ಪುತ್ತೂರು: ದರ್ಬೆಯ ಸಿಟಿ ಗುಡ್ಡೆ ಪ್ರದೇಶದಲ್ಲಿರುವ ಅಲ್ಪಸಂಖ್ಯಾತ ಸಾಮಾನ್ಯ ಸೇವಾ ಕೇಂದ್ರವನ್ನು ಯಥಾಸ್ಥಿತಿಯಲ್ಲಿ ಉಳಿಸಿ, ಶೀಘ್ರ ಉದ್ಘಾಟಿಸಿ ಅಲ್ಪಸಂಖ್ಯಾತ ಸಮುದಾಯದ ಸೇವೆಗೆ ಮುಕ್ತಗೊಳಿಸಬೇಕು. ಕಟ್ಟಡವನ್ನು ಬೇರೆ ಉದ್ದೇಶಕ್ಕೆ ಬಳಸಲು ಮುಂದಾದರೆ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಎಚ್ಚರಿಕೆ ನೀಡಿದೆ.
ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಅಧ್ಯಕ್ಷ ಟಿ.ಎ. ಸಹನವಾಜ್, ಬಿಜೆಪಿ ಸರಕಾರದ ಅವಧಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಮಂಜೂರು ಮಾಡಲಾಗಿದೆ ಎಂದು ಹೇಳಿದರು.
₹1.40 ಕೋಟಿ ವೆಚ್ಚದಲ್ಲಿ ನಿರ್ಮಾಣ
ಬಿಜೆಪಿ ಸರಕಾರದ ಅವಧಿಯಲ್ಲಿ ದರ್ಬೆಯ ಸಿಟಿಒ ರಸ್ತೆಯಲ್ಲಿ ಸುಮಾರು ₹1.40 ಕೋಟಿ ವೆಚ್ಚದಲ್ಲಿ 4 ಸಾವಿರ ಚದರ ಅಡಿ ವಿಸ್ತೀರ್ಣದ ಅಲ್ಪಸಂಖ್ಯಾತ ಸಾಮಾನ್ಯ ಸೇವಾ ಕೇಂದ್ರ ನಿರ್ಮಿಸಲಾಗಿದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿದ್ದ ವೇಳೆ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಉದ್ಘಾಟನೆ ಸಾಧ್ಯವಾಗಲಿಲ್ಲ. ಬಳಿಕವೂ ಕಟ್ಟಡವನ್ನು ಉದ್ಘಾಟಿಸಿ ಸೇವೆಗೆ ಬಳಸದೆ ಕಳೆದ ನಾಲ್ಕು ವರ್ಷಗಳಿಂದ ಪಾಳುಬಿದ್ದ ಸ್ಥಿತಿಯಲ್ಲಿದೆ ಎಂದು ಸಹನವಾಜ್ ಆರೋಪಿಸಿದರು.
ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ನಿರ್ಮಿಸಿರುವ ಕಟ್ಟಡವನ್ನು ಇದೀಗ ಬೇರೆ ಉದ್ದೇಶಕ್ಕೆ ಬಳಸಲು ಮುಂದಾಗಿರುವುದು ಸರಿಯಲ್ಲ. ಕಟ್ಟಡವನ್ನು ಅಲ್ಪಸಂಖ್ಯಾತ ಸಮುದಾಯದ ಸೇವೆಗಾಗಿಯೇ ಬಳಸಬೇಕು ಎಂದು ಅವರು ಒತ್ತಾಯಿಸಿದರು.
ಸೇವಾ ಕೇಂದ್ರವನ್ನು ಹಾಸ್ಟೆಲ್ ಆಗಿ ಪರಿವರ್ತಿಸಲು ವಿರೋಧ
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಮೊಹಮ್ಮದ್ ರಫೀಕ್ ದರ್ಬೆ ಮಾತನಾಡಿ, ಪುತ್ತೂರಿನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಅಗತ್ಯವಾದ ವ್ಯವಸ್ಥಿತ ಕಟ್ಟಡಗಳ ಕೊರತೆ ಇತ್ತು. ಬಿಜೆಪಿ ಸರಕಾರ ಎಲ್ಲ ಸಮುದಾಯಗಳಿಗೂ ಸಮಾನ ಹಕ್ಕು ಮತ್ತು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಮಂಜೂರು ಮಾಡಿದೆ ಎಂದರು.
