ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯ ಚಿನ್ನದ ಅಂಬಾರಿ ಹೊರುವ ಗಜಪಡೆಯ ನಾಯಕ ‘ಅಭಿಮನ್ಯು’ ಆನೆಯ ಎಡಭಾಗದ ದಂತ ಮುರಿದಿರುವ ಘಟನೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮತ್ತಿಗೋಡು ಆನೆ ಶಿಬಿರದಲ್ಲಿ ನಡೆದಿದೆ.
ಆನೆ ಸಂಪೂರ್ಣ ಆರೋಗ್ಯವಾಗಿದ್ದು, ಮುಂಬರುವ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊರುವ ಕರ್ತವ್ಯಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.
ಮಾಹಿತಿಯ ಪ್ರಕಾರ, ಶಿಬಿರದಲ್ಲಿ ನಿಯಮಿತ ಕಾರ್ಯಾಚರಣೆಯ ಭಾಗವಾಗಿ ಮರದ ದಿಮ್ಮಿಗಳನ್ನು ಸ್ಥಳಾಂತರಿಸುವ ವೇಳೆ ಈ ಅವಘಡ ಸಂಭವಿಸಿದೆ. ಭಾರೀ ಗಾತ್ರದ ಮರದ ದಿಮ್ಮಿ ಆಕಸ್ಮಿಕವಾಗಿ ವಾಲಿದ ಪರಿಣಾಮ, ಅದು ಅಭಿಮನ್ಯುವಿನ ಎಡಭಾಗದ ದಂತಕ್ಕೆ ಬಡಿದಿದೆ. ಪರಿಣಾಮ ದಂತದ ಮುಂದಿನ ತುದಿಯ ಭಾಗ ಮುರಿದಿದೆ.
ಅಭಿಮನ್ಯು ಕಾಡಾನೆ ಕಾರ್ಯಾಚರಣೆ ಹಾಗೂ ಹುಲಿ ಸಂರಕ್ಷಣಾ ಕಾರ್ಯಗಳಲ್ಲಿ ಹಲವು ವರ್ಷಗಳಿಂದ ಪ್ರಮುಖ ಪಾತ್ರ ವಹಿಸಿದ್ದು, ಅದರ ಬಲಿಷ್ಠ ದಂತವೇ ಕಾರ್ಯಾಚರಣೆಗಳಲ್ಲಿ ಪ್ರಮುಖ ಆಧಾರವಾಗಿತ್ತು. ಘಟನೆಯ ಬಳಿಕ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಪಶುವೈದ್ಯರ ತಂಡ ಅಭಿಮನ್ಯುವನ್ನು ಪರೀಕ್ಷಿಸಿದ್ದು, ಯಾವುದೇ ಗಂಭೀರ ಗಾಯಗಳಿಲ್ಲ ಎಂದು ತಿಳಿಸಿದೆ. ದಂತದ ತುದಿ ಮಾತ್ರ ಮುರಿದಿದ್ದು, ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಕಾಲಕ್ರಮೇಣ ದಂತವು ನೈಸರ್ಗಿಕವಾಗಿ ಮತ್ತೆ ಬೆಳೆಯುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
2020ರಿಂದ ಸತತವಾಗಿ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುತ್ತಿರುವ ಅಭಿಮನ್ಯು, 2026ರ ದಸರಾ ಮಹೋತ್ಸವದಲ್ಲೂ ಗಜಪಡೆಯ ನಾಯಕನಾಗಿ ಕರ್ತವ್ಯ ನಿರ್ವಹಿಸಲಿದ್ದಾನೆ. ದಂತ ಮುರಿದಿರುವುದು ಅಂಬಾರಿ ಹೊರುವ ಸಾಮರ್ಥ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅರಣ್ಯ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ. ಈ ಹಿನ್ನೆಲೆಯಲ್ಲಿ, ಸತತ 7ನೇ ಬಾರಿ ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಈ ಬಾರಿ ಮುರಿದ ದಂತದೊಂದಿಗೆ ಜಂಬೂ ಸವಾರಿಯಲ್ಲಿ ಕಾಣಿಸಿಕೊಳ್ಳಲಿದ್ದಾನೆ.





















