ವಿಟ್ಲ: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಮಿನಿಬಸ್‌ವೊಂದು ಬ್ರೇಕ್ ಫೇಲ್ ಆಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ವಿಟ್ಲ ಪಡೂರು ಗ್ರಾಮದ ಕುಂಟುಕುಡೇಲು ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.
ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಮಿನಿಬಸ್ ಕುಂಟುಕುಡೇಲು ಬಳಿ ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡಿದೆ. ಈ ವೇಳೆ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ವಿದ್ಯುತ್ ಕೇಬಲ್ ಬಸ್‌ಗೆ ತಾಗಲು ಕೇವಲ ಒಂದು ಅಡಿ ಅಂತರ ಮಾತ್ರ ಉಳಿದಿತ್ತು ಎನ್ನಲಾಗಿದೆ.
ಈ ಅಪಾಯವನ್ನು ಗಮನಿಸಿದ ಸ್ಥಳೀಯ ನಿವಾಸಿ ಹಾಗೂ ಲಯನ್ಸ್ ಕ್ಲಬ್ ವಿಟ್ಲ ವಲಯ ಅಧ್ಯಕ್ಷ ಎರ್ಮೆನಿಲೆ ರಜಿತ್ ಆಳ್ವ ಅವರು ತಕ್ಷಣ ಸ್ಥಳಕ್ಕೆ ಧಾವಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಕ್ರಮ ಕೈಗೊಂಡಿದ್ದಾರೆ. ಅವರ ಸಮಯಪ್ರಜ್ಞೆ ಹಾಗೂ ಕ್ಷಿಪ್ರ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ಭಾರಿ ಅನಾಹುತವೊಂದು ತಪ್ಪಿದೆ.
ಘಟನೆಯಲ್ಲಿ ಬಸ್‌ನಲ್ಲಿದ್ದ ಮಕ್ಕಳು ಹಾಗೂ ಸಿಬ್ಬಂದಿಗೆ ಯಾವುದೇ ಪ್ರಾಣಾಪಾಯ ಅಥವಾ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ರಜಿತ್ ಆಳ್ವ ಅವರ ಸಮಯಪ್ರಜ್ಞೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
























