ಪುತ್ತೂರು: ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಆಶ್ರಯದಲ್ಲಿ ಬುಧವಾರ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ನಿವೃತ್ತ ಸೈನಿಕ ಸುಂದರ ಗೌಡ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಜಿ.ಎಲ್. ಸಭಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಕಾನ ಸ್ವೀಕರಿಸಿ ಮಾತನಾಡಿದ ಸುಂದರ ಗೌಡ ಅವರು, ಭಾರತ ಶಾಂತಿ ಬಯಸುವ ದೇಶ. ಇದರ ಭಾಗವಾಗಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನಕ್ಕೆ ಬಸ್ ಸಂಪರ್ಕ ಕಲ್ಪಿಸುವ ಬಗ್ಗೆ ಪಾಕ್ ಜೊತೆ ಮಾತುಕತೆ ನಡೆಸುತ್ತಿದ್ದರು. ಆದರೆ ಇನ್ನೊಂದೆಡೆ ಪಾಕಿಸ್ತಾನ ಕಾರ್ಗಿಲ್ ಯುದ್ಧಕ್ಕೆ ಮುನ್ನುಡಿ ಬರೆದಿತ್ತು. ಮಾತುಕತೆ ನಡೆಸುತ್ತಲೇ ಬೆನ್ನಿಗೆ ಇರಿಯುವ ಕೆಲಸ ಮಾಡಿತ್ತು ಎಂದರು.
ಗಡಿಯಲ್ಲಿ ಕೆಲಸ ಮಾಡಿದ ಹೆಮ್ಮೆ
ಪಾಕಿಸ್ತಾನದ ಸೈನಿಕರದ್ದೇ ಕೃತ್ಯ ಇದೆಂದು ಖಾತ್ರಿ ಪಡಿಸಿದ್ದ ಭಾರತ ಸರಕಾರ ಯುದ್ಧ ಆರಂಭಿಸಿತು. ಆ ಯುದ್ಧದಲ್ಲಿ 527 ಸೈನಿಕರನ್ನು ನಾವು ಕಳೆದುಕೊಂಡಿದ್ದೇವೆ. ಆಗ ನಮ್ಮನ್ನು ಶ್ರೀನಗರ – ಲೇಹ್ ನಡುವಿನ ಸಂಪರ್ಕ ರಸ್ತೆಯನ್ನು ವಶಪಡಿಸಿಕೊಳ್ಳಲು ಹವಣಿಸುತ್ತಿದ್ದ ಶತ್ರು ದೇಶವನ್ನು ಹಿಮ್ಮೆಟ್ಟಿಸುವ ಜವಾಬ್ದಾರಿ ನಮ್ಮ ತಂಡಕ್ಕೆ ನೀಡಲಾಗಿತ್ತು. ಆದರೆ ನಮಗೆ ಯುದ್ಧ ಮಾಡುವ ಪರಿಸ್ಥಿತಿ ಎದುರಾಗಿಲ್ಲ. ಸುಮಾರು ಆರು ತಿಂಗಳ ಕಾಲ ನಾವು ಗಡಿಯಲ್ಲಿದ್ದೇವು. ಮುಂದೆ ಕಾರ್ಗಿಲ್ ಯುದ್ಧದಲ್ಲಿ ನಾವು ಜಯ ಗಳಿಸಿದೆವು ಎಂದು ಹರ್ಷ ವ್ಯಕ್ತಪಡಿಸಿದರು.
