ಪುತ್ತೂರು: ಪ್ರಸ್ತಾವಿತ ಬೆಂಗಳೂರು–ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಬಕ ಪುತ್ತೂರು ರೈಲ್ವೆ ನಿಲ್ದಾಣದಲ್ಲಿ ಅಧಿಕೃತ ನಿಲುಗಡೆ ನೀಡುವಂತೆ ಆಗ್ರಹಿಸಿ ಉಡುಪಿ–ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.
ರೈಲಿನ ಸಂಚಾರ ವೇಳಾಪಟ್ಟಿ ಹಾಗೂ ನಿಲ್ದಾಣಗಳನ್ನು ಅಂತಿಮಗೊಳಿಸುವ ಹಂತದಲ್ಲಿ ಕಬಕ ಪುತ್ತೂರು ನಿಲ್ದಾಣವನ್ನು ಸೇರ್ಪಡೆಗೊಳಿಸುವಂತೆ ಸಚಿವರ ಗಮನ ಸೆಳೆದಿರುವ ಅವರು, ಪುತ್ತೂರು ಸೇರಿದಂತೆ ಸುತ್ತಮುತ್ತಲಿನ ಸಾರ್ವಜನಿಕರು ಹಾಗೂ ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ್ದಾರೆ.
ನಾಲ್ಕು ತಾಲೂಕುಗಳ ಜನರಿಗೆ ಪ್ರಮುಖ ಸಂಪರ್ಕ ಕೊಂಡಿ
ಕಬಕ ಪುತ್ತೂರು ರೈಲ್ವೆ ನಿಲ್ದಾಣವು ಪುತ್ತೂರು ಮಾತ್ರವಲ್ಲದೆ ಸುಳ್ಯ, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನ ಬಹುತೇಕ ಭಾಗಗಳ ಜನರಿಗೆ ಪ್ರಮುಖ ಸಂಪರ್ಕ ಕೊಂಡಿಯಾಗಿದೆ ಎಂದು ಕಿಶೋರ್ ಕುಮಾರ್ ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಈ ಭಾಗದ ಐಟಿ ಉದ್ಯೋಗಿಗಳು, ವ್ಯಾಪಾರಸ್ಥರು, ಉದ್ಯಮಿಗಳು, ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಮತ್ತು ಖಾಸಗಿ ನೌಕರರು ಬೆಂಗಳೂರಿನೊಂದಿಗೆ ನಿರಂತರ ಸಂಪರ್ಕ ಹೊಂದಿದ್ದು, ವಂದೇ ಭಾರತ್ ರೈಲಿಗೆ ಕಬಕ ಪುತ್ತೂರು ನಿಲುಗಡೆ ನೀಡುವುದರಿಂದ ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.
ಪ್ರವಾಸೋದ್ಯಮ ಹಾಗೂ ರೈಲ್ವೆಗೆ ಆರ್ಥಿಕ ಲಾಭ
ಪುತ್ತೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ ಈ ಭಾಗದ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರಗಳಿಗೆ ಆಗಮಿಸುವ ಪ್ರವಾಸಿಗರಿಗೂ ರೈಲು ನಿಲುಗಡೆಯಿಂದ ಅನುಕೂಲವಾಗಲಿದೆ. ಬೆಂಗಳೂರಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ವಂದೇ ಭಾರತ್ ರೈಲಿಗೆ ಉತ್ತಮ ಪ್ರಯಾಣಿಕರ ದಟ್ಟಣೆ ದೊರೆಯಲಿದ್ದು, ಭಾರತೀಯ ರೈಲ್ವೆಗೂ ಆರ್ಥಿಕ ಲಾಭವಾಗಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
4,000ಕ್ಕೂ ಅಧಿಕ ಮಂದಿಯಿಂದ ಸಹಿ ಅಭಿಯಾನಕ್ಕೆ ಬೆಂಬಲ
ಕಬಕ ಪುತ್ತೂರಿನಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ ಆಗ್ರಹಿಸಿ ಇತ್ತೀಚೆಗೆ ಪುತ್ತೂರು–ಸುಬ್ರಹ್ಮಣ್ಯ ರೈಲು ಬಳಕೆದಾರರ ಸಮಿತಿ ಹಾಗೂ ಗ್ರಾಮೀಣ ಭಾಗದ ರೈಲು ಪ್ರಯಾಣಿಕರು ನಡೆಸಿದ ಆನ್‌ಲೈನ್ ಸಹಿ ಅಭಿಯಾನಕ್ಕೆ 4,000ಕ್ಕೂ ಅಧಿಕ ಮಂದಿ ಬೆಂಬಲ ಸೂಚಿಸಿದ್ದರು.
ಸಾರ್ವಜನಿಕರ ಈ ಬೇಡಿಕೆಗೆ ಸ್ಪಂದಿಸಿದ್ದ ಕಿಶೋರ್ ಕುಮಾರ್ ಪುತ್ತೂರು ಅವರು, ಬಳ್ಳಾರಿಯಲ್ಲಿದ್ದ ಸಂದರ್ಭದಲ್ಲಿಯೂ ರೈಲು ಪ್ರಯಾಣಿಕರು ಹಾಗೂ ಸಹಿ ಅಭಿಯಾನದ ತಂಡದೊಂದಿಗೆ ವರ್ಚುವಲ್ ಸಭೆ ನಡೆಸಿ, ಬೇಡಿಕೆಗೆ ಧ್ವನಿಯಾಗುವ ಭರವಸೆ ನೀಡಿದ್ದರು.
ಇದೀಗ ಕೇಂದ್ರ ರೈಲ್ವೆ ಸಚಿವರಿಗೆ ಅಧಿಕೃತವಾಗಿ ಮನವಿ ಸಲ್ಲಿಸುವ ಮೂಲಕ ಕಬಕ ಪುತ್ತೂರಿನಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ ಆಗ್ರಹಿಸಿದ್ದಾರೆ.
























