ಪುತ್ತೂರು: ಪುತ್ತೂರಿನ ಬೊಳುವಾರಿನಲ್ಲಿರುವ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ವರ್ಷದಿಂದಲೇ ಸೈನ್ಸ್ ( ಪದವಿ ವಿಜ್ಞಾನ) ವಿಭಾಗ ಪ್ರಾರಂಭವಾಗಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಶಾಸಕರು ಪುತ್ತೂರಿನಲ್ಲಿ ಕಾರ್ಯಚರಿಸುತ್ತಿರುವ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಜ್ಞಾನ ವಿಭಾಗವಿಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಹೊಸ ಕಾಲೇಜು ಕಟ್ಟಡ ನಿರ್ಮಾಣವಾಗಿದ್ದು ಕೊಠಡಿ ಕೊರತೆಯನ್ನು ನೀಗಿಸಲಾಗಿದೆ. ಮುಂದೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿಜ್ಞಾನ ವಿಭಾಗವನ್ನು ಪ್ರಾರಂಭ ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು ಈ ವರ್ಷದಿಂದಲೇ ವಿಜ್ಞಾನ ವಿಭಾಗ ಪ್ರಾರಂಭಕ್ಕೆ ಸೂಚನೆಯನ್ನು ನೀಡಿದ್ದಾರೆ. ಇದರೊಂದಿಗೆ ವಿದ್ಯಾರ್ಥಿಗಳ ಹಾಗೂ ಪೋಷಕರ ಬಹುವರ್ಷದ ಬೇಡಿಕೆ ಈಡೇರಿದಂತಾಗಿದೆ.
ಪೀಠೋಪಕರಣಕ್ಕೆ 1 ಕೋಟಿ ರೂ. ಅನುದಾನಕ್ಕೆ ಮನವಿ:
ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಪೀಠೋಪಕರಣಕ್ಕೆ ಒಂದು ಕೋಟಿ ಅನುದಾನ ನೀಡುವಂತೆಯೂ ಈ ಸಂದರ್ಭದಲ್ಲಿ ಶಾಸಕರು ಸಚಿವರಿಗೆ ಮನವಿ ಮಾಡಿದರು. ವಿಜ್ಷಾನ ವಿಭಾಗ ಪ್ರಾರಂಭಗೊಂಡಲ್ಲಿ ಪ್ರಯೋಗಾಲಯದ ಅಗತ್ಯವಿದ್ದು ಅದಕ್ಕೆ ಬೇಕಾದ ಅಗತ್ಯ ಪರಿಕರಗಳನ್ನು ಒದಗಿಸುವಂತೆ ಶಾಸಕರು ಮನವಿ ಮಾಡಿದ್ದು ಸಚಿವರು ಅನುದಾನದ ಭರವಸೆಯನ್ನು ನೀಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.
ಇನ್ನಷ್ಟು ಅಭಿವೃದ್ಧಿ ಪಥದತ್ತ ಕಾಲೇಜು
ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೈನ್ಸ್ ವಿಭಾಗವನ್ನು ಪ್ರಾರಂಭ ಮಾಡುವಂತೆ ವಿದ್ಯಾರ್ಥಿಗಳು, ಪೋಷಕರು ಈ ಹಿಂದೆ ನನಗೆ ಮನವಿ ಮಾಡಿದ್ದರು. ಹೆಚ್ಚಾಗಿ ಬಡವರ ಮಕ್ಕಳು ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಅವರಿಗೆ ಪೂರಕ ವ್ಯವಸ್ಥೆ ಮಾಡಿಕೊಡಬೇಕಾದ್ದು ನನ್ನ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಸರಕಾರಕ್ಕೆ ಒತ್ತಡ ತಂದು ಸೈನ್ಸ್ ವಿಭಾಗ ಪ್ರಾರಂಭಕ್ಕೆ ಅನುಮತಿ ದೊರಕಿದ್ದು ಸಂತೋಷದ ವಿಚಾರವಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಅತಿ ಉತ್ಸಾಹದಿಂದ ಮಾಡುವ ಉತ್ಸುಕತೆ ಇದೆ. ಮುಂದೆ ಈ ಕಾಲೇಜನ್ನು ಇನ್ನಷ್ಟು ಅಭಿವೃದ್ದಿ ಪಥದತ್ತ ಕೊಂಡೊಯ್ಯುವೆ
ಅಶೋಕ್ ರೈ, ಶಾಸಕರು ಪುತ್ತೂರು























