ಪುತ್ತೂರು: ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಸಹಕಾರ ಸಂಜೀವಿನಿ ವಿಮೆ ಯೋಜನೆ ಜಾರಿಗೊಳಿಸುತ್ತಿದ್ದು, ಇದರ ಉದ್ಘಾಟನಾ ಸಮಾರಂಭ ಮೇ 25ರಂದು ಬೆಳಿಗ್ಗೆ 10ಕ್ಕೆ ಸಂಪ್ಯ ಸಹಕಾರಿ ಸಂಘದ ಕೇಂದ್ರ ಕಚೇರಿಯಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಹೆಚ್. ಮಹಮ್ಮದ್ ಆಲಿ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರ ಸಂಘದ ಸದಸ್ಯರ ಆರೋಗ್ಯ ಸುರಕ್ಷತೆಗಾಗಿ ರೂಪಿಸಿರುವ ಈ ಯೋಜನೆಯ ಉದ್ಘಾಟನೆಯನ್ನು ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಕಿಶೋರ್ ಕುಮಾರ್ ಪುತ್ತೂರು, ದ.ಕ. ಜಿಲ್ಲಾ ಸಹಕಾರಿ ಯೂನಿಯರ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಪುತ್ತೂರು ಉಪವಿಭಾಗದ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಎಸ್.ಎಂ.ರಘು ಮುಖ್ಯಅತಿಥಿಗಳಾಗಿರುವರು ಎಂದು ವಿವರಿಸಿದರು.
ಯೋಜನೆಯ ಲಾಭ ಪಡೆದುಕೊಳ್ಳುವುದು ಹೇಗೆ?
– ಸಂಘದ “ಅ” ತರಗತಿ ಸದಸ್ಯರು ರೂಪಾಯಿ 500/-ರಂತೆ ಪ್ರತಿ ವರ್ಷದಲ್ಲಿ ತೊಡಗಿಸುವುದು.
– ಪ್ರತೀ ವರ್ಷ ಪ್ರೀಮಿಯಂ ಮೊತ್ತವನ್ನು ತೊಡಗಿಸಿದ ಸದಸ್ಯನಿಗೆ ಮಾತ್ರ ಸೌಲಭ್ಯ ನೀಡಲಾಗುವುದು.
– ಹೊಸದಾಗಿ ಸದಸ್ಯತ್ವ ಪಡೆಯುವ ಸದಸ್ಯರು ಸದಸ್ಯತ್ವ ಪಡೆದ ದಿನಾಂಕದಿಂದ 2 ತಿಂಗಳ ನಂತರ ಈ ಯೋಜನೆಗೆ ಸೇರ್ಪಡೆಗೊಳ್ಳಲು ಅರ್ಹತೆಯನ್ನು ಹೊಂದಿರುತ್ತಾರೆ.
– ಪ್ರತೀ ವರ್ಷ ಪ್ರೀಮಿಯಂ ಮೊತ್ತವನ್ನು ತೊಡಗಿಸುವ ಸಮಯದಲ್ಲಿ ತನ್ನ ವಾರೀಸುದಾರರನ್ನು ಸ್ಪಷ್ಟವಾಗಿ ಸಂಘದ ಅರ್ಜಿಯಲ್ಲಿ ಭರ್ತಿ ಮಾಡಿ ಲಿಖಿತವಾಗಿ ಸಹಿ ಮಾಡತಕ್ಕದ್ದು. ವಾರೀಸುದಾರರ ಆಧಾರ್ ಕಾರ್ಡ್ ಪ್ರತಿಯನ್ನು ಲಗತ್ತಿಸತಕ್ಕದ್ದು.
– ಸದಸ್ಯನ ಪಾಲ್ಗೊಳ್ಳುವಿಕೆ ಐಚ್ಛಿಕವಾಗಿರುತ್ತದೆ.
ನಿಬಂಧನೆಗಳು :
– “ಅ” ತರಗತಿ ಸಾಲಗಾರ ಸದಸ್ಯರು ಸಂಘದಲ್ಲಿ ಸಾಲದ ವ್ಯವಹಾರ ಹೊಂದಿರುವ ಸಂದರ್ಭದಲ್ಲಿ ಆಕಸ್ಮಿಕ ಅವಘಡಗಳಿಂದ ಮೃತಪಟ್ಟಲ್ಲಿ ಸದ್ರಿ ನಿಧಿಯಿಂದ ಸಾಲಗಾರ ಸದಸ್ಯನ ಸಾಲದ ಖಾತೆಗೆ ಗರಿಷ್ಟ ರೂಪಾಯಿ 1,00,000/- ಸಾಲಕ್ಕೆ ವಜಾ ಮಾಡಿ ಕೊಡುವುದು. ಸದಸ್ಯರು ರೂಪಾಯಿ 1,00,000/-ಕ್ಕಿಂತ ಕಡಿಮೆ ಸಾಲವನ್ನು ಹೊಂದಿದಲ್ಲಿ ಉಳಿಕೆ ಮೊತ್ತವನ್ನು ವಾರೀಸುದಾರರಿಗೆ ನೀಡಲಾಗುವುದು. ಸಾಲರಹಿತ ಸದಸ್ಯರಾಗಿದ್ದರೆ ಅವರ ವಾರೀಸುದಾರರಿಗೆ ಪೂರ್ತಿ ರೂಪಾಯಿ 1.00.000/-ವನ್ನು ನೀಡಲಾಗುವುದು.
