ಟ್ರೆಂಡಿಂಗ್ ನ್ಯೂಸ್

ಡ್ರಗ್ಸ್ ಹಾವಳಿಯಿಂದ ಯುವಜನತೆಯನ್ನು ಸಂರಕ್ಷಿಸಿ | ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಪದಸ್ವೀಕಾರ ಸಮಾರಂಭದಲ್ಲಿ ಎಎಸ್ಪಿ ಅನಿಲ್ ಕುಮಾರ್ ಬೂಮಾರೆಡ್ಡಿ

Saraswathi

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ವಿಶ್ವದಲ್ಲೇ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಭಾರತ. ವಿಶ್ವದಲ್ಲೇ ಅತೀ ಹೆಚ್ಚು ಯುವಜನರನ್ನು ಹೊಂದಿರುವ ದೇಶವೂ ಭಾರತವೇ. ಹೀಗೆಂದು ನಾವು ಹೇಳುತ್ತಾ ಕೂತರೆ ಸಾಕಾಗದು, ಆ ಯುವಜನರನ್ನು ಸಂರಕ್ಷಣೆ ಮಾಡುವ ಹೊಣೆಯೂ ನಮ್ಮ ಮೇಲಿದೆ ಎಂದು ದ.ಕ. ಜಿಲ್ಲಾ ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಬೂಮಾರೆಡ್ಡಿ ಹೇಳಿದರು.

maithri

ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಪುತ್ತೂರು ಇದರ 2026-27ನೇ ಸಾಲಿನ ಪದಸ್ವೀಕಾರ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು.

birumale

ಮಾದಕ ವ್ಯಸನ ಹೆಚ್ಚುತ್ತಿದೆ. ಜನರು ಅದಲ್ಲೂ ಯುವಜನತೆ ಡ್ರಗ್ಸ್ ಜಾಲಕ್ಕೆ ಸಿಲುಕಿ, ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸುಮಾರು 2.50 ಸಾವಿರ ಕೋಟಿ ರೂ. ಜಗತ್ತಿನಲ್ಲಿ ವಹಿವಾಟು ನಡೆಸುತ್ತಿರುವ ಡ್ರಗ್ಸ್, ಭಾರತವನ್ನು ಧಿಕ್ಕೆಡಿಸುತ್ತಿದೆ. ಇದರಿಂದಾಗಿ ಅಪರಾಧಗಳು ಹೆಚ್ಚುತ್ತಿವೆ. ಕಳೆದ ಹದಿನೈದು ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ನಾಗರಿಕ ಸಮಾಜ ತಲೆತಗ್ಗಿಸುವಂತಹ ಅಪರಾಧಗಳು ನಡೆದಿವೆ. ಇದಕ್ಕೆ ಕಾರಣ ಮಾದಕ ವ್ಯಸನ. ಇದನ್ನು ನಿರ್ಮೂಲನೆ ಮಾಡಲು ಕಾನೂನಿನಿಂದ ಮಾತ್ರ ಅಸಾಧ್ಯ. ಕಾನೂನಿನ ಜೊತೆಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು ಎಂದರು.

ಜ್ಯೂಸ್ ಸೇವಿಸಲೆಂದು ಅಂಗಡಿಗೆ ಹೋಗುತ್ತಾರೆ. ಜ್ಯೂಸ್ ಬಹಳ ರುಚಿಕರ ಎಂದು ಮರುದಿನವೂ ಹೋಗುತ್ತಾರೆ. ಹೀಗೆ ಜ್ಯೂಸ್ ಕುಡಿಯಲು ಹೋಗಿ ಹೋಗಿ ಡ್ರಗ್ಸ್ ಜಾಲಕ್ಕೆ ಗೊತ್ತಿಲ್ಲದೇ ಸಿಲುಕಿದ ಅನೇಕ ಉದಾಹರಣೆ ಇದೆ. ಸಮಾಜದಲ್ಲಿ ತಮ್ಮ ಮರ್ಯಾದೆಯನ್ನು ಹರಾಜು ಹಾಕುವ ಹಂತಕ್ಕೆ ತಲುಪಿಸುತ್ತದೆ ಈ ಮಾದಕ ವ್ಯಸನ ಎಂದ ಅವರು, ಇತ್ತೀಚೆಗೆ ಜಿಹಾದಿ ಡ್ರಗ್ಸ್ ಭಾರತಕ್ಕೆ ಕಾಲಿಟ್ಟಿದೆ. ಜಿಹಾದಿ ಡ್ರಗ್ಸ್ ಎಂದರೆ, ಉಗ್ರರು ತಾವು ನಿದ್ದೆ ಮಾಡದೇ ಇರಲು ಬಳಸುವ ಒಂದು ರೀತಿಯ ಡ್ರಗ್ಸ್. ಇದರ ವಿರುದ್ಧ ಯುವಜನತೆ ಎಚ್ಚೆತ್ತು ನಿಲ್ಲಬೇಕಾಗಿದೆ. ದೇಶವನ್ನು ರಕ್ಷಿಸಬೇಕಿದೆ ಎಂದು ಕರೆ ನೀಡಿದರು.

