tamanvi
ಪ್ರಚಲಿತ

ಸಮುದ್ರ ಮಾತೆಗೆ ಕ್ಷೀರಾಭಿಷೇಕ; ಸಮೃದ್ಧ ಮೀನುಗಾರಿಕೆಗೆ ಪ್ರಾರ್ಥನೆ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಉದ್ಯಾವರ: ಸಮುದ್ರವನ್ನು ತಾಯಿಯಂತೆ ಆರಾಧಿಸುವ ಕರಾವಳಿಯ ಮೀನುಗಾರ ಸಮುದಾಯದ ಸಾಂಪ್ರದಾಯಿಕ ‘ಸಮುದ್ರ ಪೂಜೆ’ (ನಾರಾಯಳಿ ಪೂರ್ಣಿಮಾ) ಕಾರ್ಯಕ್ರಮವು ಉದ್ಯಾವರ ಮಟ್ಟು ಕೊಪ್ಪಳದ ಶ್ರೀರಾಮ ಭಜನಾ ಮಂದಿರದ ನೇತೃತ್ವದಲ್ಲಿ ಶ್ರದ್ಧಾ-ಭಕ್ತಿಯಿಂದ ನೆರವೇರಿತು.

ಸಾವಿರಾರು ವರ್ಷಗಳಿಂದ ಸಮುದ್ರವನ್ನೇ ಜೀವನಾಧಾರವಾಗಿಸಿಕೊಂಡಿರುವ ಕರಾವಳಿ ಜನರಿಗೆ ಸಮುದ್ರ ಕೇವಲ ಜಲರಾಶಿಯಲ್ಲ. ಬದುಕಿಗೆ ಆಧಾರವಾಗಿರುವ ಸಮುದ್ರವನ್ನು ತಾಯಿಯ ರೂಪದಲ್ಲಿ ಆರಾಧಿಸುವ ಸಂಪ್ರದಾಯದ ಭಾಗವಾಗಿ, ಶ್ರಾವಣ ಪೂರ್ಣಿಮೆಯ ಸಂದರ್ಭದಲ್ಲಿ ಮೀನುಗಾರಿಕೆ ಆರಂಭಿಸುವ ಮುನ್ನ ಸಮುದ್ರ ಪೂಜೆ ನೆರವೇರಿಸಲಾಗುತ್ತದೆ.

ಕಾರ್ಯಕ್ರಮದಲ್ಲಿ ಶ್ರೀರಾಮ ಭಕ್ತರು ಸಮುದ್ರ ಮಾತೆಗೆ ಹಾಲು, ಅರಶಿನ, ಕುಂಕುಮ, ತೆಂಗಿನಕಾಯಿ ಹಾಗೂ ಫಲ-ತಾಂಬೂಲಗಳನ್ನು ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವವರಿಗೆ ಯಾವುದೇ ಅಪಾಯ ಎದುರಾಗದಂತೆ, ನೈಸರ್ಗಿಕ ವಿಕೋಪಗಳಿಂದ ರಕ್ಷಣೆ ದೊರೆಯುವಂತೆ ಹಾಗೂ ಉತ್ತಮ ಮೀನುಗಾರಿಕೆ ಮೂಲಕ ಕುಟುಂಬಗಳ ಜೀವನ ಸುಗಮವಾಗಿ ಸಾಗುವಂತೆ ಪ್ರಾರ್ಥಿಸಲಾಯಿತು.

ಪ್ರಕೃತಿಯನ್ನೇ ದೈವಸ್ವರೂಪದಲ್ಲಿ ಕಂಡು ಗೌರವಿಸುವ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿ ನಡೆದ ಈ ಸಮುದ್ರ ಪೂಜೆಗೆ ಮಟ್ಟು ಕೊಪ್ಪಳದ ಕಡಲತೀರ ಸಾಕ್ಷಿಯಾಯಿತು.

ಪೂಜಾ ಕೈಂಕರ್ಯಗಳನ್ನು ಸೀತಾರಾಮ ಭಾಗವತ ತಂತ್ರಿಗಳು ವಿಧಿ-ವಿಧಾನಗಳೊಂದಿಗೆ ನೆರವೇರಿಸಿಕೊಟ್ಟರು. ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ರಾಜೇಶ್ ಡಿ. ಸುವರ್ಣ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂದಿರದ ಸರ್ವ ಸದಸ್ಯರು, ಭಜನಾ ಮಂಡಳಿ, ಮಹಿಳಾ ಮಂಡಳಿ, ಭಕ್ತ ಮಂಡಳಿ ಸೇರಿದಂತೆ ಊರು-ಪರಊರಿನ ನೂರಾರು ಭಕ್ತರು ಭಾಗವಹಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರು: ₹3 ಲಕ್ಷ ಮೌಲ್ಯದ ಚಿನ್ನ, ಹಣವಿದ್ದ ಪರ್ಸ್ ವಾರಸುದಾರರಿಗೆ ಹಸ್ತಾಂತರ; ಆಟೋ ಚಾಲಕನ ಪ್ರಾಮಾಣಿಕತೆಗೆ ಮೆಚ್ಚುಗೆ

ಪುತ್ತೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಕ್ಕ ಪರ್ಸ್‌ವೊಂದನ್ನು ಅದರ ವಾರಸುದಾರರನ್ನು…