವಾನ ನೀಡಿದ ಯತೀಶ್ ಆರ್ವಾರ್ | ಅಮಾನತಾದ ಅಧಿಕಾರಿಗೆ ಮತ್ತದೇ ಸ್ಥಾನ ನೀಡಿರುವುದೇ ಪುತ್ತೂರು ಶಾಸಕರ ಸಾಧನೆ – ಬೂಡಿಯಾರ್ ರಾಧಾಕೃಷ್ಣ ರೈ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಅನುದಾನ ಹಂಚಿಕೆ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ. ಆರ್ಯಾಪು ಮತ್ತು ಕುರಿಯ ಗ್ರಾಮಗಳಲ್ಲಿ ನಡೆದಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಬಹಿರಂಗ ಚರ್ಚೆಗೆ ಸಿದ್ಧರಿದ್ದೇವೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್ ಅವರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಸವಾಲು ಹಾಕಿದ್ದಾರೆ.

aryapu_bjp

oplus_140509186

ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಬಿಜೆಪಿ ವತಿಯಿಂದ ಶನಿವಾರ ಆರ್ಯಾಪುವಿನಲ್ಲಿ ಆಯೋಜಿಸಿದ್ದ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ ಹಾಗೂ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಪುತ್ತೂರಿಗೆ ರೂ.2,800 ಕೋಟಿ ಅನುದಾನ ತಂದಿರುವುದಾಗಿ ಶಾಸಕರು ಮಾಡುತ್ತಿರುವ ಹೇಳಿಕೆಗಳ ಬಗ್ಗೆ ಪ್ರಶ್ನೆ ಎತ್ತಿದರು.

ಸಂಜೀವ ಮಠಂದೂರು ಅವರ ಶಾಸಕರ ಅವಧಿಯಲ್ಲಿ ನಿರ್ಮಾಣಗೊಂಡಿದ್ದ ರಸ್ತೆಗಳ ಪೈಕಿ ಕೆಲವೇ ಮೀಟರ್‌ಗಳಷ್ಟು ಕಾಂಕ್ರೀಟೀಕರಣ ನಡೆಸಿ, ಸಂಪೂರ್ಣ ಅಭಿವೃದ್ಧಿ ತಮ್ಮ ಅವಧಿಯಲ್ಲೇ ಆಗಿದೆ ಎಂಬ ರೀತಿಯಲ್ಲಿ ಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಆರ್ಯಾಪು ಮತ್ತು ಕುರಿಯ ಗ್ರಾಮಗಳಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಹಾಗೂ ಈಗಿನ ಶಾಸಕರ ಅವಧಿಯಲ್ಲಿ ನಡೆದಿರುವ ರಸ್ತೆ ಕಾಮಗಾರಿಗಳನ್ನು ಸ್ಥಳದಲ್ಲೇ ಪರಿಶೀಲಿಸಿ ಅಳತೆ ಮಾಡೋಣ. ಯಾವ ಅವಧಿಯಲ್ಲಿ ಎಷ್ಟು ಕಿಲೋಮೀಟರ್ ರಸ್ತೆ ನಿರ್ಮಾಣವಾಗಿದೆ ಎಂಬುದನ್ನು ಜನರ ಮುಂದಿಡೋಣ. ಶಾಸಕರು ದಿನಾಂಕ ಮತ್ತು ಸ್ಥಳ ನಿಗದಿಪಡಿಸಿದರೆ ಬಹಿರಂಗ ಚರ್ಚೆಗೆ ಬಿಜೆಪಿ ಸಿದ್ಧವಿದೆ ಎಂದು ಹೇಳಿದರು.

ಆರ್ಯಾಪು ಗ್ರಾಮಕ್ಕೆ ರೂ.10 ಕೋಟಿ ಅನುದಾನ ತಂದಿರುವುದಾಗಿ ಹೇಳಿಕೊಳ್ಳುವುದರಿಂದ ಮಾತ್ರ ಅಭಿವೃದ್ಧಿಯಾಗಿದೆ ಎಂದರ್ಥವಲ್ಲ. ಅನುದಾನದ ಮೊತ್ತ, ಅದರ ಬಳಕೆ ಹಾಗೂ ಪೂರ್ಣಗೊಂಡಿರುವ ಕಾಮಗಾರಿಗಳ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.