ಪದಪ್ರದಾನ ನೆರವೇರಿಸಿದ ಲೆಫ್ಟಿನೆಂಟ್ ಗವರ್ನರ್ ಝೇವಿಯರ್ ಡಿಸೋಜಾ ಮಾತನಾಡಿ, ಸಮಾಜಕ್ಕೆ ಅಗತ್ಯ ಇರುವಂತಹ ಕೆಲಸವನ್ನು ಮಾಡುತ್ತಿರುವ ರೋಟರಿ ಸಂಸ್ಥೆಗಳು, ಇಂದು ಸಮಾಜಕ್ಕೆ ಅನಿವಾರ್ಯ ಬೇಕೇ ಬೇಕು ಎಂಬಂತಹ ಮಟ್ಟಿಗೆ ಬೆಳೆದು ನಿಂತಿದೆ. ನಾಯಕತ್ವದ ಜೊತೆಗೆ ಜವಾಬ್ದಾರಿ, ಸೇವೆ, ಪ್ರಾಮಾಣಿಕತೆ, ಪಾರದರ್ಶಕತೆಯ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಸದಾ ಪ್ರಯತ್ನಿಸುತ್ತಿದ್ದೇವೆ ಎಂದರು.

ಸೇವೆ ನಮ್ಮ ಜೀವನದ ಧ್ಯೇಯವಾಗಬೇಕು. ಸ್ನೇಹ, ಸೌಹಾರ್ದತೆ, ಮಾನವೀಯತೆ ಬೆಳೆಸಿಕೊಳ್ಳಬೇಕು. ಯುವಜನತೆಯನ್ನು ಪ್ರೋತ್ಸಾಹಿಸುವ ಕೆಲಸ ರೋಟರಿಯಿಂದ ಆಗಲಿ. ನೂತನವಾಗಿ ಪದಸ್ವೀಕಾರ ಮಾಡಿರುವಂತಹ ಪದಾಧಿಕಾರಿಗಳು ಉತ್ತಮ ಕೆಲಸ ನಿರ್ವಹಿಸುವಂತಾಗಲಿ ಎಂದು ಶುಭಹಾರೈಸಿದರು.

ವಲಯ ಸೇನಾನಿ ಪಶುಪತಿ ಶರ್ಮಾ ಮಾತನಾಡಿ, ಜನಮಾನಸದಲ್ಲಿ ಉಳಿಯುವಂತಹ ಕೆಲಸವನ್ನು ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಮಾಡಲಿ ಎಂದು ಶುಭಹಾರೈಸಿದರು.

ರವಿಕುಮಾರ್ ಮಾತನಾಡಿ, ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಉತ್ತಮ ಕಾರ್ಯ ಮಾಡಿ, ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂದು ಹಾರೈಸಿದರು.

ನಿಕಟಪೂರ್ವ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಬಿರಮಲೆ ಗುಡ್ಡ ಶುಚಿತ್ವಕ್ಕೂ ನಮ್ಮ ಕ್ಲಬ್ ಮಾಡಬೇಕು. ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಪೊಲೀಸ್ ಇಲಾಖೆ ನಡೆಸುತ್ತಿದೆ. ಇದಕ್ಕೆ ಸಂಘ ಸಂಸ್ಥೆಗಳ ಸಹಕಾರ ನೀಡಿವೆ. ಮುಂದೆ ನಮ್ಮ ಕ್ಲಬ್‌ನ್ನು ಮುನ್ನಡೆಸಲು ಡಾ. ಗೋಪಾಲಕೃಷ್ಣ ಹಾಗೂ ರುಕ್ಮಯ ಕುಲಾಲ್ ನೇತೃತ್ವ ವಹಿಸಿದ್ದಾರೆ. ಅವರಿಗೆ ಸಂಪೂರ್ಣ ಬೆಂಬಲ ನೀಡಬೇಕು ಎಂದು ವಿನಂತಿಸಿದರು.