ಮಾಜಿ ಶಾಸಕ ಸಂಜೀವ ಮಠಂದೂರು ಅವರ ಅವಧಿಯಲ್ಲಿ ಸುಮಾರು ₹2.50 ಕೋಟಿ ವೆಚ್ಚದಲ್ಲಿ 2020ರಲ್ಲಿ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆ ನಿರ್ಮಾಣಗೊಂಡಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳನ್ನು ಅಲ್ಪಸಂಖ್ಯಾತರಿಗೆ ತಲುಪಿಸುವ ಉದ್ದೇಶದಿಂದ ಸೇವಾ ಕೇಂದ್ರ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ ಬಾಲಕರ ಹಾಗೂ ಬಾಲಕಿಯರ ಹಾಸ್ಟೆಲ್ ನಿರ್ಮಿಸುವಲ್ಲಿ ವಿಫಲವಾಗಿರುವವರು ಬಿಜೆಪಿ ಸರಕಾರ ನಿರ್ಮಿಸಿದ ಸೇವಾ ಕೇಂದ್ರವನ್ನು ಹಾಸ್ಟೆಲ್ ಆಗಿ ಪರಿವರ್ತಿಸಲು ಮುಂದಾಗಿರುವುದು ಸರಿಯಲ್ಲ ಎಂದು ರಫೀಕ್ ದರ್ಬೆ ವಿರೋಧ ವ್ಯಕ್ತಪಡಿಸಿದರು.
“ಪುತ್ತೂರಿನ ಅಲ್ಪಸಂಖ್ಯಾತ ಸಮುದಾಯಕ್ಕೆ ಬಾಲಕರ ಮತ್ತು ಬಾಲಕಿಯರ ಎರಡು ಹಾಸ್ಟೆಲ್ ಕಟ್ಟಡ ಹಾಗೂ ಒಂದು ಸಮುದಾಯ ಭವನ ನಿರ್ಮಿಸಿ ತೋರಿಸಿ. ಬಿಜೆಪಿ ಸರಕಾರ ನಿರ್ಮಿಸಿದ ಕಟ್ಟಡದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬೇಡಿ” ಎಂದು ಅವರು ಸವಾಲು ಹಾಕಿದರು.
ದರ್ಬೆಯ ಸಿಟಿ ಗುಡ್ಡೆ ಪ್ರದೇಶದಲ್ಲಿ ಈಗಾಗಲೇ ವಾಣಿಜ್ಯ ತೆರಿಗೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ದರ್ಬೆ ಪುತ್ತೂರಿನ ಪ್ರಮುಖ ಪ್ರದೇಶವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಸೇವಾ ಕೇಂದ್ರವೂ ಇದೇ ಭಾಗದಲ್ಲಿರುವುದು ಸಮುದಾಯದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಸರಕಾರದ ವಿರುದ್ಧ ಆರೋಪ
ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಂಬಲಿಸುತ್ತಾ ಬಂದಿದ್ದರೂ, ಅವರ ಅಭಿವೃದ್ಧಿಗೆ ಅಗತ್ಯವಾದ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ಕಾಂಗ್ರೆಸ್ ಸರಕಾರ ವಿಫಲವಾಗಿದೆ ಎಂದು ರಫೀಕ್ ದರ್ಬೆ ಆರೋಪಿಸಿದರು.
“ನಾಲ್ಕು ವರ್ಷಗಳಲ್ಲಿ ಶಾಸಕರ ಕೊಡುಗೆ ಏನು?”
ಹಿರೇಬಂಡಾಡಿ ಪಂಚಾಯತ್ ಮಾಜಿ ಅಧ್ಯಕ್ಷ ಸೌಕತ್ ಆಲಿ ಮಾತನಾಡಿ, ಬಿಜೆಪಿ ಸರಕಾರ ನಿರ್ಮಿಸಿರುವ ಸೇವಾ ಕೇಂದ್ರದಿಂದ ಅಲ್ಪಸಂಖ್ಯಾತರು ಬಿಜೆಪಿ ಪರ ಒಲವು ತೋರಬಹುದು ಎಂಬ ಆತಂಕ ಕಾಂಗ್ರೆಸ್‌ಗೆ ಇದೆ ಎಂದು ಆರೋಪಿಸಿದರು.
“ಈಗಿನ ಶಾಸಕರ ನಾಲ್ಕು ವರ್ಷಗಳ ಕೊಡುಗೆ ಏನು?” ಎಂದು ಪ್ರಶ್ನಿಸಿದ ಅವರು, ಬಿಜೆಪಿ ಸರಕಾರ ನಿರ್ಮಿಸಿರುವ ಸೇವಾ ಕೇಂದ್ರವನ್ನು ಶೀಘ್ರ ಉದ್ಘಾಟಿಸಿ ಅಲ್ಪಸಂಖ್ಯಾತರ ಬಹುಪಯೋಗಕ್ಕೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು.
ಸೇವಾ ಕೇಂದ್ರವನ್ನು ಬೇರೆ ಉದ್ದೇಶಕ್ಕೆ ಬಳಸಲು ಮುಂದಾದರೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಸುಮ್ಮನಿರುವುದಿಲ್ಲ. ಅಗತ್ಯವಿದ್ದರೆ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫೆಡ್ರಿಕ್ ಪೌಲ್, ಉಪಾಧ್ಯಕ್ಷ ಅಸ್ಲರ್ ಮುಡಿಪು ಹಾಗೂ ಮಾಧ್ಯಮ ಪ್ರಮುಖ್ ರಾಜೇಶ್ ಬನ್ನೂರು ಉಪಸ್ಥಿತರಿದ್ದರು.























