ಪುತ್ತೂರು: ರಸ್ತೆ ದುರಸ್ತಿಗೆ ಆಗ್ರಹಿಸಿ ನೀಡಿದ ಮನವಿಗೆ ಸ್ಪಂದಿಸಿ ನೀಡಿದ ಭರವಸೆಯನ್ನು ಈಡೇರಿಸದೇ ಇರುವುದನ್ನು ಪ್ರತಿಭಟಿಸಿ ಜುಲೈ 30ರಂದು ನರಿಮೊಗರು ಗ್ರಾಮ ಪಂಚಾಯತ್ ಮುಂಭಾಗ ಪುತ್ತಿಲ ಪರಿವಾರದ ನೇತೃತ್ವದಲ್ಲಿ ಸಾರ್ವಜನಿಕ ಪ್ರತಿಭಟನೆ ನಡೆಯಲಿದೆ.
ನರಿಮೊಗರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪುರುಷರಕಟ್ಟೆ-ಶಾಂತಿಗೋಡು ರಸ್ತೆಯಲ್ಲಿ ಮಾಯಂಗಲದಿಂದ ಕೂಡುರಸ್ತೆಯವರೆಗೆ ಮಾರ್ಗವು ಬಹಳ ಹದಗೆಟ್ಟಿದ್ದು, ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು, ಹಾಗೂ ವಾಹನ ಸವಾರರು ಪ್ರತಿನಿತ್ಯ ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ರಸ್ತೆಯಲ್ಲಿ ಗುಂಡಿಗಳು ಉಂಟಾಗಿ ಅಪಘಾತ ಸಂಭವಿಸುತ್ತಿದ್ದು ಜುಲೈ 23ರಂದು ಈ ಬಗ್ಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರಿಗೆ ಮನವಿ ನೀಡಲಾಗಿತ್ತು. ಮನವಿಗೆ ಸ್ಪಂದಿಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗುತ್ತಿಗೆದಾರರ ಜೊತೆ ಸ್ಥಳಕ್ಕೆ ಬಂದು ಶನಿವಾರದೊಳಗೆ ತಾತ್ಕಾಲಿಕ ರಸ್ತೆ ರಿಪೇರಿ ಮಾಡಿ ವಾಹನ ಸಂಚಾರಕ್ಕೆ ಯೋಗ್ಯವಾಗಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಭರವಸೆಯಂತೆ ಕಾಮಗಾರಿ ನಡೆಸದೆ ರಸ್ತೆ ಬಳಕೆದಾರರಿಗೆ ತೊಂದರೆ ಉಂಟಾಗಿರುತ್ತದೆ.
ಜುಲೈ 27ರಂದು ರಸ್ತೆ ತಡೆ ಮಾಡಿ ಯೋಗ್ಯ ರಸ್ತೆ ನಿರ್ಮಣ ಮಾಡಲು ಪ್ರತಿಭಟನೆ ನಡೆಸಿದಾಗ ಇಲಾಖೆಯ ಪರವಾಗಿ ಪಂಚಾಯತ್ ಕಾರ್ಯದರ್ಶಿ ಕಲಾಂದರ್ ಅವರು ಸ್ಥಳಕ್ಕೆ ಆಗಮಿಸಿ ಮೇಲಾಧಿಕಾರಿಗಳ ಮನವಿಯಂತೆ ಎರಡು ದಿನದ ಕಾಲಾವಕಾಶವನ್ನು ಕೇಳಿದ್ದರು. ಜುಲೈ 29ರೊಳಗೆ ಮನವಿಗೆ ಸ್ಪಂದಿಸದೇ ಇದ್ದಲ್ಲಿ, ಜುಲೈ 30ರಂದು ಪ್ರತಿಭಟನೆ ನಡೆಸುವುದಾಗಿ ತಿಳಿಸಲಾಗಿತ್ತು. ಅದರಂತೆ ಇದೀಗ ನರಿಮೊಗರು ಗ್ರಾಪಂ ಮುಂಭಾಗ ಸಾರ್ವಜನಿಕರ ಜೊತೆ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
