ಸೈನ್ಯಕ್ಕೆ ಸೇರಲು ಪ್ರೋತ್ಸಾಹಿಸಿ
ಆ ನಂತರವೂ ಹಲವು ಆಪರೇಷನ್ ಗಳನ್ನು ಭಾರತ ಕೈಗೊಂಡಿದೆ. ಅದರಲ್ಲಿ ಪ್ರಮುಖವಾದದ್ದು ಆಪರೇಷನ್ ಸಿಂಧೂರ್. ಈಗಿನ ಸರಕಾರ ಅಗ್ನಿವೀರ್ ಯೋಜನೆಯನ್ನು ತಂದಿದ್ದು, ಯುವಕರಿಗೆ ಮಹತ್ವಪೂರ್ಣವಾದ ಯೋಜನೆ ಇದು. ಹಾಗಾಗಿ ಯುವಕರು ಸೈನ್ಯಕ್ಕೆ ಸೇರಲು ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಇದರೊಂದಿಗೆ ದೇಶದೊಳಗೂ ಕಾನೂನಿನ ಪಾಲನೆ ಮಾಡುವ ಮೂಲಕ ದೇಶ ಸೇವೆಯಲ್ಲಿ ಪ್ರತಿಯೋರ್ವರು ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸ್ವಂತಿಕೆಯಿಂದ ದೇಶ ಕಟ್ಟಿ: ಶ್ರೀಧರ್
ಕ್ಲಬ್ ಸಭಾಪತಿ ಶ್ರೀಧರ್ ಆಚಾರ್ಯ ಮಾತನಾಡಿ, ಭಾರತದಲ್ಲಿ ಸೈನ್ಯದ ಬಗೆಗಿನ ಸಾಕಷ್ಟು ಸಾಹಸಗಾಥೆಯನ್ನು ಕೇಳಿದ್ದೇವೆ. ಪಕ್ಕದ ದೇಶಗಳಲ್ಲಿ ಸೇನೆ ದಂಗೆ ಎದ್ದ ವರದಿಯನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಭಾರತದಲ್ಲಿ ಸೈನ್ಯ ರಕ್ಷಣೆಯ ವಿಚಾರದಲ್ಲಿ ಸಾಕಷ್ಟು ಕೆಲಸ ಮಾಡಿರುವುದನ್ನು ಮಾತ್ರ ನಾವು ಕೇಳಿದ್ದೇವೆ. ಹಾಗಾಗಿ ನಮ್ಮ ಸೈನ್ಯ, ನಮ್ಮ ಹೆಮ್ಮೆ ಎಂದ ಅವರು, ದೇಶದೊಳಗಿನ ರಕ್ಷಣೆಗೂ ಯುವಕರು ಮುಂದಾಗಬೇಕು. ಪ್ರಚೋದನೆಯ ಮಾತಿಗೆ ಬೆಲೆ ಕೊಡದೇ, ನಮ್ಮದೇ ಸ್ವಂತಿಕೆಯಿಂದ ದೇಶ ಕಟ್ಟುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಕರೆಕೊಟ್ಟರು.
ಸಾಮಾಜಿಕ ಕಾರ್ಯವೂ ದೇಶ ಸೇವೆಯೇ: ಎಡ್ವರ್ಡ್
ಝಡ್.ಆರ್.ಆರ್ ಎಡ್ವರ್ಡ್ ಡಿಸೋಜಾ ಮಾತನಾಡಿ, ಕ್ಲಬ್ಬಿನಲ್ಲಿ ನಾಲ್ಕು ಸೇವಾ ವಿಭಾಗಗಳಲ್ಲಿ ಸೇವಾ ಕಾರ್ಯವನ್ನು ಮಾಡುತ್ತಿದ್ದೇವೆ. ಇದು ಕೂಡ ದೇಶ ಸೇವೆ. ಹಾಗೆಯೇ ಸೈನ್ಯಕ್ಕೆ ಸೇರಲು ಯುವಕರಿಗೆ ಪ್ರೋತ್ಸಾಹ ಅಗತ್ಯ ಎಂದರು.
ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಐಪಿಪಿ ವಿನೀತ್ ಶುಭಹಾರೈಸಿದರು. ಪುತ್ತೂರು ರೋಟರಿ ಕ್ಲಬ್ ಮಾಜಿ ಕಾರ್ಯದರ್ಶಿ ಶ್ರೀಧರ್ ಗೌಡ ಕಣಜಾಲು ಉಪಸ್ಥಿತರಿದ್ದರು.
ಇದೇ ಸಂದರ್ಭ ವಿಶಾಲ್ ಅವರು ರಾಷ್ಟ್ರಗೀತೆಯ ಬಗ್ಗೆ ವಿವರಿಸಿದರು.
ಶಶಿಧರ್ ಮಾವಿನಕಟ್ಟೆ ಅತಿಥಿ ಪರಿಚಯವನ್ನು ಸಭೆಯ ಮುಂದಿಟ್ಟರು. ಕಾರ್ಯದರ್ಶಿ ಸುಕನ್ಯಾ ಕಡ್ಯ ವಂದಿಸಿದರು.
























