ಪುತ್ತೂರು: ನಗರ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಆಗದೆ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಹಾಗೂ ನಗರ ಭಾಗದಲ್ಲಿ ದಾರಿದೀಪಗಳು ಸಮರ್ಪಕ ನಿರ್ವಹಣೆಯಲ್ಲಿ ಇಲ್ಲದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಪುತ್ತೂರು ನಗರಸಭೆಗೆ ಭೇಟಿ ನೀಡಿದ ಪುತ್ತಿಲ ಪರಿವಾರದ ಪ್ರಮುಖರು, ನಗರಸಭೆ ಅಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿದರು.
ಪುತ್ತೂರು ನಗರಸಭೆ ಪೌರಾಯುಕ್ತೆ ವಿದ್ಯಾ ಕಾಳೆ, ಜಲಸಿರಿ ಯೋಜನೆಯ ಎ.ಡಬ್ಲ್ಯೂ. ಮಹಾಂತೇಶ್, ಕುಡಿಯುವ ನೀರಿನ ಮೇಲ್ವಿಚಾರಕ ವಸಂತ ನಾಯ್ಕ್ ಹಾಗೂ ಸಂಬಂಧಪಟ್ಟ ಇಂಜಿನಿಯರ್‌ಗಳೊಂದಿಗೆ ಚರ್ಚಿಸಿ, ನಗರದಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಹಾಗೂ ಬೀದಿದೀಪಗಳ ಸಮಸ್ಯೆಗಳನ್ನು ಕೂಡಲೇ ಪರಿಶೀಲಿಸಿ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ತುರ್ತಾಗಿ ಸೂಕ್ತ ಕ್ರಮ ಕೈಗೊಂಡು ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಆಗ್ರಹಿಸಲಾಯಿತು.
ನಗರದ ಸಾರ್ವಜನಿಕರಿಗೆ ಸಮರ್ಪಕ ಹಾಗೂ ನಿರಂತರ ಕುಡಿಯುವ ನೀರು ದೊರೆಯುವಂತೆ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರಿಂದ ಬರುವ ಕುಡಿಯುವ ನೀರಿನ ಸಮಸ್ಯೆಗಳ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಒದಗಿಸುವಂತೆ ಮನವಿ ಮಾಡಲಾಯಿತು.
ಪುತ್ತಿಲ ಪರಿವಾರದ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಟ್ರಸ್ಟ್ ನ ಪದಾಧಿಕಾರಿಗಳಾದ ಉಮೇಶ್ ಕೋಡಿಬೈಲು, ಪ್ರಶಾಂತ್ ನೆಕ್ಕಿಲಾಡಿ, ರಾಜು ಶೆಟ್ಟಿ, ರವಿ ಆಚಾರ್ಯ, ದಯಾನಂದ ಆಚಾರ್ಯ, ಕಿಶೋರ್ ಪಡ್ಡಾಯೂರು, ಮನೀಶ್ ಕುಲಾಲ್ ಉಪಸ್ಥಿತರಿದ್ದರು.
