ಪದಸ್ವೀಕಾರ ಮಾಡಿದ ಕ್ಲಬ್ ಅಧ್ಯಕ್ಷ ಡಾ. ಗೋಪಾಲಕೃಷ್ಣ ಮಾತನಾಡಿ, ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ನಾವು ಮುಂದಡಿ ಇಡುತ್ತೇವೆ. ರೋಟರಿಯ ಹೆಸರನ್ನು ಉಳಿಸುವಂತಹ ಕೆಲಸವನ್ನು ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಪುತ್ತೂರು ಮಾಡಲಿದೆ. ಈ ನಿಟ್ಟಿನಲ್ಲಿ ಬಿರುಮಲೆ ಬೆಟ್ಟ ಶುಚಿತ್ವ, ನಿರುದ್ಯೋಗ ನಿರ್ಮೂಲನೆ, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದ ಅವರು, ತನ್ನ ಸಹೋದರ ನಾರಾಯಣ ಪಾಟಾಳಿ ಅವರಿಗೆ ಡಯಲಿಸೀಸ್ ಆಗಿರುವ ಸಂದರ್ಭದಲ್ಲಿ ರೋಟರಿ – ರೋಟರ್ಯಾಕ್ಟ್ ಮಿತ್ರರು ನೀಡಿರುವ ಸಹಕಾರವನ್ನು ಮರೆಯಲು ಸಾಧ್ಯವೇ ಇಲ್ಲ. ಇದಕ್ಕಾಗಿ ಏನಾದರೂ ರೋಟರಿಗೆ ಸೇವೆ ನೀಡಬೇಕು ಎಂಬ ಹಪಹಪಿ ಮನಸ್ಸಿನಲ್ಲಿ ಸದಾ ಇತ್ತು. ಇದು ನನಸಾಗಿಸುವ ಸಂದರ್ಭ ಇದೀಗ ಬಂದಿದೆ ಎಂದರು.

ಸಾಜ ರಾಧಾಕೃಷ್ಣ ಆಳ್ವ ಅವರ ಪತ್ನಿ ಇಂದಿರಾ ಪಿ. ಆಳ್ವ, ನೂತನ ಅಧ್ಯಕ್ಷ ಡಾ. ಗೋಪಾಲಕೃಷ್ಣ ಅವರ ಪತ್ನಿ ಶಾರದಾ ಕೃಷ್ಣ ಉಪಸ್ಥಿತರಿದ್ದರು.

ವೃತ್ತಿ ಸೇವಾ ವಿಭಾಗದಡಿ ವೈದ್ಯ ಡಾ. ಸುರೇಶ್ ಪುತ್ತೂರಾಯ ಹಾಗೂ ಯುವಜನಸೇವಾ ವಿಭಾಗದಡಿ ಪ್ರತಿಭಾವಂತ ವಿದ್ಯಾರ್ಥಿನಿ ರಕ್ಷಿತಾ ಅವರನ್ನು ಸನ್ಮಾನಿಸಲಾಯಿತು. ನಿರ್ಗಮಿತ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕಾರ್ಯದರ್ಶಿ ರುಕ್ಮಯ ಕುಲಾಲ್ ಅವರನ್ನು ಸನ್ಮಾನಿಸಲಾಯಿತು. ಶರತ್ ಕುಮಾರ್ ರೈ ದಂಪತಿಯನ್ನು ಗೌರವಿಸಲಾಯಿತು.

ಪರಮೇಶ್ವರಿ ಭಟ್ ಪ್ರಾರ್ಥಿಸಿದರು. ನಿಕಟಪೂರ್ವ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿದರು. ಕಾರ್ಯದರ್ಶಿ ರುಕ್ಮಯ ಕುಲಾಲ್ ವರದಿ ವಾಚಿಸಿದರು. ಶರತ್ ರೈ, ದಾಮೋದರ ಪಾಟಾಳಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸಂತೋಷ್ ಕುಮಾರ್ ರೈ ವಂದಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts