ಸ್ಥಳೀಯ

ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತ್ಯೇಕ ಆನೆ ಕಾರ್ಯಪಡೆ: ಸರ್ಕಾರದ ಮಹತ್ವದ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಅರಣ್ಯ ವಿಭಾಗಕ್ಕೆ ಪ್ರತ್ಯೇಕ ಆನೆ ಕಾರ್ಯಪಡೆಯನ್ನು ಮಂಜೂರು ಮಾಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಕಾಡಾನೆಗಳ ಉಪಟಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

maithri

ಇತ್ತೀಚಿನ ವರ್ಷಗಳಲ್ಲಿ ಉಪ್ಪಿನಂಗಡಿ, ಸುಳ್ಯ, ಬೆಳ್ತಂಗಡಿ, ಪುತ್ತೂರು, ಪಂಜ ಮತ್ತು ಸುಬ್ರಹ್ಮಣ್ಯ ಭಾಗಗಳಲ್ಲಿ ಕಾಡಾನೆಗಳ ದಾಳಿ ಪ್ರಕರಣಗಳು ಹೆಚ್ಚಾಗಿವೆ. ಬೆಳೆ ಹಾನಿ ಹಾಗೂ ಮಾನವ ಸಾವಿನ ಘಟನೆಗಳು ಜನರಲ್ಲಿ ಆತಂಕ ಮೂಡಿಸಿದ್ದವು. ಆನೆಗಳು ಜನವಸತಿ ಪ್ರದೇಶಗಳಿಗೆ ನುಗ್ಗಿದಾಗ ಮಡಿಕೇರಿ ವಿಭಾಗದಿಂದ ಕಾರ್ಯಪಡೆಯನ್ನು ಕರೆಯಿಸಬೇಕಾಗುತ್ತಿದ್ದ ಕಾರಣ ತ್ವರಿತ ಕ್ರಮ ಕೈಗೊಳ್ಳುವಲ್ಲಿ ವಿಳಂಬವಾಗುತ್ತಿತ್ತು.

ಈ ಪರಿಸ್ಥಿತಿಯನ್ನು ಪರಿಗಣಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮಂಗಳೂರು ವಿಭಾಗದ ಅಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತ್ಯೇಕ ಆನೆ ಕಾರ್ಯಪಡೆ ರಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರ ಇದೀಗ ಕಾರ್ಯಪಡೆ ರಚನೆಗೆ ಅನುಮೋದನೆ ನೀಡಿದೆ.

ಒಟ್ಟು 28 ಸದಸ್ಯರ ಕಾರ್ಯಪಡೆ ರಚಿಸಲಾಗಿದ್ದು, ಇದರಲ್ಲಿ ಒಬ್ಬ ಉಪ ವಲಯ ಅರಣ್ಯ ಅಧಿಕಾರಿ, ಇಬ್ಬರು ಅರಣ್ಯ ಸಿಬ್ಬಂದಿ ಹಾಗೂ 25 ವಾಹನ ಚಾಲಕರು ಅಥವಾ ಗುತ್ತಿಗೆ ಆಧಾರಿತ ಸಮಾನ ಸಿಬ್ಬಂದಿ ಇರಲಿದ್ದಾರೆ.ಕಾರ್ಯಪಡೆಯ ಪ್ರಧಾನ ಕಚೇರಿ ಸುಳ್ಯದಲ್ಲಿ ಸ್ಥಾಪಿಸಲಾಗುತ್ತಿದ್ದು, ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನಿರ್ದೇಶನದಲ್ಲಿ ಈ ತಂಡ ಕಾರ್ಯನಿರ್ವಹಿಸಲಿದೆ.

ಈ ಕ್ರಮದಿಂದ ಕಾಡಾನೆ ಸಮಸ್ಯೆಗೆ ತ್ವರಿತ ಸ್ಪಂದನೆ ಸಾಧ್ಯವಾಗಲಿದ್ದು, ರೈತರ ಬೆಳೆ ಹಾನಿ ಹಾಗೂ ಮಾನವ ಜೀವಹಾನಿ ಪ್ರಕರಣಗಳನ್ನು ನಿಯಂತ್ರಿಸಲು ನೆರವಾಗುವ ನಿರೀಕ್ಷೆ ವ್ಯಕ್ತವಾಗಿದೆ.

 


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 124