ಕಾರ್ಯಕರ್ತರ ಅಸ್ತಿತ್ವದ ಬಗ್ಗೆ ಪ್ರಶ್ನಿಸುವವರಿಗೆ ತಿರುಗೇಟು

ಬಿಜೆಪಿ ಕಾರ್ಯಕರ್ತರ ಅಸ್ತಿತ್ವದ ಬಗ್ಗೆ ಕಾಂಗ್ರೆಸ್ ಮುಖಂಡರು ಪ್ರಶ್ನಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಯತೀಶ್ ಆರ್ವಾರ್, ರಾಜಕೀಯ ಪಕ್ಷ ಬದಲಾವಣೆ ಹಾಗೂ ಟಿಕೆಟ್ ವಿಚಾರಗಳನ್ನು ಪ್ರಸ್ತಾಪಿಸಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

2013ರಲ್ಲಿ ಕಾಂಗ್ರೆಸ್ ಸೇರ್ಪಡೆ, 2023ರ ಚುನಾವಣೆಯ ಸಂದರ್ಭದಲ್ಲಿ ಪಕ್ಷ ಸೇರ್ಪಡೆಗೊಂಡು ಟಿಕೆಟ್ ಪಡೆದ ವಿಚಾರಗಳನ್ನು ಉಲ್ಲೇಖಿಸಿದ ಅವರು, ಬಿಜೆಪಿ ಕಾರ್ಯಕರ್ತರ ಅಸ್ತಿತ್ವದ ಬಗ್ಗೆ ಮಾತನಾಡುವ ಮೊದಲು ತಮ್ಮ ರಾಜಕೀಯ ಹಿನ್ನೆಲೆಯನ್ನು ಪರಿಶೀಲಿಸಿಕೊಳ್ಳಲಿ ಎಂದು ಟೀಕಿಸಿದರು. ಬಿಜೆಪಿ ಕಾರ್ಯಕರ್ತರು ಸ್ವಾಭಿಮಾನದಿಂದ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಯಾರದ್ದೋ ಪ್ರಭಾವ ಅಥವಾ ಬೆಂಬಲದಿಂದ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಬೇಕಾದ ಅಗತ್ಯವಿಲ್ಲ ಎಂದರು.

ಇದಲ್ಲದೆ, ಬೆಲ್ಟ್‌ನಲ್ಲಿರುವ ತೂತುಗಳ ಲೆಕ್ಕ, ಐಷಾರಾಮಿ ಕಾರುಗಳು ಹಾಗೂ ಸರಕಾರಿ ಅನುದಾನದ ವಿಚಾರಗಳನ್ನು ಪ್ರಸ್ತಾಪಿಸಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಪ್ರತಿಭಟನೆಗಳಿಗೆ ಪ್ರತಿಯಾಗಿ ವೈಯಕ್ತಿಕ ಟೀಕೆಗಳನ್ನು ನಡೆಸುವ ಬದಲು ಜನರ ಸಮಸ್ಯೆಗಳಿಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

