tamanvi
ಸ್ಥಳೀಯ

ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ಆಟಿದ ಕೂಟ ಕಾರ್ಯಕ್ರಮ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ತುಳುನಾಡಿನ ಜನರು ಆಷಾಢ ಮಾಸದಲ್ಲಿ ಆಚರಿಸುವ ‘ಆಟಿದ ಕೂಟ’ವು ಆಟಿ ತಿಂಗಳ ವಿಶೇಷ ತಿಂಡಿ-ತಿನಿಸುಗಳು ಹಾಗೂ ಆಹಾರ ಪದಾರ್ಥಗಳನ್ನು ಸವಿಯುವುದರ ಜೊತೆಗೆ, ತುಳುನಾಡಿನ ಸಂಸ್ಕೃತಿ ಮತ್ತು ಹಿರಿಯರ ಜೀವನ ಪದ್ಧತಿಯನ್ನು ಪರಿಚಯಿಸುವ ವಿಶೇಷ ಕಾರ್ಯಕ್ರಮವಾಗಿದೆ ಎಂದು ನ್ಯಾಯವಾದಿ ಹಾಗೂ ದೈವಾರಾಧನೆಯ ಮಧ್ಯಸ್ಥ ತೇಜಸ್ ನಾಯ್ಕ್ ಹೇಳಿದರು.

maithri

ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಸೋಮವಾರ ನಡೆದ ‘ಆಟಿದ ಕೂಟ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ತೆಂಗಿನ ಕೊಂಬನ್ನು ಅರಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆ ಆಟಿ ತಿಂಗಳನ್ನು ಕಷ್ಟದ ತಿಂಗಳು ಎಂದು ಪರಿಗಣಿಸಲಾಗುತ್ತಿತ್ತು. ಆ ಸಂದರ್ಭದಲ್ಲಿ ನಮ್ಮ ಹಿರಿಯರು ಸುತ್ತಮುತ್ತಲಿನಲ್ಲಿ ದೊರೆಯುತ್ತಿದ್ದ ಸೊಪ್ಪು ಹಾಗೂ ಔಷಧೀಯ ಗುಣಗಳನ್ನು ಹೊಂದಿರುವ ಆಹಾರ ಪದಾರ್ಥಗಳನ್ನು ಬಳಸುತ್ತಿದ್ದರು. ಇಂತಹ ಆಹಾರ ಪದ್ಧತಿಯ ಮೂಲಕ ದೇಹವನ್ನು ಸಮತೋಲನದಲ್ಲಿಟ್ಟುಕೊಂಡು ಜೀವನ ಸಾಗಿಸುತ್ತಿದ್ದರು ಎಂದು ಅವರು ವಿವರಿಸಿದರು.

ಆಟಿ ಅಮಾವಾಸ್ಯೆಯಂದು ಹಿರಿಯರು ಮುಂಜಾನೆ ಎದ್ದು ಹಾಲೆಮರದ ಬಳಿ ತೆರಳಿ ಪ್ರಾರ್ಥನೆ ಹಾಗೂ ಪೂಜೆ ಸಲ್ಲಿಸುತ್ತಿದ್ದರು. ಬಳಿಕ ಹಾಲೆಮರದ ಕೆತ್ತೆಯನ್ನು ತಂದು ವಿವಿಧ ವಸ್ತುಗಳನ್ನು ಸೇರಿಸಿ ಕಷಾಯ ತಯಾರಿಸಿ ಸೇವಿಸುತ್ತಿದ್ದರು. ಇದರಿಂದ ದೇಹವನ್ನು ಸದೃಢವಾಗಿಟ್ಟುಕೊಳ್ಳಬಹುದು ಎಂಬ ನಂಬಿಕೆ ಅವರಲ್ಲಿತ್ತು ಎಂದು ತಿಳಿಸಿದರು.

ತುಳುನಾಡಿನಲ್ಲಿ ಆಟಿ ಕಳಂಜ ತಮ್ಮನ್ನು ರಕ್ಷಿಸುತ್ತಾನೆ ಎಂಬ ನಂಬಿಕೆಯೂ ಇದೆ. ಆಟಿ ಕಳಂಜ ಮನೆಗೆ ಬಂದಾಗ ಬೆಲ್ಲ, ಅಕ್ಕಿ ಸೇರಿದಂತೆ ವಿವಿಧ ಪದಾರ್ಥಗಳನ್ನು ನೀಡುವ ಸಂಪ್ರದಾಯವಿದ್ದು, ಅವುಗಳನ್ನು ಆಟಿ ಕಳಂಜ ದೇವರಿಗೆ ಅರ್ಪಿಸುತ್ತಾನೆ ಎಂಬುದು ಹಿರಿಯರ ನಂಬಿಕೆಯಾಗಿತ್ತು ಎಂದು ತೇಜಸ್ ನಾಯ್ಕ್ ಹೇಳಿದರು.

ಸಂಸ್ಥೆಯ ಪ್ರಾಂಶುಪಾಲೆ ಮಾಲತಿ ಡಿ. ಮಾತನಾಡಿ, ನಮ್ಮ ಹಿರಿಯರು ಸೂಕ್ಷ್ಮತೆಯನ್ನು ಹೊಂದಿದ್ದರು. ನಮಗಿಂತ ಮಿಗಿಲಾದ ಒಂದು ಶಕ್ತಿಯ ಮೇಲೆ ನಂಬಿಕೆ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಅಂತಹ ಸೂಕ್ಷ್ಮತೆ ಹಾಗೂ ನಂಬಿಕೆಯನ್ನು ನಾವು ಕೂಡ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ವಿದ್ಯಾರ್ಥಿ ರತುಲ್ ಅದ್ವೈತ ಕೆ. ಪ್ರಾರ್ಥಿಸಿದರು. ವಂಶಿಕಾ ಬಿ. ರೈ ಸ್ವಾಗತಿಸಿದರು. ಕೀರ್ತಿಕಾ ಎಸ್. ಆಚಾರ್ಯ ವಂದಿಸಿದರು. ಹೃಣ್ಮಯಿ ಎಸ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮವು ಆಟಿ ಕಳಂಜನ ಪ್ರವೇಶದೊಂದಿಗೆ ಆರಂಭಗೊಂಡಿತು. ಬಳಿಕ ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಬಿಂಬಿಸುವ ಕಂಗೀಲು ನೃತ್ಯ ಹಾಗೂ ತುಳು ನೃತ್ಯಗಳ ಪ್ರದರ್ಶನ ನಡೆಯಿತು. 8ನೇ ತರಗತಿಯ ವಿದ್ಯಾರ್ಥಿ ತರುಣ್ ಡಿ. ಅವರು ತುಳುನಾಡಿನ ದೈವ ಕೊರಗಜ್ಜನ ಚಿತ್ರವನ್ನು ಸ್ಥಳದಲ್ಲಿಯೇ ಬಿಡಿಸುವ ಮೂಲಕ ಗಮನ ಸೆಳೆದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 128