ಪುತ್ತೂರು: ಹಸಿರು ಪರಿಸರ ನಿರ್ಮಿಸಲು ಉದ್ದೇಶಿಸಿರುವ ಸಾಮಾಜಿಕ ಅರಣ್ಯ ವಲಯದ ಮುಕ್ವೆ ಕೇಂದ್ರೀಯ ನರ್ಸರಿ ವಿವಿಧ ಜಾತಿಯ ಸಸಿಗಳನ್ನು ಬೆಳೆಸಿವೆ.
ಮಾವು, ಹಲಸು, ಪುನರ್ಪುಳಿ, ನೆಲ್ಲಿ, ನೇರಳೆ, ಹುಣಸೆ, ಜಂಬುನೇರಳೆ, ಮಂತುಹುಳಿ, ಬಾದಾಮಿ, ಮುತ್ತುಗ, ಲಕ್ಷಣಫಲ, ಕಕ್ಕೆ, ಸುರಹೊನ್ನೆ, ಬಟರ್ಫ್ರೂಟ್, ಸಂಪಿಗೆ, ಪನ್ನೇರಳೆ, ಚೆರ್ರಿ ಹಾಗೂ ಸಿಹಿ ಹುಣಸೆ ಸೇರಿದಂತೆ ಹಲವು ಜಾತಿಯ ಸಸಿಗಳು ಸಾರ್ವಜನಿಕರನ್ನು ಆಕರ್ಷಿಸುತ್ತಿವೆ.
ಸಾಮಾಜಿಕ ಅರಣ್ಯ ಅಭಿವೃದ್ಧಿ ಹಾಗೂ ಹಸಿರು ವಿಸ್ತರಣೆಗೆ ಉತ್ತೇಜನ ನೀಡುವ ಉದ್ದೇಶದಿಂದ ವಿವಿಧ ಜಾತಿಯ ಸಸಿಗಳನ್ನು ನರ್ಸರಿಯಲ್ಲಿ ಬೆಳೆಸಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದು ತಮ್ಮ ಜಮೀನುಗಳಲ್ಲಿ ಸಸಿಗಳನ್ನು ನೆಟ್ಟು ಹಸಿರು ಪರಿಸರ ನಿರ್ಮಾಣಕ್ಕೆ ಕೈಜೋಡಿಸಬಹುದಾಗಿದೆ.
ಆರ್.ಕೆ.ವಿ.ವೈ. ಯೋಜನೆಯಡಿ ಗಿಡಗಳನ್ನು ನಾಟಿ ಮಾಡಿದ್ದು, ಒಂದು ಗಿಡಕ್ಕೆ 75 ರೂ.ನಂತೆ ಮಾರಾಟಕ್ಕೆ ಇಡಲಾಗಿದೆ. ಆಸಕ್ತರು ಆಧಾರ್ ಹಾಗೂ ಪಹಣಿ (ಆರ್.ಟಿ.ಸಿ.)ಯೊಂದಿಗೆ ಭೇಟಿ ನೀಡುವಂತೆ ಸಾಮಾಜಿಕ ಅರಣ್ಯ ವಲಯದ ವಲಯಾರಣ್ಯಾಧಿಕಾರಿ ವಿದ್ಯಾರಾಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
























