ಧಾರ್ಮಿಕ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ವಿರುದ್ಧ ವಿ.ಹಿಂ.ಪ. ಆರೋಪ; ಅಭಿವೃದ್ಧಿ ಸಮಿತಿ ವಿಸರ್ಜನೆಗೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯು ಭಕ್ತರ ಧಾರ್ಮಿಕ ಭಾವನೆ ಮತ್ತು ನಂಬಿಕೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಪುತ್ತೂರು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ.

gl

ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿ.ಹಿಂ.ಪ. ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ದೇವಸ್ಥಾನದ ಅಭಿವೃದ್ಧಿಗೆ ವಿಶ್ವ ಹಿಂದೂ ಪರಿಷತ್‌ನ ಬೆಂಬಲ ಸದಾ ಇರಲಿದೆ. ಆದರೆ ಹಿಂದೂಗಳ ಭಾವನೆ ಮತ್ತು ಶ್ರದ್ಧೆಗೆ ವಿರುದ್ಧವಾಗಿ ಅಭಿವೃದ್ಧಿ ಕಾರ್ಯಗಳು ನಡೆಯಬಾರದು ಎಂದು ಹೇಳಿದರು.

ಭಕ್ತರ ಸಾರ್ವಜನಿಕ ಸಭೆಯಲ್ಲಿ ಸಮಿತಿ ರಚನೆಗೆ ಆಗ್ರಹ

ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಸಮಿತಿಯನ್ನು ನಿಯಮಾನುಸಾರ ಭಕ್ತಾಧಿಗಳ ಸಾರ್ವಜನಿಕ ಸಭೆ ಕರೆದು, ಭಕ್ತರ ಸಮ್ಮುಖದಲ್ಲಿ ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ರಚಿಸಿಲ್ಲ ಎಂದು ವಿ.ಹಿಂ.ಪ. ಆರೋಪಿಸಿದೆ.

ಸ್ಥಳೀಯ ಶಾಸಕರ ಸ್ವಇಚ್ಛೆಯಂತೆ ಸಮಿತಿ ರಚಿಸಲಾಗಿದೆ ಎಂದು ಆರೋಪಿಸಿದ ಅವರು, ದೇವಸ್ಥಾನವು ಸಮಸ್ತ ಹಿಂದೂ ಸಮಾಜಕ್ಕೆ ಸೇರಿದ್ದಾಗಿದ್ದು, ಜೀರ್ಣೋದ್ಧಾರ ಸಮಿತಿಯಲ್ಲಿ ಹಿಂದೂ ಸಮಾಜದ ವಿವಿಧ ವರ್ಗಗಳ ಪ್ರಮುಖರನ್ನು ಒಳಗೊಳ್ಳಬೇಕಿತ್ತು ಎಂದರು.

ಪ್ರಸ್ತುತ ಸಮಿತಿಯನ್ನು ವಿಸರ್ಜಿಸಿ, ಸೀಮೆಯ ಭಕ್ತರನ್ನು ಒಳಗೊಂಡ ಸಾರ್ವಜನಿಕ ಸಭೆ ನಡೆಸಿ, ನಿಯಮಾನುಸಾರ ಹೊಸ ಜೀರ್ಣೋದ್ಧಾರ ಸಮಿತಿಯನ್ನು ರಚಿಸಬೇಕು ಎಂದು ಆಗ್ರಹಿಸಿದರು.

ನಾಗನಗುಡಿ, ಅಯ್ಯಪ್ಪಗುಡಿ, ನವಗ್ರಹ ಗುಡಿ ಧ್ವಂಸಕ್ಕೆ ಆಕ್ಷೇಪ

ದೇವಸ್ಥಾನದ ಮುಂಭಾಗದಲ್ಲಿದ್ದ ನಾಗನಗುಡಿ, ಅಯ್ಯಪ್ಪಗುಡಿ ಹಾಗೂ ನವಗ್ರಹ ಗುಡಿಗಳನ್ನು ಇಲಾಖೆಯ ಆಗಮ ಪಂಡಿತರ ಹಾಗೂ ಇಂಜಿನಿಯರ್‌ಗಳ ವರದಿ ಮತ್ತು ಇಲಾಖೆಯ ಅನುಮತಿ ಇಲ್ಲದೆ ಏಕಾಏಕಿ ಧ್ವಂಸಗೊಳಿಸಲಾಗಿದೆ ಎಂದು ಕೃಷ್ಣ ಪ್ರಸನ್ನ ಆರೋಪಿಸಿದರು.

ಹಲವು ವರ್ಷಗಳಿಂದ ಭಕ್ತಿಯಿಂದ ಆರಾಧಿಸಿಕೊಂಡು ಬಂದ ಅಯ್ಯಪ್ಪ ಸ್ವಾಮಿಗೆ ಸೂಕ್ತ ಪರ್ಯಾಯ ಗುಡಿ ನಿರ್ಮಿಸದೆ ಖಾಸಗಿ ಭಜನಾ ಮಂದಿರದಲ್ಲಿ ಇರಿಸಲಾಗಿದೆ. ಈ ಹಿಂದೆ ದಿನಕ್ಕೆ ಮೂರು ಹೊತ್ತು ಪೂಜೆ, ನೈವೇದ್ಯ ಸೇವೆ ನಡೆಯುತ್ತಿದ್ದ ಅಯ್ಯಪ್ಪ ಸ್ವಾಮಿಗೆ ಇದೀಗ ಅದೇ ರೀತಿಯ ನಿತ್ಯ ಸೇವೆ ನಡೆಯದಂತಾಗಿದೆ ಎಂದು ಅವರು ದೂರಿದರು.

