ಅಪರಾಧ

ಕೊಳ್ನಾಡಿನಲ್ಲಿ ಅಕ್ರಮ ಗೋ ಸಾಗಾಟ: ಚಾಲಕ ಹನೀಫ್ ವಶಕ್ಕೆ, ಇನ್ನೋರ್ವ ಪರಾರಿ!!

GL

ಈ ಸುದ್ದಿಯನ್ನು ಶೇರ್ ಮಾಡಿ

ವಿಟ್ಲ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕ್‌ಅಪ್ ವಾಹನವನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದು, ಚಾಲಕನನ್ನು ಬಂಧಿಸಿರುವ ಘಟನೆ ಬಂಟ್ವಾಳ ತಾಲೂಕಿನ ಕೊಳ್ನಾಡು ಪಂಜರಕೋಡಿಯಲ್ಲಿ ಮೇ 21ರಂದು ಬೆಳಿಗ್ಗೆ ನಡೆದಿದೆ.

maithri

ಪಿಕ್‌ಅಪ್ ವಾಹನ ಪರಿಶೀಲಿಸಿದಾಗ ಎರಡು ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿರುವುದು ಪತ್ತೆಯಾಯಿತು. ವಾಹನ ಚಾಲಕ ಬಂಟ್ವಾಳ ಬಾಳೆಪುಣಿ ನಿವಾಸಿ ಮೊಹಮ್ಮದ್ ಹನೀಪ್ (44) ಅವರನ್ನು ವಿಚಾರಿಸಿದಾಗ ಯಾವುದೇ ಪರವಾನಿಗೆ ಪಡೆಯದೇ ಜಾನುವಾರುಗಳನ್ನು ವಧೆಗಾಗಿ ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಅಕ್ರಮ ಗೋಸಾಗಾಟ ನಡೆಯುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ (ಕಾ&ಸು) ರಾಮಕೃಷ್ಣ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದ್ದರು. ಈ ವೇಳೆ KA-19-D-1496 ನೋಂದಣಿಯ ಪಿಕ್‌ಅಪ್ ವಾಹನವನ್ನು ತಡೆದು ಪರಿಶೀಲಿಸಲಾಯಿತು.

ಈ ಸಂದರ್ಭ ಪಿಕ್‌ಅಪ್ ವಾಹನಕ್ಕೆ ಬೆಂಗಾವಲಾಗಿ ಬಂದಿದ್ದ KA-21-MA-0801 ನೋಂದಣಿಯ ಸ್ವಿಫ್ಟ್ ಕಾರಿನಲ್ಲಿದ್ದ ಬಶೀರ್ ಎಂಬಾತನು ಪೊಲೀಸರ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಕಾರು ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಚಾಲಕನನ್ನು ವಶಕ್ಕೆ ಪಡೆದು, ಕೃತ್ಯಕ್ಕೆ ಬಳಸಿದ ವಾಹನ ಹಾಗೂ ಎರಡು ಜಾನುವಾರುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಸಂಬಂಧ ಮೊಹಮ್ಮದ್ ಹನೀಪ್ ಹಾಗೂ ಪರಾರಿಯಾಗಿರುವ ಬಶೀರ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ.114/2026 ದಾಖಲಿಸಿಕೊಂಡು, ಬಿ.ಎನ್.ಎಸ್ 2023ರ ಕಲಂ 118(1), 109, 132 ಹಾಗೂ 3(5), ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧ ಮತ್ತು ಸಂರಕ್ಷಣಾ ಅಧಿನಿಯಮ 2020ರ ಕಲಂ 5, 7, 12 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960ರ ಕಲಂ 11ರಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 110