tamanvi
ಶಿಕ್ಷಣಸ್ಥಳೀಯ

ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ: ಬೆಟ್ಟಂಪಾಡಿಯಲ್ಲಿ ಸರಣಿ–21 ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಬೆಟ್ಟಂಪಾಡಿ, ಸೆ.19: ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುವ ಹಾಗೂ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ವತಿಯಿಂದ ಆಯೋಜಿಸಲಾಗುತ್ತಿರುವ ‘ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ’ ಅಭಿಯಾನದ ‘ಗ್ರಾಮ ಸಾಹಿತ್ಯ ಸಂಭ್ರಮ ಸರಣಿ–21’ ಕಾರ್ಯಕ್ರಮ ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯಶಸ್ವಿಯಾಗಿ ನಡೆಯಿತು.

ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಬೆಟ್ಟಂಪಾಡಿ ಗ್ರಾಮ ಪಂಚಾಯತ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕನ್ನಡ ಸಂಘ ಬೆಟ್ಟಂಪಾಡಿ ಸಹಕಾರದೊಂದಿಗೆ ಮತ್ತು ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ ಅವರ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ. ಧರ್ಮಪಾಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬಳಿಗೇ ಸಾಹಿತ್ಯವನ್ನು ಕೊಂಡೊಯ್ದು ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ ಒದಗಿಸುತ್ತಿವೆ ಎಂದರು.

ಮುಖ್ಯ ಅತಿಥಿ ಬೆಟ್ಟಂಪಾಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಅಬ್ದುಲ್ ರಜಾಕ್ ಕೆ. ಮಾತನಾಡಿ, ವಿವಿಧ ಹಿನ್ನೆಲೆಯ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಸೇರಿ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಗ್ರಾಮ ಸಾಹಿತ್ಯ ಸಂಭ್ರಮ ಅವಕಾಶ ಕಲ್ಪಿಸಿದೆ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಭಟ್ ಅವರು ‘ಕನ್ನಡ ಸಾಹಿತ್ಯ ಬೆಳೆಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರ’ ವಿಷಯದ ಕುರಿತು ಉಪನ್ಯಾಸ ನೀಡಿದರು.

ವಿದ್ಯಾರ್ಥಿಗಳೇ ಕೇಂದ್ರಬಿಂದು

ಗ್ರಾಮ ಸಾಹಿತ್ಯ ಸಂಭ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿ.ಎಸ್ಸಿ. ವಿದ್ಯಾರ್ಥಿನಿ ವೇದಾವತಿ ಬಿ. ಸರ್ವಾಧ್ಯಕ್ಷತೆ ವಹಿಸಿದ್ದರು. ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಪ್ರನ್ವಿ ಪ್ರಸಾದ್ ಸಮಾರೋಪ ಭಾಷಣ ಮಾಡಿದರು.

ಕಾರ್ಯಕ್ರಮದ ಅಂಗವಾಗಿ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ 15 ಶಾಲೆಗಳಲ್ಲಿ ವಿವಿಧ ಸಾಹಿತ್ಯಿಕ ಗೋಷ್ಠಿಗಳನ್ನು ನಡೆಸಲಾಗಿದ್ದು, ಸುಮಾರು 203 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕವಿಗೋಷ್ಠಿ, ಕಥಾಗೋಷ್ಠಿ, ಪ್ರವಾಸ ಕಥನ, ‘ನನ್ನ ಆಪ್ತಮಿತ್ರ’, ‘ನನ್ನ ನೆಚ್ಚಿನ ಶಿಕ್ಷಕಿ/ಶಿಕ್ಷಕ’ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಿದರು.

16 ಸಾಧಕರಿಗೆ ಗೌರವ

ಬೆಟ್ಟಂಪಾಡಿ ಹಾಗೂ ಇರ್ದೆ ಗ್ರಾಮದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ 16 ಸಾಧಕರನ್ನು ಕನ್ನಡದ ಪೇಟ, ಕನ್ನಡದ ಶಾಲು ಹಾಗೂ ಕನ್ನಡ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು.

ಸಾಹಿತ್ಯ, ಪತ್ರಿಕಾ ಮಾಧ್ಯಮ, ಜನಪದ, ಇತಿಹಾಸ ಸಂಶೋಧನೆ, ನಾಟಿ ವೈದ್ಯಕೀಯ, ಶಿಕ್ಷಣ, ಕೃಷಿ, ದಿವ್ಯಾಂಗರ ಸೇವೆ, ವೈದ್ಯಕೀಯ, ಯಕ್ಷಗಾನ, ಸಹಕಾರ, ಸಮಾಜ ಸೇವೆ, ಚಿತ್ರಕಲೆ, ಜ್ಯೋತಿಷ್ಯ–ಪೌರೋಹಿತ್ಯ ಹಾಗೂ ಕ್ರೀಡಾ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬೆಂಗಳೂರು ಇದರ ನಿರ್ದೇಶಕರಾಗಿ ಆಯ್ಕೆಯಾದ ಶಶಿಕುಮಾರ್ ರೈ ಬಾಲ್ಯೊಟ್ಟು ಅವರಿಗೆ ‘ವಿಶೇಷ ಸಾಧಕ ಪುರಸ್ಕಾರ’ ನೀಡಿ ಗೌರವಿಸಲಾಯಿತು.

