ತಿರುಪತಿ ತಿರುಮಲಕ್ಕೆ ಭೇಟಿ ನೀಡುವ ಭಕ್ತರ ಅನುಕೂಲದ ದೃಷ್ಟಿಯಿಂದ ‘ವೆಂಕಟಾದ್ರಿ” (Venkatadri) ಮೊಬೈಲ್ ಆ್ಯಪ್ ಅನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಗಿದೆ.
ಕೊಠಡಿಗಳ ಕೌಂಟರ್, ಕ್ಯೂ ಲೈನ್, ಪ್ರಮುಖ ಸ್ಥಳಗಳ ನಿಖರ ಮಾಹಿತಿ ಸೇರಿದಂತೆ ಹಲವಾರು ವಿಷಯಗಳು ಈ ಆ್ಯಪ್ ನಲ್ಲಿದೆ. ಭಕ್ತರಿಗೆ ಸರಿಯಾದ ಮಾಹಿತಿ ಸಿಗದೇ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಇದನ್ನು ತಪ್ಪಿಸುವ ಉದ್ದೇಶದಿಂದ ಟಿಟಿಡಿ (ತಿರುಪತಿ ತಿರುಮಲ ದೇವಸ್ಥಾನಂ) ಶಾಶ್ವತ ಪರಿಹಾರ ಒದಗಿಸಿದೆ.
ಅಮೆರಿಕದ ಎನ್.ಆರ್.ಐ. ದಾನಿ ಜೇಪಿ ಅವರ ನೆರವಿನೊಂದಿಗೆ ರೂಪುಗೊಂಡಿರುವ ವೆಂಕಟಾದ್ರಿ ಆ್ಯಪ್ ನಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ತಿರುಮಲದ ಒಟ್ಟು 25 ವಿಭಾಗಗಳಲ್ಲಿ ಬರುವ ಸುಮಾರು 350ಕ್ಕೂ ಹೆಚ್ಚು ಪ್ರಮುಖ ಸ್ಥಳಗಳ ನಿಖರವಾದ ಲೊಕೇಶನ್ ಇದರಲ್ಲಿ ಇದೆ.
ಇದರ ವಿಶೇಷತೆಯೆಂದರೆ, ಇಂಟರ್ನೆಟ್ ಸಂಪರ್ಕವಿಲ್ಲದೆಯೂ ಕೆಲಸ ಮಾಡುವ ಆಫ್‌ಲೈನ್ ನೇವಿಗೇಶನ್ (Offline Navigation) ಸೌಲಭ್ಯ ಇದರಲ್ಲಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲಿಷ್ ಹೀಗೆ ಒಟ್ಟು 5 ಪ್ರಮುಖ ಭಾಷೆಗಳಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್‌ಫೋನ್ ಇಲ್ಲದ ಭಕ್ತರಿಗಾಗಿ ತಿರುಮಲದಾದ್ಯಂತ ವಿಶೇಷ ಡಿಜಿಟಲ್ ಕಿಯೋಸ್ಕ್‌ಗಳನ್ನು (Kiosks) ಕೂಡ ಸ್ಥಾಪಿಸಲಾಗುತ್ತಿದೆ.
24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ AI ವಾಯ್ಸ್ ಅಸಿಸ್ಟೆಂಟ್:
ಭಕ್ತರ ಅನುಕೂಲಕ್ಕಾಗಿ ಈ ಆ್ಯಪ್‌ನಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ವಾಯ್ಸ್ ಅಸಿಸ್ಟೆಂಟ್ ಅನ್ನು ನೀಡಲಾಗಿದೆ. ಇದು ದಿನದ 24 ಗಂಟೆಯೂ ಸಕ್ರಿಯವಾಗಿರುತ್ತದೆ. ಭಕ್ತರು ಧ್ವನಿ ಆದೇಶಗಳ (Voice Commands) ಮೂಲಕ ತಾವು ತಲುಪಬೇಕಾದ ಸ್ಥಳಗಳ ಬಗ್ಗೆ ಕೇಳಿ ತಿಳಿದುಕೊಳ್ಳಬಹುದು. ಅಲ್ಲದೆ, ತಾವು ನಿಲ್ಲಿಸಿದ ವಾಹನವನ್ನು ಸುಲಭವಾಗಿ ಗುರುತಿಸಲು ‘ಮಾರ್ಕ್ ಮೈ ಸ್ಪಾಟ್’ (Mark My Spot) ಎಂಬ ಅತ್ಯುಪಯುಕ್ತ ಫೀಚರ್ ಅನ್ನು ಸಹ ಇದರಲ್ಲಿ ಸೇರಿಸಲಾಗಿದೆ. ತುರ್ತು ಸಹಾಯವಾಣಿಗಳಾದ ಪೊಲೀಸ್, ಹೆಲ್ಪ್ ಲೈನ್, ತುರ್ತು ಸಂಪರ್ಕ ಸಂಖ್ಯೆಗಳನ್ನು ಒನ್ ಟಚ್ ಮೂಲಕ ನೀಡಲಾಗಿದೆ.
ಸ್ಥಳಗಳ ಮಾಹಿತಿ:
- ವಸತಿ ಮತ್ತು ದರ್ಶನ: ರೂಮ್ಸ್ ಅಥವಾ ಕೊಠಡಿಗಳು ಲಭ್ಯವಿರುವ ಕೌಂಟರ್‌ಗಳು ಹಾಗೂ ದರ್ಶನದ ಕ್ಯೂ ಲೈನ್‌ಗಳು.
- ಅನ್ನಪ್ರಸಾದ ಹಾಗೂ ಕ್ಯಾಂಟೀನ್‌ಗಳು: ಉಚಿತ ಅನ್ನಪ್ರಸಾದ ಕೇಂದ್ರಗಳು ಮತ್ತು ಇತರೆ ಆಹಾರ ಮಳಿಗೆಗಳು.
- ಇತರ ಸೇವೆಗಳು: ಉಚಿತ ಲಗೇಜ್ ಕೌಂಟರ್‌ಗಳು, ಪಾದುಕಾ (ಚಪ್ಪಲಿ) ಡೆಪಾಸಿಟ್ ಕೇಂದ್ರಗಳು, ಕಲ್ಯಾಣಕಟ್ಟೆ (ಮುಡಿ ಕೊಡುವ ಸ್ಥಳ), ಕುಡಿಯುವ ನೀರಿನ ಘಟಕಗಳು ಮತ್ತು ಶೌಚಾಲಯಗಳು.
- ತುರ್ತು ಸೇವೆಗಳು ಮತ್ತು ಸಾರಿಗೆ: ಆಸ್ಪತ್ರೆಗಳು, ಪೊಲೀಸ್ ಠಾಣೆಗಳು, ಪಾರ್ಕಿಂಗ್ ಸ್ಥಳಗಳು, ಉಚಿತ ಬಸ್ ಮಾರ್ಗಗಳು ಹಾಗೂ ಬಸ್ ವೇಳಾಪಟ್ಟಿಗಳು.
