32 ಸಾವಿರ ಕೋಟಿ ಬಿಡಿ 32 ಸಾವಿರ ರೂ. ಕೂಡ ಬಾರದು: ಬೂಡಿಯಾರ್ ರಾಧಾಕೃಷ್ಣ ರೈ ವ್ಯಂಗ್ಯ

ಮೊನ್ನೆಯಷ್ಟೇ ಸಿಎಂ ಡಿಕೆ ಶಿವಕುಮಾರ್ ಅವರು ಮಂಗಳೂರಿನಲ್ಲಿ ಅಧಿವೇಶನ ನಡೆಸಿದರು. ಅದರಲ್ಲಿ 32 ಸಾವಿರ ಕೋಟಿ ರೂ. ಅನುದಾನ ಘೋಷಣೆ ಮಾಡಿದ್ರು. ಆದರೆ, ವಾಸ್ತವದಲ್ಲಿ 32 ಸಾವಿರ ರೂಪಾಯಿ ಕೂಡ ಬರುವುದಿಲ್ಲ. ಯಾಕೆಂದರೆ, ಇಲ್ಲಿ ಘೋಷಣೆ ಮಾಡಿ ತೆರಳುವಾಗ ಅರ್ಥಿಕ ಇಲಾಖೆ ಅಧಿಕಾರಿಗಳು, ಹಾಗೆಲ್ಲ ಘೋಷಣೆ ಮಾಡಬೇಡಿ. ಖಜಾನೆಯಲ್ಲಿ ಹಣವಿಲ್ಲ ಎಂದು ಸಿಎಂಗೆ ತಿಳಿಸಿದ್ದಾರೆ. ವಾಸ್ತವದಲ್ಲಿ ಡಿಕೆ ಶಿವಕುಮಾರ್ ಅವರಿಗೆ ಅನುದಾನ ಇಡಲು ಮನಸ್ಸಿತ್ತು. ಕಾರಣ, ಉಳ್ಳಾಲದಿಂದ ಮರವಂತೆವರೆಗೆ ಖರೀದಿಸಿಟ್ಟ ಸಾಕಷ್ಟು ಜಾಗಗಳಿವೆಯಲ್ಲವೇ ಎಂದು ವ್ಯಂಗ್ಯವಾಡಿದರು.

ಅಮಾನತುಗೊಂಡ ಅಧಿಕಾರಿಗೆ ಮತ್ತೆ ಅದೇ ಹುದ್ದೆ ನೀಡಿದ್ದು ಶಾಸಕರ ಸಾಧನೆ

ಪಾದಯಾತ್ರೆಯ ಜಿಲ್ಲಾ ಸಹ ಸಂಚಾಲಕ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ಪುತ್ತೂರಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಿಂತ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಸಂಜೀವ ಮಠಂದೂರು ಅವರ ಅವಧಿಯಲ್ಲಿ ಆರ್ಯಾಪು ಮತ್ತು ಕುರಿಯ ಗ್ರಾಮಗಳ 67 ಕಡೆಗಳಿಗೆ ಅನುದಾನ ಒದಗಿಸಲಾಗಿತ್ತು. ಆದರೆ, ಕಾಮಗಾರಿಗಳಿಗಾಗಿ ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸಿರಲಿಲ್ಲ. ಈಗಿನ ಶಾಸಕರು ಕೆಲವೇ ಕಡೆಗಳಲ್ಲಿ ಕಾಮಗಾರಿ ನಡೆಸಿ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾನರ್‌ಗಳನ್ನು ಅಳವಡಿಸುತ್ತಿದ್ದಾರೆ ಎಂದು ದೂರಿದರು.

ಹಿಂದಿನ ಶಾಸಕರ ಅವಧಿಯಲ್ಲಿ ಜಾತಿ, ಧರ್ಮ ಹಾಗೂ ಪಕ್ಷಭೇದವಿಲ್ಲದೆ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಲಾಗಿತ್ತು. ಅಮಾನತುಗೊಂಡಿದ್ದ ಅಧಿಕಾರಿಯೊಬ್ಬರನ್ನು ಮತ್ತೆ ಅದೇ ಸ್ಥಾನಕ್ಕೆ ನೇಮಿಸಿರುವುದೇ ಈಗಿನ ಶಾಸಕರ ಸಾಧನೆಯಾಗಿದೆ ಎಂದು ಟೀಕಿಸಿದರು.

