ಮಂಗಳೂರು: ಕರ್ನಾಟಕ ಸರ್ಕಾರವು ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ಮಾರಾಟ ಹಾಗೂ ವಿತರಣೆಯನ್ನು ನಿಷೇಧಿಸಿ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ, ನಿಷೇಧದ ಜಾರಿ ವೇಳೆ ಅಡಿಕೆ ಬೆಳೆಗಾರರು ಹಾಗೂ ಕಾನೂನುಬದ್ಧ ಅಡಿಕೆ ವ್ಯಾಪಾರಕ್ಕೆ ಯಾವುದೇ ತೊಂದರೆಯಾಗದಂತೆ ಸ್ಪಷ್ಟ ಚೌಕಟ್ಟು ರೂಪಿಸಬೇಕು ಎಂದು ಕ್ಯಾಂಪ್ಕೊ ಆಗ್ರಹಿಸಿದೆ.
ಈ ಕುರಿತು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಅವರು ಮಾತನಾಡಿ, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳ ವಿರುದ್ಧ ಸರ್ಕಾರ ಕೈಗೊಳ್ಳುತ್ತಿರುವ ಕ್ರಮವನ್ನು ಸಂಸ್ಥೆ ಗೌರವಿಸುತ್ತದೆ. ಆದರೆ, ಅಡಿಕೆಯು ಪ್ರಮುಖ ಕೃಷಿ ಉತ್ಪನ್ನವಾಗಿದ್ದು, ತಂಬಾಕು ಹಾಗೂ ನಿಕೋಟಿನ್ ಅಂಶವುಳ್ಳ ಉತ್ಪನ್ನಗಳೊಂದಿಗೆ ಅದನ್ನು ಯಾವುದೇ ರೀತಿಯಲ್ಲೂ ಸಮೀಕರಿಸಬಾರದು ಎಂದು ತಿಳಿಸಿದ್ದಾರೆ.
ಗುಟ್ಕಾ, ಪಾನ್ ಮಸಾಲ ಸೇರಿದಂತೆ ನಿಷೇಧಿತ ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ಸಾಗಣೆ, ವಿತರಣೆ ಹಾಗೂ ಮಾರಾಟದ ವಿರುದ್ಧ ವಿಶೇಷ ತಪಾಸಣೆ ನಡೆಸಲಾಗುತ್ತಿದೆ. ಈ ನಿಷೇಧವು ಅಧಿಸೂಚನೆಯಲ್ಲಿ ಉಲ್ಲೇಖಿಸಿರುವ ಉತ್ಪನ್ನಗಳಿಗೆ ಮಾತ್ರ ಸೀಮಿತವಾಗಬೇಕು ಎಂದು ಕ್ಯಾಂಪ್ಕೊ ಒತ್ತಾಯಿಸಿದೆ.
ಅಡಿಕೆ ಬೆಳೆಗಾರರು ತಮ್ಮ ಕೃಷಿ ಉತ್ಪನ್ನವನ್ನು ಇತರರು ದುರ್ಬಳಕೆ ಮಾಡಿಕೊಂಡು ತಯಾರಿಸುವ ಉತ್ಪನ್ನಗಳ ಪರಿಣಾಮಗಳಿಗೆ ಹೊಣೆಗಾರರಾಗಬಾರದು. ಅಡಿಕೆಯ ಕಾನೂನುಬದ್ಧ ಕೃಷಿ, ಸಂಗ್ರಹಣೆ, ಸಂಸ್ಕರಣೆ ಮತ್ತು ವ್ಯಾಪಾರಕ್ಕೆ ಯಾವುದೇ ಪರೋಕ್ಷ ನಿರ್ಬಂಧ ಉಂಟಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸತೀಶ್ಚಂದ್ರ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಅಡಿಕೆ ವಲಯದ ಆರ್ಥಿಕ ಮಹತ್ವವನ್ನು ಒತ್ತಿಹೇಳಿರುವ ಕ್ಯಾಂಪ್ಕೊ, ಕೇಂದ್ರ ಹಣಕಾಸು ಸಚಿವಾಲಯದ ಮಾಹಿತಿಯನ್ನೂ ಉಲ್ಲೇಖಿಸಿದೆ. ಅದರಂತೆ, ಕರ್ನಾಟಕದಲ್ಲಿ ಅಡಿಕೆ ಮತ್ತು ಅಡಿಕೆ ಆಧಾರಿತ ಉತ್ಪನ್ನಗಳಿಂದ ಸಂಗ್ರಹವಾದ ಜಿಎಸ್‌ಟಿ 2021-22ರಲ್ಲಿ ₹172.62 ಕೋಟಿ, 2022-23ರಲ್ಲಿ ₹266.82 ಕೋಟಿ, 2023-24ರಲ್ಲಿ ₹326.57 ಕೋಟಿ, 2024-25ರಲ್ಲಿ ₹313.16 ಕೋಟಿ ಹಾಗೂ 2025-26ರಲ್ಲಿ ₹379.34 ಕೋಟಿ ಆಗಿದೆ. 2026-27ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ₹90.21 ಕೋಟಿ ಜಿಎಸ್‌ಟಿ ಸಂಗ್ರಹವಾಗಿದೆ ಎಂದು ತಿಳಿಸಲಾಗಿದೆ.
ಹೀಗಾಗಿ, ಸಾರ್ವಜನಿಕ ಆರೋಗ್ಯದ ಉದ್ದೇಶದೊಂದಿಗೆ ನಿಷೇಧಿತ ಉತ್ಪನ್ನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ, ಅಡಿಕೆ ಬೆಳೆಗಾರರು ಮತ್ತು ಕಾನೂನುಬದ್ಧ ವ್ಯಾಪಾರಸ್ಥರಿಗೆ ಅನಗತ್ಯ ತೊಂದರೆ ಉಂಟಾಗದಂತೆ ಸ್ಪಷ್ಟ ಹಾಗೂ ನಿಸ್ಸಂದಿಗ್ಧ ಜಾರಿ ಚೌಕಟ್ಟು ರೂಪಿಸಬೇಕು ಎಂದು ಕ್ಯಾಂಪ್ಕೊ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದೆ.























