tamanvi
ಧಾರ್ಮಿಕ

ಪುತ್ತೂರಿನಲ್ಲಿ ವಿಶ್ವಕರ್ಮ ಜಯಂತಿ ಸಂಭ್ರಮ: ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ವಿಶ್ವಕರ್ಮ ಜಯಂತಿಯ ಅಂಗವಾಗಿ ವಿಶ್ವಕರ್ಮ ಯುವ ಸಮಾಜದ ಸಾರಥ್ಯದಲ್ಲಿ ಹಾಗೂ ವಿಶ್ವಬ್ರಾಹ್ಮಣ ಸೇವಾ ಸಂಘದ ಸಹಕಾರದೊಂದಿಗೆ ವಿಶ್ವಕರ್ಮ ಪೂಜೆ ಹಾಗೂ ವಿವಿಧ ಕಾರ್ಯಕ್ರಮಗಳು ಸೆ.17ರಂದು ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು.

ಬೆಳಗ್ಗೆ ಕೆ. ರಮೇಶ್ ಗೇರುಕಟ್ಟೆ ಅವರ ಆಚಾರ್ಯತ್ವದಲ್ಲಿ ವಿಶ್ವಕರ್ಮ ಹೋಮದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ವಿಶ್ವಕರ್ಮ ದೇವರ ಮೆರವಣಿಗೆ ನಡೆಯಿತು. ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಹಾಗೂ ಕಾಷ್ಠಶಿಲ್ಪಿ ನಾರಾಯಣ ಆಚಾರ್ಯ ಪರ್ಪುಂಜ ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮುಖ್ಯ ರಸ್ತೆಯ ಮೂಲಕ ಸಾಗಿದ ಮೆರವಣಿಗೆ ಬೊಳುವಾರು ವಿಶ್ವಕರ್ಮ ಸಭಾಭವನದ ಬಳಿ ಸಮಾಪನಗೊಂಡಿತು.

ಸಮಾಜದ ಒಗ್ಗಟ್ಟಿಗೆ ಕರೆ

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಚಿನ್ನದ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಆಚಾರ್ಯ ಹಲೆಜ್ಜಿ ಮಾತನಾಡಿ, ವಿಶ್ವಕರ್ಮ ದೇವರನ್ನು ವಿಶ್ವಕರ್ಮ ಸಮುದಾಯದವರಷ್ಟೇ ಅಲ್ಲದೆ ಇತರ ಸಮುದಾಯದವರೂ ಪೂಜಿಸುತ್ತಾರೆ. ಸಮಾಜದ ಕಾರ್ಯಕ್ರಮಗಳಿಗೆ ಆಮಂತ್ರಣಕ್ಕಾಗಿ ಕಾಯದೆ, ಅವು ತಮ್ಮದೇ ಕಾರ್ಯಕ್ರಮ ಎಂಬ ಭಾವನೆಯಿಂದ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಸರ್ಕಾರದ ಯೋಜನೆಗಳು ಹಾಗೂ ಸಾಮಾಜಿಕ ಜಾಲತಾಣಗಳ ಸದುಪಯೋಗ ಪಡೆದುಕೊಂಡು ಸಮುದಾಯದ ಏಳಿಗೆಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.

ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಶ್ರೀಧರ ಆಚಾರ್ಯ ಕೆ. ಮಾತನಾಡಿ, ವಿವಿಧ ಸಂಘ-ಸಂಸ್ಥೆಗಳ ಸಹಕಾರದಿಂದ ವಿಶ್ವಕರ್ಮ ದೇವರ ಮೆರವಣಿಗೆ ಯಶಸ್ವಿಯಾಗಿದೆ. ಕಾರ್ಯಕ್ರಮಕ್ಕೆ ಸಹಕರಿಸಿದ ದಾನಿಗಳು ಹಾಗೂ ಸಮಾಜ ಬಾಂಧವರ ಸೇವೆಯನ್ನು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ಕಳೆದ ಕೆಲ ವರ್ಷಗಳಿಂದ ವಿಶ್ವಕರ್ಮ ಪೂಜೆಯ ಜೊತೆಗೆ ವಿಶ್ವಕರ್ಮ ದೇವರ ಮೆರವಣಿಗೆಯನ್ನೂ ನಡೆಸಿಕೊಂಡು ಬರುತ್ತಿದ್ದು, ಸಮಾಜ ಬಾಂಧವರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.

