ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ‘ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ’ ಅಭಿಯಾನದಡಿ ಕಳೆದ ಐದು ವರ್ಷಗಳಲ್ಲಿ ತಾಲೂಕಿನ 32 ಗ್ರಾಮಗಳಲ್ಲಿ ಗ್ರಾಮ ಸಾಹಿತ್ಯ ಸಂಭ್ರಮ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, 6,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಾಹಿತ್ಯಿಕ ವೇದಿಕೆ ಕಲ್ಪಿಸಲಾಗಿದೆ.
ಅಭಿಯಾನದ ಸರಣಿ–22ರ ಕೊನೆಯ ಕಾರ್ಯಕ್ರಮ ಅ.2ರಂದು ಬಲ್ನಾಡಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜಿನ ಕೋಟ ಶಿವರಾಮ ಕಾರಂತ ಸಭಾಂಗಣದಲ್ಲಿ ನಡೆಯುವ ಮೂಲಕ ಐದು ವರ್ಷದ ಸಾಹಿತ್ಯ ಪಯಣಕ್ಕೆ ಸಾರ್ಥಕ ತೆರೆ ಎಳೆಯಲಾಯಿತು.
ಕವಿಗೋಷ್ಠಿ, ಕಥಾಗೋಷ್ಠಿ, ಪ್ರವಾಸ ಕಥನ, ‘ನನ್ನ ನೆಚ್ಚಿನ ಶಿಕ್ಷಕ/ಶಿಕ್ಷಕಿ’, ‘ನನ್ನ ಆಪ್ತಮಿತ್ರ’ ಸೇರಿದಂತೆ ವಿವಿಧ ಸಾಹಿತ್ಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆ ಅನಾವರಣಗೊಳಿಸಿದರು. ಈ ಅಭಿಯಾನದಲ್ಲಿ 133ಕ್ಕೂ ಅಧಿಕ ಶಾಲಾ-ಕಾಲೇಜುಗಳು ಪಾಲ್ಗೊಂಡಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 200ಕ್ಕೂ ಅಧಿಕ ಸಾಧಕರನ್ನು ಗುರುತಿಸಿ ಗೌರವಿಸಲಾಗಿದೆ.
ಬಲ್ನಾಡಿನಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಗ್ರಾಮದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 22 ಸಾಧಕರನ್ನು ಸನ್ಮಾನಿಸಲಾಯಿತು. ಜೊತೆಗೆ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ನಿಟ್ಟಿನಲ್ಲಿ ನಡೆದ ಈ ಅಭಿಯಾನವು ರಾಜ್ಯದಲ್ಲೇ ಅನುಕರಣೀಯ ಪ್ರಯತ್ನವೆಂಬ ಮೆಚ್ಚುಗೆಗೂ ಪಾತ್ರವಾಗಿದೆ.
ವಿದ್ಯಾರ್ಥಿಗಳನ್ನು ಸಾಹಿತ್ಯದತ್ತ ಸೆಳೆಯುವುದು ಹಾಗೂ ಪ್ರತಿಯೊಬ್ಬ ಮಗುವಿನಲ್ಲಿರುವ ಸೃಜನಶೀಲತೆಯನ್ನು ಗುರುತಿಸಿ ಬರವಣಿಗೆಗೆ ಅವಕಾಶ ಕಲ್ಪಿಸುವ ಉದ್ದೇಶದೊಂದಿಗೆ ನಡೆದ ‘ಗ್ರಾಮ ಸಾಹಿತ್ಯ ಸಂಭ್ರಮ’ವು 32 ಗ್ರಾಮಗಳ ಐದು ವರ್ಷದ ಸಾಹಿತ್ಯ ಪಯಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.























