tamanvi
ಸ್ಥಳೀಯ

ಪುತ್ತೂರಿನಲ್ಲಿ ಬೃಹತ್ ಮಾನವೀಯ ಕಾರ್ಯಾಚರಣೆ: 7 ನಿರಾಶ್ರಿತರ ರಕ್ಷಣೆ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ ನೇತೃತ್ವದಲ್ಲಿ ನಗರದ ವಿವಿಧ ಭಾಗಗಳಲ್ಲಿ ನಡೆದ ಬೃಹತ್ ಕಾರ್ಯಾಚರಣೆಯಲ್ಲಿ ಆಸರೆಯಿಲ್ಲದೆ ಸಂಕಷ್ಟದಲ್ಲಿದ್ದ ಏಳು ಮಂದಿ ನಿರಾಶ್ರಿತರನ್ನು ರಕ್ಷಿಸಿ, ಸುರಕ್ಷಿತವಾಗಿ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ.

maithri

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ರೋಟರಿ ಕ್ಲಬ್ ಪುತ್ತೂರು ಯುವದ ಎಕ್ಸಿಕ್ಯುಟಿವ್ ಸೆಕ್ರೆಟರಿ ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸುನಿತಾ ಅವರ ಸೂಚನೆಯಂತೆ ಹಾಗೂ ಮಂಗಳೂರಿನ ಪಚ್ಚನಾಡಿ ನಿರಾಶ್ರಿತರ ಪರಿಹಾರ ಕೇಂದ್ರದ ಸಹಕಾರದೊಂದಿಗೆ ಈ ಕಾರ್ಯಾಚರಣೆ ನಡೆಯಿತು.

ಆ.13ರಂದು ಮಧ್ಯಾಹ್ನ 2ರಿಂದ ಸಂಜೆ 5.30ರವರೆಗೆ ನಗರದ ಜಿ.ಎಲ್. ಮಾಲ್, ಕಲ್ಲಾರೆ, ದರ್ಬೆ ಚಪ್ಪಲ್ ಬಜಾರ್, ಅಂಕಲ್ ಸ್ವೀಟ್ಸ್, ಪಿ.ಸಿ. ಪೈ ಪೆಟ್ರೋಲ್ ಪಂಪ್ ಹಾಗೂ ದೇವರಕಟ್ಟೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಏಳು ಮಂದಿ ನಿರಾಶ್ರಿತರು ಹಾಗೂ ನಿರ್ಗತಿಕರನ್ನು ಪತ್ತೆಹಚ್ಚಿ ರಕ್ಷಿಸಿ, ಪಚ್ಚನಾಡಿ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಕರೆದೊಯ್ಯಲಾಯಿತು.

ಕಾರ್ಯಾಚರಣೆಯ ವೇಳೆ ಸಮಾಜ ಸೇವಕ ಹಾಗೂ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಜಾಕ್ ಬಪ್ಪಳಿಗೆ ಅವರು ಸ್ವಯಂಪ್ರೇರಿತರಾಗಿ ತಂಡದೊಂದಿಗೆ ಕೈಜೋಡಿಸಿ, ನಿರಾಶ್ರಿತರನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದರು. ದರ್ಬೆ ಪರಿಸರದ ಆಟೋ ಚಾಲಕರು ಕೂಡ ಕಾರ್ಯಾಚರಣೆಗೆ ಅಗತ್ಯ ಸಹಕಾರ ನೀಡಿದರು.

