ಹೊಸದಿಲ್ಲಿ: ಹವಾನಿಯಂತ್ರಕಗಳು, ವಾಷಿಂಗ್ ಮೆಷಿನ್‌ಗಳು, ರೆಫ್ರಿಜರೇಟರ್‌ಗಳು ಹಾಗೂ ಎಲ್‌ಇಡಿ ಟಿವಿಗಳು ಸೇರಿದಂತೆ ಗೃಹೋಪಯೋಗಿ ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆ ಅಕ್ಟೋಬರ್ 1ರಿಂದ ಏರಿಕೆಯಾಗುವ ಸಾಧ್ಯತೆ ಇದೆ. ಉತ್ಪನ್ನಗಳ ಬೆಲೆಯಲ್ಲಿ ಗರಿಷ್ಠ ಶೇ.8ರವರೆಗೆ ಹೆಚ್ಚಳವಾಗಬಹುದು ಎಂದು ವರದಿಯಾಗಿದೆ.
2026ರಲ್ಲಿ ಗೃಹೋಪಯೋಗಿ ಉಪಕರಣಗಳ ಉದ್ಯಮದಲ್ಲಿ ಬೆಲೆ ಏರಿಕೆಯಾಗುತ್ತಿರುವುದು ಇದು ಮೂರನೇ ಬಾರಿಯಾಗಿದೆ. ತಾಮ್ರ, ಅಲ್ಯೂಮಿನಿಯಂ, ಉಕ್ಕು ಹಾಗೂ ಕಚ್ಚಾ ತೈಲ ಆಧಾರಿತ ಉತ್ಪನ್ನಗಳ ಬೆಲೆ ಏರಿಕೆ, ಸರಕು ಸಾಗಣೆ ವೆಚ್ಚ ಹೆಚ್ಚಳ ಹಾಗೂ ಜಾಗತಿಕ ಪರಿಸ್ಥಿತಿಗಳಿಂದ ಉಂಟಾಗಿರುವ ಕರೆನ್ಸಿ ಮೌಲ್ಯದ ಏರಿಳಿತಗಳು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ತಯಾರಕ ಸಂಸ್ಥೆಗಳು ತಿಳಿಸಿವೆ.
ಹವಾನಿಯಂತ್ರಕಗಳ ಬೆಲೆಯಲ್ಲಿ ಶೇ.5ರಿಂದ ಶೇ.8ರವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ. ತಾಮ್ರದ ದರವೂ ಪ್ರತಿ ಮೆಟ್ರಿಕ್ ಟನ್‌ಗೆ 9 ಸಾವಿರ ಡಾಲರ್‌ನಿಂದ 14,500 ಡಾಲರ್‌ವರೆಗೆ ಏರಿಕೆಯಾಗಿದೆ ಎನ್ನಲಾಗಿದೆ.
ರೆಫ್ರಿಜರೇಟರ್‌ಗಳು ಹಾಗೂ ವಾಷಿಂಗ್ ಮೆಷಿನ್‌ಗಳಂತಹ ಪ್ರಮುಖ ಗೃಹೋಪಯೋಗಿ ಉಪಕರಣಗಳ ಬೆಲೆಯಲ್ಲಿ ಶೇ.3ರಿಂದ ಶೇ.4ರವರೆಗೆ ಹೆಚ್ಚಳವಾಗಬಹುದು. ಪೂರೈಕೆ ಸರಪಳಿಯಲ್ಲಿನ ವ್ಯತ್ಯಯದಿಂದ ಟೆಲಿವಿಷನ್‌ಗಳ ದರವೂ ಹೆಚ್ಚಾಗುವ ಸಾಧ್ಯತೆ ಇದೆ. ಸಣ್ಣ ಪರದೆಯ ಟಿವಿಗಳ ಬೆಲೆಯಲ್ಲಿ ಶೇ.20ರವರೆಗೆ ಹಾಗೂ ದೊಡ್ಡ ಪರದೆಯ ಮಾದರಿಗಳಲ್ಲಿ ಶೇ.10ರವರೆಗೆ ಏರಿಕೆಯಾಗುವ ಸಾಧ್ಯತೆ ಇದೆ.
ಡೈಕಿನ್, ಬ್ಲೂಸ್ಟಾರ್, ಎಲ್‌ಜಿ, ಬಾಷ್ ಹಾಗೂ ಗೋಡ್ರೆಜ್ ಸೇರಿದಂತೆ ಪ್ರಮುಖ ಎಲೆಕ್ಟ್ರಾನಿಕ್ ಬ್ರಾಂಡ್‌ಗಳು ಈಗಾಗಲೇ ತಮ್ಮ ಉತ್ಪನ್ನಗಳ ದರಗಳನ್ನು ಪರಿಷ್ಕರಿಸಿರುವುದಾಗಿ ವರದಿಯಾಗಿದೆ.
ಇನ್ನು, ಗೃಹೋಪಯೋಗಿ ಎಲೆಕ್ಟ್ರಾನಿಕ್ ಉತ್ಪನ್ನಗಳ ವಾರ್ಷಿಕ ಮಾರಾಟದ ಸುಮಾರು ಶೇ.30ರಿಂದ ಶೇ.40ರಷ್ಟು ಓಣಂನಿಂದ ದೀಪಾವಳಿವರೆಗಿನ ಹಬ್ಬದ ಅವಧಿಯಲ್ಲೇ ನಡೆಯುತ್ತದೆ. ಹೀಗಾಗಿ ಹಬ್ಬದ ಋತುವಿನಲ್ಲೇ ಬೆಲೆ ಏರಿಕೆಯಾಗುತ್ತಿರುವುದು ತಯಾರಕರು ಹಾಗೂ ಮಾರಾಟಗಾರರಿಗೆ ಸವಾಲಾಗಿ ಪರಿಣಮಿಸಿದೆ.
ಆದರೆ, ಬೆಲೆ ಏರಿಕೆಗೆ ಮುನ್ನವೇ ಡೀಲರ್‌ಗಳು ಮತ್ತು ವಿತರಕರು ಸಾಕಷ್ಟು ಪ್ರಮಾಣದಲ್ಲಿ ಉತ್ಪನ್ನಗಳನ್ನು ದಾಸ್ತಾನು ಮಾಡಿಕೊಂಡಿರುವುದರಿಂದ, ದೀಪಾವಳಿ ವೇಳೆಯಲ್ಲಿಯೂ ಕೆಲವು ಉತ್ಪನ್ನಗಳು ಹಳೆಯ ದರದಲ್ಲೇ ಗ್ರಾಹಕರಿಗೆ ಲಭ್ಯವಾಗುವ ಸಾಧ್ಯತೆ ಇದೆ.
