ಆರ್ಯಾಪು ಗ್ರಾಮಕ್ಕೆ ಬಿಜೆಪಿ ಅವಧಿಯಲ್ಲಿ ರೂ.24 ಕೋಟಿ ಅನುದಾನ: ಸಾಜ ರಾಧಾಕೃಷ್ಣ ಆಳ್ವ

ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಆರ್ಯಾಪು ಗ್ರಾಮಕ್ಕೆ ತಮ್ಮ ಅವಧಿಯಲ್ಲಿ ರೂ.6.50 ಕೋಟಿ ಅನುದಾನ ಒದಗಿಸಿರುವುದಾಗಿ ಶಾಸಕರು ಹೇಳಿಕೊಳ್ಳುತ್ತಿದ್ದಾರೆ. ಈ ಅನುದಾನದಲ್ಲಿ ಎಷ್ಟು ಹಣ ಬಿಡುಗಡೆಯಾಗಿದೆ ಮತ್ತು ಎಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ರಾಮ್ ಭಟ್ ಅವರ ಕಾಲದಿಂದ ಸಂಜೀವ ಮಠಂದೂರು ಅವರ ಅವಧಿಯವರೆಗೆ ವಿವಿಧ ಶಾಸಕರು ಗ್ರಾಮಗಳ ಅಭಿವೃದ್ಧಿಗೆ ಅನುದಾನ ಒದಗಿಸಿದ್ದಾರೆ. ವಿಶೇಷವಾಗಿ ಕೊರೊನಾ ಸಂಕಷ್ಟದ ಸಂದರ್ಭದಲ್ಲಿಯೂ ಸಂಜೀವ ಮಠಂದೂರು ಅವರ ಅವಧಿಯಲ್ಲಿ ಆರ್ಯಾಪು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಟ್ಟು ರೂ.24 ಕೋಟಿ ಅನುದಾನ ನೀಡಲಾಗಿತ್ತು. ಇದಕ್ಕೆ ಸಂಬಂಧಿಸಿದ ದಾಖಲೆಗಳು ತಮ್ಮಲ್ಲಿವೆ ಎಂದು ತಿಳಿಸಿದರು.

ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಘಟಕಗಳನ್ನು ಒದಗಿಸುವ ಕಾರ್ಯದಲ್ಲಿಯೂ ಸಂಜೀವ ಮಠಂದೂರು ಮುಂಚೂಣಿಯಲ್ಲಿದ್ದರು ಎಂದು ಹೇಳಿದರು. ಬಿಜೆಪಿ ನಾಯಕರ ವಿರುದ್ಧ ವೈಯಕ್ತಿಕ ಟೀಕೆ ನಡೆಸುತ್ತಿರುವ ಕಾಂಗ್ರೆಸ್ ಮುಖಂಡರಿಗೆ ಮುಂದಿನ ದಿನಗಳಲ್ಲಿ ಗ್ರಾಮಮಟ್ಟದಲ್ಲೇ ಉತ್ತರ ನೀಡಲಾಗುವುದು ಎಂದು ಎಚ್ಚರಿಸಿದರು.

ಸಭೆಯಲ್ಲಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಚಾಕೋಟೆ, ಉಪಾಧ್ಯಕ್ಷ ವಿದ್ಯಾಧರ ಜೈನ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯ ಬಿ.ಎಸ್. ಹಾಗೂ ಹಿರಿಯರಾದ ಜಿ.ಟಿ. ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು. ವಿರೂಪಾಕ್ಷ ಭಟ್ ಸ್ವಾಗತಿಸಿದರು. ಯುವ ಮೋರ್ಚಾದ ಉಪಾಧ್ಯಕ್ಷ ಪವನ್ ಶೆಟ್ಟಿ ಕಂಬಳತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಮೋಹನ್ ಕುಮಾರ್ ಅಮ್ಮುಂಜೆ ವಂದಿಸಿದರು.

