ಪುತ್ತೂರು: ಕುಟುಂಬ ಅಭಿವೃದ್ಧಿ ಹೊಂದಬೇಕಾದರೆ ಯುವಕರಿಗೆ ಉದ್ಯೋಗ ಸಿಗಬೇಕು. ಇಲ್ಲಿರುವ 150 ಜನರಿಗಾದರೂ ಹುದ್ದೆ ಸಿಕ್ಕಿದರೆ ಒಂದು ದೇವಸ್ಥಾನ ಕಟ್ಟಿದ ಪುಣ್ಯ ಬರುತ್ತದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು ರೈ ಎಸ್ಟೇಟ್ಸ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಶನಿವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಮೂರನೇ ಸುತ್ತಿನ ಕಾರ್ಯಾಗಾರದಲ್ಲಿ ಮಾತನಾಡಿದರು.
ಧರ್ಮದ ಅಮಲಿನಿಂದ ಸಮಾಜ, ಕುಟುಂಬ ಉದ್ಧಾರ ಆಗಲು ಸಾಧ್ಯವಿಲ್ಲ. ಧರ್ಮ ನಮಗೆಲ್ಲಾ ಬೇಕು. ಆದರೆ ಪ್ರತಿ ಕುಟುಂಬವೂ ಅಭಿವೃದ್ಧಿ ಆಗಬೇಕಾದರೆ ಆ ಮನೆಯ ಒಬ್ಬ ವ್ಯಕ್ತಿಯಾದರೂ ಉತ್ತಮ ಹುದ್ದೆಯಲ್ಲಿ ಇರಬೇಕು. ಹಾಗೆಂದು ಇದರಲ್ಲಿ ನಮಗ್ಯಾವ ಅಪೇಕ್ಷೆಯೂ ಇಲ್ಲ. ಸಮಾಜ ಮುಂದುವರಿಯಬೇಕು ಅಷ್ಟೇ ನಮ್ಮ ಉದ್ದೇಶ ಎಂದರು.
ಮನಸ್ಸಿನಲ್ಲಿ ಯಾವುದೇ ಗೊಂದಲ ಬೇಡ. ಮನಸ್ಸನ್ನು ಮುಕ್ತವಾಗಿಡಿ. ಪ್ರಶ್ನೆಗಳನ್ನು ಕೇಳಿ. ಆಗ ನಿಮಗೆ ಸಾಕಷ್ಟು ಅನುಭವ ಪಡೆದುಕೊಳ್ಳಬಹುದು. ಕರಾವಳಿಯಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ನಕಲು ಮಾಡಿರುವುದಿಲ್ಲ. ಹಾಗಾಗಿ ಅಂಕ ಕಡಿಮೆ ಬಂದಿರಬಹುದು. ಹಾಗೆಂದು ಹಿಂಜರಿಕೆಯೂ ಬೇಡ. ಧೈರ್ಯದಿಂದ ಮುಂದುವರಿಯಿರಿ. ಯಾವುದೇ ಸಂದೇಹಗಳಿದ್ದರೂ ತನ್ನನ್ನು ಭೇಟಿಯಾಗಿ ಎಂದ ಅವರು, ಶುಭಹಾರೈಸಿದರು.
72 ಸಾವಿರ ಹುದ್ದೆಗಳಿಗೆ ನೇಮಕಾತಿ:
ರಾಜ್ಯ ಸರಕಾರವು ಮುಂದಿನ 6 ತಿಂಗಳಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 72 ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಲಿದ್ದು, ಅದಕ್ಕಾಗಿ ಆರ್ಥಿಕ ಅನುಮೋದನೆಯನ್ನೂ ಪಡೆಯಲಾಗಿದೆ. ಹೀಗಾಗಿ ಅವಿಭಜಿತ ದ.ಕ.ಜಿಲ್ಲೆಯ ಉದ್ಯೋಗಾಕಾಂಕ್ಷಿಗಳು ಸರಕಾರಿ ಉದ್ಯೋಗದ ಕುರಿತು ತಪ್ಪು ಕಲ್ಪನೆಯನ್ನು ಬಿಟ್ಟು ಕಠಿನ ಪರಿಶ್ರಮದ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಪ್ರಸ್ತುತ 570 ಭೂಮಾಪಕರು, 505 ಗ್ರಾಮ ಆಡಳಿತ ಅಧಿಕಾರಿಗಳು, ವಸತಿ ಶಾಲೆಗಳ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿದ್ದು, ಅದಕ್ಕೂ ತರಬೇತಿ ನೀಡುವ ಕಾರ್ಯ ಮಾಡಲಾಗುವುದು ಎಂದರು.
ಪುತ್ತೂರು ಡಿವೈಎಸ್ಪಿ ಪ್ರಮೋದ್ ಕುಮಾರ್ ಮಾತನಾಡಿ, ನಾವು ಯಾವುದೇ ಕೆಲಸಗಳನ್ನು ಮಾಡುವುದಾದರೂ ಅದಕ್ಕೆ ತಯಾರಿ, ಯೋಜನೆಗಳು ಅಗತ್ಯವಾಗಿದ್ದು, ಅದೇ ರೀತಿ ಪ್ರತಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಠಿನ ಶ್ರಮ ಅಗತ್ಯವಾಗಿದೆ. ಆತ್ಮವಿಶ್ವಾಸ, ದೃಢನಿರ್ಧಾರ ಇದ್ದಾಗ ಮಾತ್ರ ಯಶಸ್ಸು ಗಳಿಸುವುದು ಸಾಧ್ಯ. ಸ್ಥಳೀಯ ಅಭ್ಯರ್ಥಿಗಳು ಪೊಲೀಸ್ ಇಲಾಖೆಗೆ ಬಂದಾಗ ಇಲ್ಲಿನ ಜನರ ಜತೆಗೆ ಬೆರೆತು ಶಾಂತಿಯುತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎನ್ನುವ ನಿಟ್ಟಿನಲ್ಲಿ ಇಲಾಖೆಯು ಸ್ಥಳೀಯರ ಕುರಿತು ಹೆಚ್ಚಿನ ಒಲವು ವ್ಯಕ್ತಪಡಿಸಿದೆ ಎಂದರು.
ವೇದಿಕೆಯಲ್ಲಿ ಪುತ್ತೂರು ನಗರ ಇನ್ಸ್‌ಪೆಕ್ಟರ್ ಜಾನ್ಸನ್ ಡಿಸೋಜ, ಪುತ್ತೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ, ಪುಡಾ ಅಧ್ಯಕ್ಷ ಅಮಲ ರಾಮಚಂದ್ರ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ತರಬೇತುದಾರರಾದ ಹರೀಶ್ ಶೆಟ್ಟಿ, ಗಿರೀಶ್ ಶೆಟ್ಟಿ ಉಪಸ್ಥಿತರಿದ್ದರು.
ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಸ್ವಾಗತಿಸಿದರು. ಪುಡಾ ಸದಸ್ಯ ನಿಹಾಲ್ ಶೆಟ್ಟಿ ವಂದಿಸಿದರು. ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಕಾರ್ಯಕ್ರಮ ನಿರೂಪಿಸಿದರು.




