ಸಾಧಕ ವಿದ್ಯಾರ್ಥಿಗಳಿಗೆ ಗೌರವ

ಕಾರ್ಯಕ್ರಮದ ಅಂಗವಾಗಿ ದಿವ್ಯಾಂಗಚೇತನ ವಿದ್ಯಾರ್ಥಿಗಳಿಗೆ ವಿಶೇಷ ಪುರಸ್ಕಾರ ನೀಡಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪ್ರಥಮ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿಶ್ವಕರ್ಮ ಯುವ ಸಮಾಜಕ್ಕೆ ಹೊಸದಾಗಿ ಸದಸ್ಯರಾದವರನ್ನು ಅಧ್ಯಕ್ಷ ಪ್ರಕಾಶ್ ಆಚಾರ್ಯ ಶಾಲು ಹಾಕಿ ಸ್ವಾಗತಿಸಿದರು.

ವಿಶ್ವಕರ್ಮ ದೇವರ ಮೆರವಣಿಗೆಯಲ್ಲಿ ಪಾಲ್ಗೊಂಡ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರನ್ನೂ ಗೌರವಿಸಲಾಯಿತು.

ಶಿಕ್ಷಣದೊಂದಿಗೆ ಕೌಶಲ್ಯ, ಸಂಸ್ಕಾರಕ್ಕೆ ಒತ್ತು

ಅಪರಾಹ್ನ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸವಣೂರು ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಲತಾ ಕಿಶನ್ ಮಾತನಾಡಿ, ಪ್ರಸ್ತುತ ಯಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳು ಜ್ಞಾನದ ಜೊತೆಗೆ ಕೌಶಲ್ಯವನ್ನೂ ಬೆಳೆಸಿಕೊಳ್ಳಬೇಕು. ಶಿಕ್ಷಣದ ಮಹತ್ವವನ್ನು ಅರಿತು ವಿದ್ಯಾಭ್ಯಾಸ ಮಾಡಿದರೆ ಉನ್ನತ ಸ್ಥಾನಮಾನ ಪಡೆಯಲು ಸಾಧ್ಯವಾಗುತ್ತದೆ. ಶಿಕ್ಷಣದೊಂದಿಗೆ ಸಂಸ್ಕಾರವನ್ನೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಶ್ರೀಧರ ಆಚಾರ್ಯ ಮಾತನಾಡಿ, ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ವಿನಯ ಮತ್ತು ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪುರೋಹಿತ್ ರಮೇಶ್ ಆಚಾರ್ಯ ಗೇರುಕಟ್ಟೆ ಪ್ರಾರ್ಥಿಸಿದರು. ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಪ್ರಕಾಶ್ ಆಚಾರ್ಯ ಸ್ವಾಗತಿಸಿದರು. ದೀಕ್ಷಿತ್ ಆಚಾರ್ಯ ಅತಿಥಿಗಳ ಪರಿಚಯ ಮಾಡಿದರು. ಗೋಪಾಲ ಆಚಾರ್ಯ ವಂದಿಸಿದರು. ವಿಶ್ವಬ್ರಾಹ್ಮಣ ಸೇವಾ ಸಂಘದ ಕಾರ್ಯದರ್ಶಿ ಆನಂದ ಆಚಾರ್ಯ ಅಜ್ಜಿನಡ್ಕ ಹಾಗೂ ವಿಶ್ವಕರ್ಮ ಮಹಿಳಾ ಮಂಡಳಿಯ ಅಧ್ಯಕ್ಷೆ ಶಾಂತಿ ಸತೀಶ್ ಕಾರ್ಯಕ್ರಮ ನಿರೂಪಿಸಿದರು.

ಮಹಿಳಾ ಮಂಡಳಿ ಸದಸ್ಯೆ ಸುನೀತಾ ಅಶೋಕ್ ಆಚಾರ್ಯ ಪ್ರಾರ್ಥಿಸಿದರು. ವಿಶ್ವಬ್ರಾಹ್ಮಣ ಸೇವಾ ಸಂಘದ ಉಪಾಧ್ಯಕ್ಷ ಭುಜಂಗ ಆಚಾರ್ಯ ಸ್ವಾಗತಿಸಿದರು. ನಿಕಟಪೂರ್ವ ಅಧ್ಯಕ್ಷ ಜಗದೀಶ್ ಎಸ್.ಎನ್. ಪ್ರಸ್ತಾವನೆಗೈದರು. ಉಷಾ ಸದಾನಂದ ಆಚಾರ್ಯ ಹಾಗೂ ಸುಜಾತ ಕಾರ್ಯಕ್ರಮ ನಿರೂಪಿಸಿದರು. ಶಾಂತಿ ಸತೀಶ್ ವಂದಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts