ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುತ್ತೂರು ಹಾಗೂ ಬಂಟ್ವಾಳ ತಾಲೂಕುಗಳ ವಿವಿಧ ಪರಿಶಿಷ್ಟ ಜಾತಿ ಕಾಲನಿಗಳ ಅಭಿವೃದ್ಧಿಗೆ ಕರ್ನಾಟಕ ಸರ್ಕಾರವು ಪ್ರಗತಿ ಕಾಲೊನಿ ಯೋಜನೆ ಅಡಿಯಲ್ಲಿ ₹3 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಂದಿರುವ ಅರ್ಜಿಗಳ ಆಧಾರದ ಮೇಲೆ ಗ್ರಾಮವಾರು ಅನುದಾನ ಹಂಚಿಕೆ ಮಾಡಲಾಗಿದ್ದು, ಇನ್ನೂ ಹಲವು ಅರ್ಜಿಗಳು ಬಾಕಿ ಉಳಿದಿವೆ. ಮುಂದಿನ ಹಂತದಲ್ಲಿ ಹೆಚ್ಚುವರಿ ಅನುದಾನ ಬಿಡುಗಡೆಯಾದ ಬಳಿಕ ಉಳಿದ ಕಾಲನಿಗಳಿಗೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ದಲಿತ ಸಮುದಾಯಗಳ ಕಾಲನಿಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತಿದ್ದು, ಬಡವರು ಮತ್ತು ದೀನದಲಿತರು ವಾಸಿಸುವ ಪ್ರದೇಶಗಳಲ್ಲಿ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ತಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.
ಬಿಡುಗಡೆಯಾದ ₹3 ಕೋಟಿ ಅನುದಾನದಲ್ಲಿ ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನ ವಿವಿಧ ಗ್ರಾಮಗಳ ಪರಿಶಿಷ್ಟ ಜಾತಿ ಕಾಲನಿಗಳ ರಸ್ತೆ ಅಭಿವೃದ್ಧಿ ಹಾಗೂ ಸಂಪರ್ಕ ರಸ್ತೆ ಕಾಮಗಾರಿಗಳಿಗೆ ₹5 ಲಕ್ಷದಿಂದ ₹25 ಲಕ್ಷದವರೆಗೆ ಅನುದಾನ ಹಂಚಿಕೆ ಮಾಡಲಾಗಿದೆ. ಕಾಮಗಾರಿಗಳಿಗೆ ಶೀಘ್ರದಲ್ಲೇ ಶಿಲಾನ್ಯಾಸ ನೆರವೇರಿಸಿ ಕಾರ್ಯಾರಂಭ ಮಾಡಲಾಗುವುದು ಎಂದು ಅವರು ಹೇಳಿದರು.
ಶಾಸಕರ ಮಾತು:
ಕಳೆದ ವಿಧಾನಸಭಾ ಚುನಾವಣೆಯ ವೇಳೆ ಕಾಲನಿಗಳಿಗೆ ಭೇಟಿ ನೀಡಿದಾಗ ಮೂಲಭೂತ ಸೌಕರ್ಯಗಳ ಕೊರತೆ ಕಂಡುಬಂದಿತ್ತು. ಶಾಸಕನಾದರೆ ಕಾಲನಿಗಳ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದೆ. ಈಗ ಮತ್ತೊಮ್ಮೆ ₹3 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಉಳಿದ ಕಾಲನಿಗಳ ಬೇಡಿಕೆಗಳನ್ನೂ ಹಂತ ಹಂತವಾಗಿ ಈಡೇರಿಸಲಾಗುವುದು. ಪುತ್ತೂರು ಕ್ಷೇತ್ರದ ಪ್ರತಿಯೊಂದು ಗ್ರಾಮ ಹಾಗೂ ಕಟ್ಟಕಡೆಯ ವ್ಯಕ್ತಿ ಸಂಚರಿಸುವ ರಸ್ತೆಯೂ ಅಭಿವೃದ್ಧಿಯಾಗಬೇಕು ಎಂಬುದು ನನ್ನ ಗುರಿ ಎಂದು ಶಾಸಕ ಅಶೋಕ್ ರೈ ಹೇಳಿದ್ದಾರೆ.
























