ಸುಳ್ಯ: ಕುಡಿಯುವ ನೀರಿನ ಪೈಪ್ ಕಾಮಗಾರಿ ನಡೆಯುತ್ತಿದ್ದ ವೇಳೆ ಪಾದಚಾರಿ ಮಾರ್ಗದ ಚರಂಡಿಗೆ ಆಕಸ್ಮಿಕವಾಗಿ ಬಿದ್ದ ಮಗು ಸ್ಥಳೀಯರ ಸಮಯಪ್ರಜ್ಞೆಯಿಂದ ಅಪಾಯದಿಂದ ಪಾರಾದ ಘಟನೆ ಸುಳ್ಯ ಪಟ್ಟಣದ ಶ್ರೀರಾಮ ಪೇಟೆಯಲ್ಲಿ ನಡೆದಿದೆ.
ಶ್ರೀರಾಮ ಪೇಟೆಯ ಮುಳಿಯ ಜ್ಯುವೆಲ್ಲರ್ಸ್ ಎದುರು ರಸ್ತೆ ಬದಿಯಲ್ಲಿ ಜೆಸಿಬಿ ಮೂಲಕ ಕುಡಿಯುವ ನೀರಿನ ಪೈಪ್ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಪಾದಚಾರಿ ಮಾರ್ಗದಲ್ಲಿದ್ದ ಚರಂಡಿಯ ಸ್ಲ್ಯಾಬ್ ತೆರವುಗೊಳಿಸಲಾಗಿತ್ತು.
ಮಗು ತನ್ನ ಮನೆಯವರೊಂದಿಗೆ ನಡೆದುಕೊಂಡು ಬರುತ್ತಿದ್ದ ಸಂದರ್ಭ ಕಾಮಗಾರಿ ನಡೆಯುತ್ತಿದ್ದ ಸ್ಥಳವನ್ನು ವೀಕ್ಷಿಸುತ್ತಾ ಮುಂದೆ ಬಂದಿದ್ದು, ಸ್ಲ್ಯಾಬ್ ತೆರವುಗೊಳಿಸಿದ್ದ ಚರಂಡಿಯೊಳಗೆ ಆಕಸ್ಮಿಕವಾಗಿ ಬಿದ್ದಿದೆ.
ಘಟನೆಯನ್ನು ಗಮನಿಸಿದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಮಗುವನ್ನು ಚರಂಡಿಯಿಂದ ಮೇಲಕ್ಕೆತ್ತಿದ್ದಾರೆ. ಅದೃಷ್ಟವಶಾತ್ ಮಗು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದೆ.
ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಂಡು, ಸಾರ್ವಜನಿಕರಿಗೆ ಅಪಾಯವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

























