ಪುತ್ತೂರು: ರಜತ ಮಹೋತ್ಸವದ ಸಂಭ್ರಮದಲ್ಲಿರುವ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 21ನೇ ಶಾಖೆ ನೆಹರುನಗರದ ಕಲ್ಲೇಗ ಅಶ್ವಿನ್ ಕಾಂಪ್ಲೆಕ್ಸ್’ನಲ್ಲಿ ಸೋಮವಾರ ಸಂಜೆ ಶುಭಾರಂಭಗೊಂಡಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಡಾ. ಪ್ರಭಾಕರ ಭಟ್ ಮಾತನಾಡಿ, ಅದ್ವಿತಿಯ ಸಾಧನೆ ಮಾಡಿದ ಸರಸ್ವತಿ ಸಹಕಾರಿಯ 21ನೇ ಶಾಖೆ. ಸಹಕಾರಿ ರಂಗ ಇಂದು ಬಹಳ ದೊಡ್ಡ ಅಭಿವೃದ್ಧಿ ಕಡೆ ಸಾಗ್ತಾ ಇದೆ. ಅಮಿತ್ ಶಾ ಬಹಳ ಒತ್ತು ನೀಡ್ತಾ ಇದ್ದಾರೆ. ಕೃಷಿಕರಿಗೆ ಪ್ರತ್ಯೇಕ ಸಹಕಾರಿ ಇದೆ. ಉಳಿದಂತೆ ತಮ್ಮ ದೈನಂದಿನ ಚಟುವಟಿಕೆಗೆ ಇಂತಹ ಸಂಸ್ಥೆ ಬೇಕು. ಮಾತ್ರವಲ್ಲ ಜನಸಾಮಾನ್ಯರ ಜೊತೆಗೆ ಇದು ನಿಂತುಕೊಂಡಿದೆ. ಬ್ಯಾಂಕಿಗಿಂತ ಸುಲಭ ವ್ಯವಹಾರ ಇಲ್ಲಿ ಸಾಧ್ಯ. ಬ್ಯಾಂಕಿನಂತೆ ಬಚ್ಚಿಸುವುದಿಲ್ಲ; ಬೆಳಗಿಸ್ತಾರೆ ಎಂದರು.
ಸತೀಶ್ಚಂದ್ರ ಅವರು ಕೈ ಹಾಕಿದ ಎಲ್ಲಾ ಕೆಲಸಗಳು ಯಶಸ್ವಿಯಾಗಿದೆ. ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವುದರಿಂದ ಸಂಸ್ಥೆ ಬೆಳೀತಾ ಇದೆ. ಇಲ್ಲಿ ಗ್ರಾಹಕರೇ ದೇವರು. ಗ್ರಾಹಕರನ್ನು ನೌಕರರು, ನೌಕರರನ್ನು ಆಡಳಿತ ಮಂಡಳಿ ಚೆನ್ನಾಗಿ ನೋಡಿಕೊಳ್ಳಲಿ. ಈ ಸಂಸ್ಥೆ ಇನ್ನಷ್ಟು ವಿಸ್ತಾರಗೊಳ್ಳಲಿ ಎಂದು ಶುಭ ಹಾರೈಸಿದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಕಲ್ಲೇಗ ಸಂಜೀವ ನಾಯಕ್, ನಗರಸಭೆ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ಅಶ್ವಿನಿ ಕಾಂಪ್ಲೆಕ್ಸ್ ಮಾಲಕ ಕೆ. ರಾಜಾರಾಮ್ ಪ್ರಭು, ಕಲ್ಲೇಗ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಜೈನ್ ಉಪಸ್ಥಿತರಿದ್ದರು.
ಶಾಖೆಯ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ, ಎಲೆಕ್ಟ್ರಿಷಿಯನ್ ಅವರನ್ನು ಗೌರವಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದ ಸಹಕಾರಿಯ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ,
2001ರಲ್ಲಿ ಸರಸ್ವತಿ ಸಹಕಾರಿ ಆರಂಭವಾಯಿತು. ಇದೀಗ 25ನೇ ವರ್ಷ. ಇದು 21ನೇ ಶಾಖೆ. ಕೋಸ್ಟಲ್ ಟು ರಾಜಧಾನಿ ಎಂಬ ಪರಿಕಲ್ಪನೆಯನ್ನು ಅಂದರೆ ಬೆಂಗಳೂರಿನಲ್ಲಿ ಶಾಖೆ ಆರಂಭಿಸಿದ ಮೊದಲ ಸಹಕಾರಿಯೂ ಇದೇ. ಶೀಘ್ರದಲ್ಲೇ ಉಳ್ಳಾಲ ಹಾಗೂ ಸಿದ್ಧಕಟ್ಟೆಯಲ್ಲಿ ಶಾಖೆ ಆರಂಭಗೊಳ್ಳಲಿದೆ.
ಪುತ್ತೂರಿನಲ್ಲಿ ಆರಂಭಿಸಿದ ಶಾಖೆ ರಾಜ್ಯ, ದೇಶಕ್ಕೆ ವ್ಯಾಪಕಗೊಳ್ಳಲು ಮಹಾಲಿಂಗೇಶ್ವರ ದೇವರ ಅನುಗ್ರಹ ಸಿಗ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೈಷ್ಣವಿ ಪ್ರಾರ್ಥಿಸಿದರು. ಹರೀಶ್ ಬೋರ್ಕರ್, ಉಮೇಶ್ ಪ್ರಭು, ವೇದವ್ಯಾಸ್, ಸಂಜೀವ ನಾಯಕ್, ರವೀಶ್, ದಯಾನಂದ್ ನಾಯಕ್, ಚಂದ್ರಶೇಖರ್ ಅತಿಥಿಗಳನ್ನು ಬರಮಾಡಿಕೊಂಡರು. ಸಂಸ್ಥೆಯ ವ್ಯವಸ್ಥಾಪಕ ಶಿವಪ್ರಸಾದ್ ಪೆರುವಾಜೆ ವಂದಿಸಿದರು.
21ನೇ ಶಾಖೆಯಲ್ಲಿ…
ಠೇವಣಿಗಳ ಮೇಲೆ ಆಕರ್ಷಕ ಬಡ್ಡಿದರ, ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ, ಚಿನ್ನಾಭರಣ ಸಾಲ, ಸೇಫ್ ಲಾಕರ್ ಸೇರಿದಂತೆ ಹಲವು ಸೌಲಭ್ಯಗಳು ಸಂಸ್ಥೆಯಲ್ಲಿವೆ. ಸ್ಪರ್ಧಾತ್ಮಕ ಬಡ್ಡಿದರ, ಗರಿಷ್ಠ ಸಾಲ, ಸರಳ ದಾಖಲೆ ಪತ್ರಗಳು, ತ್ವರಿತ ಮಂಜೂರಾತಿ, ಸುಲಭ ಇಎಂಐ ಸಂಸ್ಥೆಯ ವಿಶೇಷತೆ. ಸ್ಥಿರಾಸ್ತಿ ಸಾಲ, ಗೃಹ ಸಾಲ, ಆಟೋ ಸಾಲ, ವಾಹನ ಸಾಲ, ಬಿಲ್ಡರ್ ಸಾಲ, ಭೂ ಅಡಮಾನ ಸಾಲ, ನಿವೇಶನ ಆಧಾರ ಸಾಲ ಇಲ್ಲಿ ಲಭ್ಯ.






