ಸಂಪ್ಯದಿಂದ ಆರ್ಯಾಪುವರೆಗೆ ಪಾದಯಾತ್ರೆ

ಪ್ರತಿಭಟನಾ ಸಭೆಗೂ ಮುನ್ನ ಸಂಪ್ಯದಲ್ಲಿರುವ ಎ.ಪಿ. ರೈ ಅವರ ಮನೆಯ ಸಮೀಪದಿಂದ ಪಾದಯಾತ್ರೆ ಆರಂಭವಾಯಿತು. ಹಿರಿಯರಾದ ಎ.ಪಿ. ಸದಾಶಿವ ಅವರು ಶಕ್ತಿ ಕೇಂದ್ರದ ಉಸ್ತುವಾರಿಗಳಾದ ನವೀನ್ ಕುಮಾರ್ ಜಿ.ಟಿ. ಮತ್ತು ಮೋಹನ್ ಕುಮಾರ್ ಅವರಿಗೆ ಧ್ವಜ ಹಸ್ತಾಂತರಿಸಿ ಯಾತ್ರೆಗೆ ಚಾಲನೆ ನೀಡಿದರು.

ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಾಗಿದ ಪಾದಯಾತ್ರೆ ಆರ್ಯಾಪು ಗ್ರಾಮ ಪಂಚಾಯಿತಿ ಕಟ್ಟಡದ ಮುಂಭಾಗದಲ್ಲಿ ಮುಕ್ತಾಯಗೊಂಡಿತು. ಬಳಿಕ ಅಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಆರ್.ಸಿ. ನಾರಾಯಣ, ಮಂಡಲದ ಮಹಿಳಾ ಮೋರ್ಚಾದ ಅಧ್ಯಕ್ಷೆ ಯಶೋಧ ನರಿಮೊಗರು, ಉಪಾಧ್ಯಕ್ಷೆ ಜಯಲಕ್ಷ್ಮೀ ಶಗ್ರಿತ್ತಾಯ, ಗ್ರಾಮಾಂತರ ಮಂಡಲದ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್, ನಾಗೇಶ್ ಟಿ.ಎಸ್., ರೈತ ಮೋರ್ಚಾದ ಅಧ್ಯಕ್ಷ ಶರತ್‌ಚಂದ್ರ ಬೈಪಾಡಿತ್ತಾಯ, ಆರ್ಯಾಪು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ವಸಂತ ಶ್ರೀದುರ್ಗ, ಮಾಜಿ ಸದಸ್ಯರಾದ ಯತೀಶ್ ದೇವ, ಶ್ರೀನಿವಾಸ ರೈ, ಚೇತನ್ ಗೌಡ ದೇವಸ್ಯ, ಹರೀಶ್ ನಾಯಕ್ ವಾಗ್ಲೆ, ಸುಧಾಕರ ರಾವ್ ಆರ್ಯಾಪು, ಈಶ್ವರ ನಾಯ್ಕ ಎಂ.ಎಸ್., ನರಿಮೊಗರು ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಪ್ರವೀಣ್ ನಾಕ್ ಸೇರಾಜೆ, ವಸಂತ ಗೌಡ ಸೇರಾಜೆ, ಪಕ್ಷದ ಪ್ರಮುಖರಾದ ರವೀಂದ್ರನಾಥ ರೈ ಬಳ್ಳಮಜಲು, ಮಧು ನರಿಯೂರು, ಮಹೇಶ್ ರೈ ಕೇರಿ, ಸುರೇಶ್ ಆಳ್ವ, ವಿಶ್ವನಾಥ ಕುಲಾಲ್, ಗಣೇಶ್ ರೈ ಮೂಲೆ, ಧನುಷ್ ಹೊಸಮನೆ, ವಿಕ್ರಂ ಜೈನ್, ಜನಾರ್ದನ ಗೌಡ ಕೊಲ್ಯ, ಮಂಜಪ್ಪ ಗೌಡ ಬೈಲಾಡಿ, ಗಣೇಶ್ ಸಂಪ್ಯ, ದಿನೇಶ್, ರವಿನಾಥ ಗೌಡ ಬೈಲಾಡಿ, ನಾಗೇಶ್ ಸಂಪ್ಯ, ತಿಮ್ಮಪ್ಪ ಗೌಡ, ನಾರಾಯಣ ನಾಯ್ಕ ಗೆಣಸಿನಕುಮೇರು, ರತನ್ ರೈ ಕುಂಬ್ರ ಸೇರಿದಂತೆ ಹಲವು ಮಂದಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts