tamanvi
ಶಿಕ್ಷಣ

ಬಪ್ಪಳಿಗೆಯ ಅಂಬಿಕಾ ಪ.ಪೂ. ಕಾಲೇಜಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್‌ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಶುಕ್ರವಾರ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸ್ಥೆಯ ಸಂಸ್ಕೃತ ಉಪನ್ಯಾಸಕಿ ಸಾವಿತ್ರಿ ಶಾಸ್ತ್ರಿ ಮಾತನಾಡಿ, ಶ್ರೀಕೃಷ್ಣನ ಜೀವನ ಹಾಗೂ ಭಗವದ್ಗೀತೆಯ ಸಂದೇಶಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ ಎಂದರು.

ಶ್ರೀಕೃಷ್ಣನು ಧರ್ಮ, ಸತ್ಯ, ಕರ್ತವ್ಯ, ಪ್ರೀತಿ, ಸ್ನೇಹ ಹಾಗೂ ಮಾನವೀಯ ಮೌಲ್ಯಗಳ ಪ್ರತೀಕವಾಗಿದ್ದಾನೆ. ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ, ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದೇ ಶ್ರೀಕೃಷ್ಣನ ಸಂದೇಶದ ಸಾರವಾಗಿದೆ. ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಅರಿತುಕೊಂಡು, ಹಿರಿಯರಿಂದ ದೊರೆಯುವ ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಭಗವದ್ಗೀತೆ ಸೇರಿದಂತೆ ಹಲವು ಅಮೂಲ್ಯ ಗ್ರಂಥಗಳು ಭಾರತೀಯ ಜೀವನದರ್ಶನವನ್ನು ವಿಶ್ವಕ್ಕೆ ಪರಿಚಯಿಸಿವೆ. ಇವುಗಳನ್ನು ಅರಿತುಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಹೆಮ್ಮೆ ಮೂಡುವುದರ ಜೊತೆಗೆ ನೈತಿಕ ಮೌಲ್ಯಗಳ ಬೆಳವಣಿಗೆಗೂ ಸಹಕಾರಿಯಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ ಮಾತನಾಡಿ, ಮಹಾಭಾರತದ ಯುದ್ಧಭೂಮಿಯಲ್ಲಿ ಅರ್ಜುನನಿಗೆ ಶ್ರೀಕೃಷ್ಣ ನೀಡಿದ ಉಪದೇಶವೇ ಭಗವದ್ಗೀತೆ. ಇದು ಕೇವಲ ಧಾರ್ಮಿಕ ಗ್ರಂಥವಲ್ಲ, ಮಾನವನು ಜೀವನವನ್ನು ಹೇಗೆ ನಡೆಸಬೇಕು ಎಂಬುದನ್ನು ತಿಳಿಸುವ ಶಾಶ್ವತ ಜೀವನದರ್ಶನವಾಗಿದೆ ಎಂದು ಹೇಳಿದರು.

ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಬಂಧು-ಬಳಗದವರ ವಿರುದ್ಧ ಹೋರಾಡಬೇಕಾದ ಪರಿಸ್ಥಿತಿಯಲ್ಲಿ ಅರ್ಜುನ ಧರ್ಮಸಂಕಟಕ್ಕೆ ಒಳಗಾದಾಗ, ಶ್ರೀಕೃಷ್ಣನು ಕರ್ತವ್ಯ, ಧರ್ಮ, ಆತ್ಮಜ್ಞಾನ, ಕರ್ಮ, ಭಕ್ತಿ, ಜ್ಞಾನ ಹಾಗೂ ಸಮತ್ವದ ಕುರಿತು ಉಪದೇಶ ನೀಡಿದನು. ಮನುಷ್ಯನು ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಹಾಗೂ ಕಾರ್ಯದ ಫಲದ ಬಗ್ಗೆ ಅತಿಯಾದ ಆಸಕ್ತಿ ಅಥವಾ ಚಿಂತೆಯನ್ನು ಹೊಂದಬಾರದು ಎಂಬ ಗೀತೆಯ ಸಂದೇಶ ಇಂದಿನ ಜೀವನದಲ್ಲಿಯೂ ಅತ್ಯಂತ ಪ್ರಸ್ತುತವಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ ಭಜನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿ ಭಕ್ತಿಗೀತೆಗಳನ್ನು ಹಾಡಿ ಶ್ರೀಕೃಷ್ಣನನ್ನು ಸ್ಮರಿಸಿದರು. ಭಜನೆಯ ನಿನಾದದಿಂದ ಕಾರ್ಯಕ್ರಮದ ವಾತಾವರಣ ಭಕ್ತಿಮಯವಾಗಿ ಮಾರ್ಪಟ್ಟಿತು.

ಅಷ್ಟಮಿ ಸಂಭ್ರಮದ ಅಂಗವಾಗಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಶೇಷವಾಗಿ ಮಡಕೆ ಹೊಡೆಯುವ ಆಟ ಎಲ್ಲರ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಗಣೇಶ್ ಪ್ರಸಾದ್ ಡಿ.ಎಸ್. ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಧಾತ್ರಿ ಹಾಗೂ ಸಿಂಚನಾ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಿದರು. ವಿದ್ಯಾರ್ಥಿ ಭೂಷಿತ್ ಸ್ವಾಗತ ಭಾಷಣ ಮಾಡಿದರು. ನಿದರ್ಶನ ಕಾರ್ಯಕ್ರಮ ನಿರೂಪಿಸಿದರು. ಶ್ರೀರಾಮ್ ಎಸ್.ಜೆ. ವಂದನಾರ್ಪಣೆ ಸಲ್ಲಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರಿನಲ್ಲಿ ಸಂಭ್ರಮದ 28ನೇ ವರ್ಷದ ‘ಶ್ರೀಕೃಷ್ಣಲೋಕ’ ;1,250ಕ್ಕೂ ಅಧಿಕ ಪುಟಾಣಿ ಕೃಷ್ಣ-ರಾಧೆಯರಿಂದ ವೈಭವದ ಶೋಭಾಯಾತ್ರೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಪರ್ಲಡ್ಕ ಶಿವಪೇಟೆಯ ವಿವೇಕಾನಂದ…