ಜನಪದ ಕ್ಷೇತ್ರದ ಸಾಧಕ ಚೋಮ ಬೆಟ್ಟಂಪಾಡಿ ಅವರು ಕನ್ನಡ ಹಾಗೂ ತುಳು ಭಾಷೆಯ ಜನಪದ ಗಾಯನದ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ನಾಟಿ ವೈದ್ಯಕೀಯ ಕ್ಷೇತ್ರದ ಸಾಧಕಿ ಕೈಝಮ್ಮ ಕೋನಡ್ಕ ಅವರು ಮೊಮ್ಮಗುವಿನೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷ ಗಮನ ಸೆಳೆಯಿತು.

32 ಗ್ರಾಮಗಳಿಗೆ ಸಾಹಿತ್ಯ ತಲುಪಿಸುವ ಗುರಿ

‘ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ’ ಅಭಿಯಾನದ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಾಹಿತ್ಯದೊಂದಿಗೆ ನೇರ ಸಂಪರ್ಕ ಕಲ್ಪಿಸುವುದು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುವುದು ಪ್ರಮುಖ ಉದ್ದೇಶವಾಗಿದೆ.

ಕಳೆದ ಐದು ವರ್ಷಗಳಿಂದ ನಡೆಯುತ್ತಿರುವ ಈ ಅಭಿಯಾನವು ಪುತ್ತೂರು ತಾಲೂಕಿನ 22 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯ 32 ಗ್ರಾಮಗಳಿಗೆ ಸಾಹಿತ್ಯ ಚಟುವಟಿಕೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಮುಂದುವರಿದಿದೆ. ಬೆಟ್ಟಂಪಾಡಿ ಸರಣಿ–21ರ ಬಳಿಕ ಅಕ್ಟೋಬರ್ 2ರಂದು ಬಲ್ನಾಡಿನಲ್ಲಿ ನಡೆಯಲಿರುವ ಸರಣಿ–22ರೊಂದಿಗೆ ತಾಲೂಕಿನ ಎಲ್ಲಾ 32 ಗ್ರಾಮಗಳನ್ನು ತಲುಪುವ ಗುರಿ ಪೂರ್ಣಗೊಳ್ಳಲಿದೆ.

ಕಾರ್ಯಕ್ರಮದಲ್ಲಿ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಂದ್ರ ರೈ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ನವೀನ್ ರೈ ಚೆಲ್ಯಡ್ಕ, ಚಿಗುರೆಲೆ ಸಾಹಿತ್ಯ ಬಳಗದ ಅಧ್ಯಕ್ಷ ಚಂದ್ರಮೌಳಿ ಕಡಂದೇಲು, ಸಮೂಹ ಸಂಪನ್ಮೂಲ ವ್ಯಕ್ತಿ ಶಾಲಿನಿ ಬಿ. ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ದಾಮೋದರ ಕಣಜಾಲು ಸ್ವಾಗತಿಸಿದರು. ಗ್ರಾಮ ಸಾಹಿತ್ಯ ಸಂಭ್ರಮದ ಸಂಯೋಜಕ ನಾರಾಯಣ ಕುಂಬ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಡಿನಾಡು ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಡಾ. ಹಾಜಿ ಅಬೂಬಕ್ಕರ್ ಎಸ್. ಆರ್ಲಪದವು ಸನ್ಮಾನ ಭಾಷಣ ಮಾಡಿದರು.

ಆಶಾಮಯ್ಯ ಹಾಗೂ ಆಶಾ ಅಡೂರ್ ಸಾಧಕರ ಪರಿಚಯ ಮಾಡಿದರು. ಸುಪ್ರಿತ ಚರಣ್ ಪಾಲಪ್ಪೆ, ಅಶ್ವಿಜ ಶ್ರೀಧರ್ ಬೆಳ್ತಂಗಡಿ ಹಾಗೂ ಗಿರೀಶ್ ಕೊಯಿಲ ಕಾರ್ಯಕ್ರಮ ನಿರೂಪಿಸಿದರು. ಶ್ರೀಶ ವಾಸವಿ ತುಳುನಾಡು ವಂದಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರಿನಲ್ಲಿ ಆ.29ರಂದು ಸರ್ಕಾರಿ ನೌಕರರ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ಅಭಿನಂದನಾ ಕಾರ್ಯಕ್ರಮ

ಪುತ್ತೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪುತ್ತೂರು ತಾಲೂಕು ಶಾಖೆಯ ವತಿಯಿಂದ…

ಪುತ್ತೂರಿನಲ್ಲಿ ಸಂಭ್ರಮದ 28ನೇ ವರ್ಷದ ‘ಶ್ರೀಕೃಷ್ಣಲೋಕ’ ;1,250ಕ್ಕೂ ಅಧಿಕ ಪುಟಾಣಿ ಕೃಷ್ಣ-ರಾಧೆಯರಿಂದ ವೈಭವದ ಶೋಭಾಯಾತ್ರೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಪರ್ಲಡ್ಕ ಶಿವಪೇಟೆಯ ವಿವೇಕಾನಂದ…

1 of 164