ಅಪೂರ್ಣ ಪುಷ್ಕರಿಣಿಯಲ್ಲಿ ಕೆರೆ ಆಯನಕ್ಕೆ ವಿರೋಧ

ದೇವಸ್ಥಾನದ ಪವಿತ್ರ ಪುಷ್ಕರಿಣಿಯ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಜಾತ್ರೋತ್ಸವ ಸಂದರ್ಭದಲ್ಲಿ ಶ್ರೀ ದೇವರ ಕೆರೆ ಆಯನ ನಡೆಸುವುದು ಆಗಮ ಶಾಸ್ತ್ರಕ್ಕೆ ವಿರುದ್ಧವಾಗಿದೆ ಎಂದು ವಿ.ಹಿಂ.ಪ. ಆರೋಪಿಸಿದೆ.

ಕೆರೆಯ ಜೀರ್ಣೋದ್ಧಾರ ಕಾಮಗಾರಿಯನ್ನು ಪೂರ್ಣಗೊಳಿಸುವುದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಕರ್ತವ್ಯವಾಗಿದ್ದು, ಅಪೂರ್ಣ ಕಾಮಗಾರಿಯ ನಡುವೆಯೇ ಧಾರ್ಮಿಕ ಕಾರ್ಯಕ್ರಮ ನಡೆಸುವುದು ಭಕ್ತರ ಭಾವನೆಗಳಿಗೆ ಧಕ್ಕೆ ತರುವಂತದ್ದು ಎಂದು ಕೃಷ್ಣ ಪ್ರಸನ್ನ ಹೇಳಿದರು.

ಹೊಸ ರಸ್ತೆ ನಿರ್ಮಾಣಕ್ಕೂ ಆಕ್ಷೇಪ

ಸ್ಥಳೀಯ ಶಾಸಕರ ರಾಜಕೀಯ ಒತ್ತಡಕ್ಕೆ ಮಣಿದು ದೇವಸ್ಥಾನದ ಜಮೀನಿನಲ್ಲಿ ಭಕ್ತರ ಆಕ್ಷೇಪದ ನಡುವೆಯೂ ಹಾಗೂ ಇಲಾಖೆಯ ಅನುಮತಿಯಿಲ್ಲದೆ ಸುಮಾರು 30 ಮೀಟರ್ ಅಗಲ ಮತ್ತು ಒಂದು ಕಿಲೋಮೀಟರ್ ಉದ್ದದ ಸಾರ್ವಜನಿಕ ರಸ್ತೆ ನಿರ್ಮಿಸಲು ಮುಂದಾಗಲಾಗಿದೆ ಎಂದು ಅವರು ಆರೋಪಿಸಿದರು.

ದೇವಸ್ಥಾನಕ್ಕೆ ಈಗಾಗಲೇ ಹಲವು ಕಡೆಗಳಿಂದ ಸಂಪರ್ಕ ರಸ್ತೆಗಳಿದ್ದು, ಮತ್ತೊಂದು ಸಾರ್ವಜನಿಕ ರಸ್ತೆ ನಿರ್ಮಿಸುವುದರಿಂದ ದೇವಸ್ಥಾನದ ಹಿತಾಸಕ್ತಿಗೆ ಧಕ್ಕೆ ಉಂಟಾಗಲಿದೆ. ಹೊಸ ರಸ್ತೆ ನಿರ್ಮಾಣದ ಉದ್ದೇಶದಿಂದಲೇ ದೇವಸ್ಥಾನದ ಜಮೀನಿನಲ್ಲಿದ್ದ ವಿವಿಧ ಗುಡಿಗಳು, ನಟರಾಜ ವೇದಿಕೆ, ಅನ್ನಛತ್ರ ಹಾಗೂ ಪಾಕಶಾಲೆ ಸೇರಿದಂತೆ ಹಲವು ರಚನೆಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಕೃಷ್ಣ ಪ್ರಸನ್ನ ದೂರಿದರು.

ಅಗತ್ಯವಿದ್ದರೆ ಪ್ರತಿಭಟನೆ

ದೇವಸ್ಥಾನದ ಹಿತಾಸಕ್ತಿಗೆ ಧಕ್ಕೆಯಾಗುವ ರೀತಿಯಲ್ಲಿ ಆಡಳಿತ ಕಾರ್ಯನಿರ್ವಹಿಸಿದರೆ ಹಾಗೂ ಭಕ್ತರ ಧಾರ್ಮಿಕ ಭಾವನೆ ಮತ್ತು ನಂಬಿಕೆಗಳಿಗೆ ಧಕ್ಕೆ ಉಂಟಾದರೆ ವಿಶ್ವ ಹಿಂದೂ ಪರಿಷತ್ ಧ್ವನಿ ಎತ್ತಲಿದೆ ಎಂದು ಕೃಷ್ಣ ಪ್ರಸನ್ನ ಎಚ್ಚರಿಸಿದರು.

ಅಗತ್ಯವಿದ್ದರೆ ಹಿಂದೂ ಸಮಾಜವನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸಲೂ ಹಿಂಜರಿಯುವುದಿಲ್ಲ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿ.ಹಿಂ.ಪ. ಪುತ್ತೂರು ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಕೋಶಾಧಿಕಾರಿ ಮಾಧವ ಪೂಜಾರಿ, ಪುತ್ತೂರು ನಗರ ಸಹ ಸಂಯೋಜಕ ಚೇತನ್ ಹಾಗೂ ಪುತ್ತೂರು ಪ್ರಖಂಡ ಸೇವಾ ಪ್ರಮುಖ್ ಹರೀಶ್ ದೋಳ್ಪಾಡಿ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಅ.11ರಿಂದ ಅ.21ರವರೆಗೆ ಪುತ್ತೂರು ದಸರಾ–2026: ಶಾರದಾ ಭಜನಾ ಮಂದಿರದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ

ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ…