ಪುತ್ತೂರು: ಶಾಲಾ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಚೇರಿ ದಕ್ಷಿಣ ಕನ್ನಡ ಹಾಗೂ ವಿಠಲ ಜೆಸಿಸ್ ಪ್ರೌಢಶಾಲೆ, ವಿಟ್ಲ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪುತ್ತೂರು ನಗರ ವಲಯ ಮಟ್ಟದ 17ರ ವಯೋಮಾನದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಶಾಲೆ, ದರ್ಬೆ ಪುತ್ತೂರು ಇಲ್ಲಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.
17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಬೆಥನಿ ಶಾಲೆಯ ವಿದ್ಯಾರ್ಥಿನಿಯರು ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಜುಏನಾ ಡ್ಯಾಝಲ್ ಕುಟಿನ್ಹ, ಸನ್ನಿಧಿ, ಹಾರ್ದಿಕ ಪಿ., ಜೆನಿಟ ಸಿಂಧು ಪ್ರಸನ್ನ, ಧನ್ಯಶ್ರೀ, ಜನನಿ ಪಿ. ಗೌಡ, ಆಯಿಷತ್ ಶಹೀಮ, ಫಾತಿಮತ್ ಅಫ್ರಾ ಹಾಗೂ ಹೆಚ್. ನಮೃತಾ ಶೆಟ್ಟಿ ತಂಡದ ಪರವಾಗಿ ಉತ್ತಮ ಆಟ ಪ್ರದರ್ಶಿಸಿದರು.
ತಂಡದ ಜುಏನಾ ಡ್ಯಾಝಲ್ ಕುಟಿನ್ಹಾ ಅವರು ಸವ್ಯಸಾಚಿ ಆಟಗಾರ್ತಿ ಪ್ರಶಸ್ತಿ ಪಡೆದರೆ, ಸನ್ನಿಧಿ ಅವರು ಉತ್ತಮ ಹಿಡಿತಗಾರ್ತಿ ವೈಯಕ್ತಿಕ ಪ್ರಶಸ್ತಿಗೆ ಪಾತ್ರರಾದರು.
ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಅನಿತಾ ಟ್ರೆಸ್ಸಿ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ರಾಷ್ಟ್ರೀಯ ಕಬಡ್ಡಿ ತರಬೇತುದಾರ ಬಾಲಕೃಷ್ಣ ರೈ ಪೊರ್ದಾಲ್ ಅವರು ವಿದ್ಯಾರ್ಥಿನಿಯರಿಗೆ ತರಬೇತಿ ನೀಡಿದ್ದಾರೆ.
ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ, ಸಿಬ್ಬಂದಿ ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.






