– ಆಕಸ್ಮಿಕ ಅವಘಡಗಳು ಅಂದರೆ ರಸ್ತೆ ಅಪಘಾತ, ಕೃಷಿ ಯಂತ್ರೋಪಕರಣಗಳಿಂದ, ಅಗ್ನಿ ಅವಘಡ, ಕೃಷಿ ಚಟುವಟಿಕೆಗಳ ಸಂದರ್ಭಹಾವು ಕಡಿತ, ಕಾಡುಪ್ರಾಣಿಗಳ ದಾಳಿಯಿಂದ, ಮರದಿಂದ ಬಿದ್ದು. ನೀರಿನಲ್ಲಿ ಮುಳುಗಿ ಮೃತಪಟ್ಟ ಸಂದರ್ಭ ಪೋಲೀಸ್ ಠಾಣೆಯಲ್ಲಿ FIR ದಾಖಲಿಸಿ ಅದರ ಪ್ರತಿಯನ್ನು ಒದಗಿಸತಕ್ಕದ್ದು ಹಾಗೂ ಮಾರಣಾಂತಿಕ ಕಾಯಿಲೆಗಳಾದ ಅರ್ಬುದ (ಕ್ಯಾನ್ಸರ್) ರೇಬಿಸ್, ಕಾಮಾಲೆ (ಜಾಂಡಿಸ್) ಕಾಯಿಲೆ ಮತ್ತು ಕಿಡ್ನಿ ವೈಫಲ್ಯದಿಂದ ಮೃತಪಟ್ಟ ಸಂದರ್ಭ ಆಸ್ಪತ್ರೆಯ ಡಿಸ್‌ಚಾರ್ಜು ಸಮ್ಮರಿ ಮತ್ತು ಆಸ್ಪತ್ರೆಯ ಬಿಲ್ಲಿನ ದೃಢೀಕೃತ ಪ್ರತಿಯನ್ನು ಒದಗಿಸತಕ್ಕದ್ದು.
– ಸಹಕಾರ ಸಂಘದ ಸದಸ್ಯರು ಸಹಜ ಮರಣವನ್ನು ಹೊಂದಿದರೆ ಗರಿಷ್ಟ ರೂಪಾಯಿ 5,000/- ಸಂಘದ ದಾಖಲೆಯಲ್ಲಿ ನಮೂದಿಸಿ ಸಹಿ ಮಾಡಲ್ಪಟ್ಟಿರುವ ವಾರೀಸುದಾರರಿಗೆ ನೀಡುವುದು.
– ಸಾಲಗಾರ ಸದಸ್ಯರು ಸಂಘದಲ್ಲಿ ಸಾಲ ಹೊಂದಿರುವ ಸಂದರ್ಭದಲ್ಲಿ ಹೃದಯ ಸಂಬಂಧಿತ, ಉದರ ಸಂಬಂಧಿತ, ಬೆನ್ನುಮೂಳೆ, ಅರ್ಬುದ (ಕ್ಯಾನ್ಸರ್), ಕಿಡ್ನಿಕಸಿ, ಕಿಡ್ನಿಸ್ಟೋನ್, ಮಿದುಳು. ಆಸ್ತಿಮಜ್ಜೆ, ಮಂಡಿಚಿಪ್ಪು ಶಸ್ತ್ರಚಿಕಿತ್ಸೆಗಳಿಗೆ ಪಾರ್ಶ್ವವಾಯು ಚಿಕಿತ್ಸೆಗೆ ಅಲ್ಲದೆ ಕೃಷಿಕ ರೈತ ಸದಸ್ಯರು ಕೃಷಿ ಕೆಲಸ ಮಾಡುವ ಸಂದರ್ಭದಲ್ಲಿ, ವಾಹನ, ಸಾರಿಗೆ, ರಸ್ತೆ, ಕೃಷಿ ಯಂತ್ರೋಪಕರಣಗಳಿಂದ ಅಪಘಾತಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೆ ಒಳಪಟ್ಟರೂ ಅನ್ವಯಿಸುವುದು. ಈ ಮೊತ್ತವು ಆಸ್ಪತ್ರೆಯ ಚಿಕಿತ್ಸಾ ಬಿಲ್ಲಿನ ಮೊತ್ತ ಯಾ ಗರಿಷ್ಟ ರೂಪಾಯಿ 50,000/- ಮಾತ್ರ ನೀಡಲಾಗುವುದು. ಈ ಸೌಲಭ್ಯವು ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ನೀಡಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಸುರೇಂದ್ರ ರೈ ಬಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್ ರೈ, ನಿರ್ದೇಶಕರಾದ ಗಣೇಶ್ ರೈ ಕುರಿಯ, ಸಂಶುದ್ದೀನ್ ಕುರಿಯ, ತೆರೆಜಾ ಸಿಕ್ವೇರಾ ಉಪಸ್ಥಿತರಿದ್ದರು.























