ಟ್ರೆಂಡಿಂಗ್ ನ್ಯೂಸ್

ಎಸ್.ಆರ್.ಕೆ. ಲ್ಯಾಡರ್ಸ್ ಮಾಲಕ ಕೇಶವ ಅಮೈ ಅವರಿಗೆ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪ್ರದಾನ | ಜೂನ್ 29ರಂದು ದರ್ಬೆ ವೃತ್ತದಲ್ಲಿ ಸ್ವಾಗತ, ಮುಕ್ರಂಪಾಡಿವರೆಗೆ ಮೆರವಣಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಎಸ್.ಆರ್.ಕೆ. ಲ್ಯಾಡರ್ಸ್ ಮಾಲಕ ಕೇಶವ ಅಮೈ ಅವರಿಗೆ ನಾಡಪ್ರಭು ಕೆಂಪೇಗೌಡ ಪ್ರತಿಷ್ಟಾನದಿಂದ ಕೊಡಮಾಡುವ ‘ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ’ಯನ್ನು ಶನಿವಾರ ಸಂಜೆ ಬೆಂಗಳೂರಿನ ಡಾ|ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು.

maithri

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಗಣ್ಯರಿಗೆ ನಾಡಪ್ರಭು ಕೆಂಪೇಗೌಡರ 517ನೇ ಜನ್ಮದಿನೋತ್ಸವದ ಅಂಗವಾಗಿ ರಾಜ್ಯ ಪ್ರಶಸ್ತಿ ನೀಡಿಗೌರವಾರ್ಪಣೆ ಮಾಡಲಾಯಿತು.

ಬೆಂಗಳೂರಿನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಸೀಠಾಧ್ಯಕ್ಷ ಡಾ. ಶ್ರೀ ನಿರ್ಮದಾನಂದನಾಥ ಸ್ವಾಮೀಜಿ, ಚಿತ್ರದುರ್ಗ ಶ್ರೀ ಮಾದರ ಚೆನ್ನಯ್ಯ ಮಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಭಾರತದ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ಕೇಶವ ಅಮೈ ದಂಪತಿಗೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು.

ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ವಿ.ಸೋಮಣ್ಣ, ಮಾಜಿ ಉಪಮುಖ್ಯಮಂತ್ರಿ ಡಾ|ಸಿ.ಎನ್.ಅಶ್ವತ್ ನಾರಾಯಣ್, ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ಅಧ್ಯಕ್ಷ ಪ್ರೊ|ಎಂ.ಕೃಷ್ಣಗೌಡ, ಪದ್ಮಶ್ರೀ ಪುರಸ್ಕೃತ ಡಾ|ಪ್ರಶಾಂತ್ ಪ್ರಕಾಶ್ ಸಹಿತ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಕೇಶವ ಅಮೈ ಅವರ ಪತ್ನಿ ಮಾಲತಿ, ಪುತ್ರ ಗಗನ್ ಅಲ್ಲದೆ ಕೇಶವ ಅಮೈ ಅವರ ಆಪ್ತರು ಈ ಸಂದರ್ಭ ಜೊತೆಯಲ್ಲಿದ್ದರು. ಪ್ರಶಸ್ತಿಯು 3 ಗ್ರಾಂ ಬೆಳ್ಳಿಯ ಪದಕ, ರೂ. 25 ಸಾವಿರದ ಚೆಕ್ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿತ್ತು.

ಕೇಶವ ಅಮೈ ಅವರು ಕೃಷಿಕರ ಅನುಕೂಲಕ್ಕಾಗಿ ಬಹಳ ಹಗುರವಾದ ಏಣಿ ತಯಾರಿಕೆಯ ಮೂಲಕ ಕೃಷಿಕರ ಮಿತ್ರರಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಕರಿಮೆಣಸು ಬೇರ್ಪಡಿಸುವಿಕೆ, ಅಡಿಕೆ ಗೊನೆ ಬೇರ್ಪಡಿಸುವ ಯಂತ್ರಗಳ ಸಂಶೋಧನೆಯಲ್ಲಿಯೂ ಅವರು ಯಶಸ್ಸುಕಂಡಿದ್ದರು. ಇದರ ಜೊತೆಗೆ ತೋಟದೊಳಗೆ ಸಾಗಾಟಕ್ಕೆ ಅನುಕೂಲಕರ ವಾಹನ ಸಹಿತ ಕೃಷಿಕ್ಷೇತ್ರಕ್ಕಾಗಿ ನಾನಾ ಉಪಕರಣ ಸಾಧನ ಆವಿಷ್ಕರಿಸಿದ್ದಾರೆ. ಕೃಷಿಕರಿಗೆ ಅಗತ್ಯವಾಗುವ ಸಾಧನಗಳಿಗಾಗಿ ನಿರಂತರ ಸಂಶೋಧನೆ ಮಾಡುತ್ತಿರುವುದನ್ನು ಗುರುತಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.

ನಾಳೆ ಪುತ್ತೂರಿನಲ್ಲಿ ಸ್ವಾಗತ

‘ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ’ ಪುರಸ್ಕೃತರಾಗಿರುವ ಕೇಶವ ಅಮೈ ಅವರು ಜೂ. 29ರಂದು ಪುತ್ತೂರಿಗೆ ಆಗಮಿಸುವ ಸಂದರ್ಭ ಬೆಳಿಗ್ಗೆ ದರ್ಬೆ ವೃತ್ತದಿಂದ ಅವರನ್ನು ಸ್ವಾಗತಿಸಿ, ಮೆರವಣಿಗೆ ಮೂಲಕ ಸಂಸ್ಥೆಯ ಮುಕ್ರಂಪಾಡಿ ಎಸ್.ಆರ್.ಕೆ. ಲಾಡರ್ ಸಂಸ್ಥೆಗೆ ಕರೆದುಕೊಂಡು ಹೋಗಲಾಗುವುದು ಎಂದು ತಿಳಿದುಬಂದಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts