tamanvi
ಸ್ಥಳೀಯ

ವಿಟ್ಲದಲ್ಲಿ ಭೀಕರ ಸಿಲಿಂಡರ್ ಸ್ಫೋಟ| ಗೃಹಿಣಿಯ ಸಮಯಪ್ರಜ್ಞೆಯಿಂದ ಮೂವರು ಪಾರು

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ವಿಟ್ಲ: ಅಡುಗೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ಮನೆ ಸಂಪೂರ್ಣ ಜಖಂಗೊಂಡ ಘಟನೆ ವಿಟ್ಲ ಕಸಬಾ ಗ್ರಾಮದ ಕುರುಂಬಳದಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ. ಘಟನೆಯಲ್ಲಿ ಮನೆಯಲ್ಲಿದ್ದ ತಾಯಿ, 9 ವರ್ಷದ ಮಗು ಹಾಗೂ 80 ವರ್ಷದ ವೃದ್ಧೆ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕುರುಂಬಳ ನಿವಾಸಿ ಇಸುಬು ಬ್ಯಾರಿ ಅವರ ಪುತ್ರ ಕೆ. ಹಮೀದ್ (49) ಅವರ ಮನೆಯಲ್ಲಿ ಬೆಳಗ್ಗೆ ಸುಮಾರು 11 ಗಂಟೆಗೆ ಘಟನೆ ನಡೆದಿದೆ. ಹಮೀದ್ ಅವರು ಪೇಟೆಗೆ ತೆರಳಿದ್ದ ಸಂದರ್ಭದಲ್ಲಿ ಅವರ ಪತ್ನಿ ಖೈರುನ್ನಿಸಾ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಗ್ಯಾಸ್ ಸಿಲಿಂಡರ್‌ನ ರೆಗ್ಯುಲೇಟರ್ ಬಳಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.

maithri

ಅಪಾಯವನ್ನು ಅರಿತ ಖೈರುನ್ನಿಸಾ ತಕ್ಷಣ ಕಾರ್ಯಪ್ರವೃತ್ತರಾಗಿ ಮನೆಯಲ್ಲಿದ್ದ ತಮ್ಮ 9 ವರ್ಷದ ಪುತ್ರ ಇಮ್ರಾನ್ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದು, ದೃಷ್ಟಿಹೀನರಾಗಿ ಹಾಸಿಗೆ ಹಿಡಿದಿದ್ದ 80 ವರ್ಷದ ಅತ್ತೆ ಮರಿಯಮ್ಮ ಅವರನ್ನು ಮನೆಯಿಂದ ಹೊರಗೆ ಕರೆತಂದು ಅಂಗಳಕ್ಕೆ ತಲುಪಿಸಿದ್ದಾರೆ.

ಈ ವೇಳೆ ಖೈರುನ್ನಿಸಾ ಅವರ ಕೂಗನ್ನು ಕೇಳಿಸಿಕೊಂಡ ನೆರೆಯ ನಿವಾಸಿ ಉಮ್ಮರ್ ಸ್ಥಳಕ್ಕೆ ಧಾವಿಸಿ ಮೂವರನ್ನೂ ಸುರಕ್ಷಿತವಾಗಿ ಹೊರಗೆ ಕರೆತರುವಲ್ಲಿ ನೆರವಾಗಿದ್ದಾರೆ. ಮೂವರು ಮನೆಯಿಂದ ಹೊರಬಂದ ಕೆಲವೇ ಕ್ಷಣಗಳಲ್ಲಿ ಗ್ಯಾಸ್ ಸಿಲಿಂಡರ್ ಭೀಕರವಾಗಿ ಸ್ಫೋಟಗೊಂಡಿದೆ.

ಸ್ಫೋಟದ ತೀವ್ರತೆಗೆ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಅಡುಗೆ ಕೋಣೆ ಸಂಪೂರ್ಣ ಧ್ವಂಸಗೊಂಡಿದೆ. ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು, ದಾಖಲೆಗಳು ಹಾಗೂ ಪೀಠೋಪಕರಣಗಳು ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಟ್ಲದ ಇಂಡೇನ್ ಗ್ಯಾಸ್ ವಿತರಕ ಸಂಸ್ಥೆ ‘ಸಾಯಿ ಗಣೇಶ್’ನ ಮಾಲೀಕ ಸತೀಶ ಆಳ್ವ ಸೇರಿದಂತೆ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಗೃಹಿಣಿಯ ಸಮಯಪ್ರಜ್ಞೆ ಹಾಗೂ ನೆರೆಯವರ ನೆರವಿನಿಂದಾಗಿ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 127