ಪಚ್ಚನಾಡಿ ಕೇಂದ್ರದ ತ್ವರಿತ ಸ್ಪಂದನೆ

ನಿರಾಶ್ರಿತರ ರಕ್ಷಣೆಯೊಂದಿಗೆ ಅವರಿಗೆ ತಕ್ಷಣವೇ ಸುರಕ್ಷಿತ ಆಸರೆ ಕಲ್ಪಿಸುವುದು ಕೂಡ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಮಂಗಳೂರಿನ ಪಚ್ಚನಾಡಿ ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕ ಲಕ್ಷ್ಮಣ್ ಸದಲಗಿ ಅವರ ನೇತೃತ್ವದ ಸಿಬ್ಬಂದಿ ತಂಡ ತ್ವರಿತವಾಗಿ ಸ್ಪಂದಿಸಿ, ರಕ್ಷಿಸಲ್ಪಟ್ಟವರನ್ನು ಕೇಂದ್ರಕ್ಕೆ ದಾಖಲಿಸಿತು.

ಪುತ್ತೂರಿನಲ್ಲಿ ನಿರ್ಗತಿಕರು ತಿರುಗಾಡುತ್ತಿರುವ ಕುರಿತು ಉಮೇಶ್ ನಾಯಕ್ ಅವರು ಪುತ್ತೂರು ಪೊಲೀಸ್ ಠಾಣೆ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿ, ರಕ್ಷಣೆ ಮತ್ತು ಪುನರ್ವಸತಿಗೆ ಸಹಕಾರ ಕೋರಿದ್ದರು. ಇದಕ್ಕೆ ಸ್ಪಂದಿಸಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸುನಿತಾ ಅವರು ಪಚ್ಚನಾಡಿ ಕೇಂದ್ರದ ಅಧೀಕ್ಷಕರಿಗೆ ಮಾಹಿತಿ ನೀಡಿದ್ದು, ಕೇಂದ್ರದ ಸಿಬ್ಬಂದಿ ಕೂಡಲೇ ಕಾರ್ಯಾಚರಣೆಗೆ ಸಹಕರಿಸಿದರು.

ಈ ಕಾರ್ಯಾಚರಣೆಯಲ್ಲಿ ಪಚ್ಚನಾಡಿ ಕೇಂದ್ರದ ಮಹಿಳಾ ವಾರ್ಡನ್ ಶೈಲಜಾ, ಸ್ಟಾಫ್ ನರ್ಸ್ ಗಿರೀಶ್, ಭದ್ರತಾ ಸಿಬ್ಬಂದಿ ಪ್ರದೀಪ್ ಮತ್ತು ಮಣಿಕಂಠ ಹಾಗೂ ವಾಹನ ಚಾಲಕ ಸಾಯಿ ಕುಮಾರ್ ಸಹಕರಿಸಿದರು.

2024ರ ಬಳಿಕ ಮತ್ತೊಂದು ದೊಡ್ಡ ಕಾರ್ಯಾಚರಣೆ

2024ರಲ್ಲಿ ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ ಶಿಶು ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ರಾತ್ರಿ 9ರಿಂದ ತಡರಾತ್ರಿ 2ರವರೆಗೆ ಕಾರ್ಯಾಚರಣೆ ನಡೆಸಿ, ಏಕಕಾಲದಲ್ಲಿ 13 ಮಂದಿ ನಿರ್ಗತಿಕರನ್ನು ರಕ್ಷಿಸಿ ಕೆರೆಮೂಲೆ ದೀಪಶ್ರೀ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿತ್ತು.

ಆ ಕಾರ್ಯಾಚರಣೆಯ ಬಳಿಕ ಪುತ್ತೂರಿನಲ್ಲಿ ನಡೆದ ಪ್ರಮುಖ ಬೃಹತ್ ರಕ್ಷಣಾ ಕಾರ್ಯಾಚರಣೆ ಇದಾಗಿದೆ. ನಿರಾಶ್ರಿತರಿಗೆ ಸುರಕ್ಷಿತ ಆಸರೆ ಹಾಗೂ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ, ಪಚ್ಚನಾಡಿ ಕೇಂದ್ರದ ಸಿಬ್ಬಂದಿ, ಸಮಾಜ ಸೇವಕ ರಜಾಕ್ ಬಪ್ಪಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮಾನವೀಯ ಸೇವೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 128