ಕರಾವಳಿ

ಸಂಸ್ಕಾರಯುತ ಅಪ್ಪ – ಅಮ್ಮನಿಗೆ ಹುಟ್ಟಿದವರು ನನ್ನ ಅಪ್ಪನ ಬಗ್ಗೆ  ಮಾತನಾಡುತ್ತಿರಲಿಲ್ಲ: ಶಾಸಕ ಅಶೋಕ್ ರೈ | ಬಂಟ್ವಾಳ ತಹಸೀಲ್ದಾರ್ ಕಚೇರಿ ಮುಂಭಾಗ ಬಿಜೆಪಿ ನಡೆಸಿದ ಪ್ರತಿಭಟನೆಗೆ ಪುತ್ತೂರು ಶಾಸಕರ ಕೌಂಟರ್!! ಅರ್ಜಿ ಕೊಟ್ಟು ಒಂದೇ ದಿನಕ್ಕೆ ಪ್ರತಿಭಟನೆ | ಭಾರತ್ ಮಾತಾ ಕೀ ಜೈಗೆ ಪೇಟೆಂಟ್ ತಗೊಂಡಿದ್ದಾರೆಯೇ?

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮೂವರಿಗೆ 94 ಸಿ ಹಕ್ಕುಪತ್ರ ನೀಡಲಿಲ್ಲವೆಂದು ಬಂಟ್ವಾಳ ತಹಸೀಲ್ದಾರ್ ಕಚೇರಿ ಮುಂಭಾಗ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ತನ್ನ ತಂದೆಗೆ ಬೈದು, ಅವಮಾನಿಸಿದ್ದಾರೆ. ಸಂಸ್ಕಾರಯುತ ಅಪ್ಪ – ಅಮ್ಮನಿಗೆ ಹುಟ್ಟಿದವರು ಇನ್ನೊಬ್ಬರ ತಂದೆಗೆ ಬೈಯುವ ಕೆಲಸ ಮಾಡುವುದಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಆಕ್ರೋಶ ವ್ಯಕ್ತಪಡಿಸಿದರು.

maithri

ಸೋಮವಾರ ಶಾಸಕರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಳಂಬದ ಆರೋಪ ನೀಡಿ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಮೂವರಿಗೆ 94ಸಿ ಹಕ್ಕುಪತ್ರ ನೀಡಲಿಲ್ಲ ಎನ್ನುವುದು ಆರೋಪ. ಈ ಆರೋಪದಿಂದ ಸಮಾಜದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಈ ಮಾಹಿತಿ ನೀಡುತ್ತಿದ್ದೇನೆ ಎಂದರು.

ಅಶೋಕ್ ರೈ ಅವರ ಅಪ್ಪನ ಜಾಗವೇ ಎಂದು ಒಬ್ಬರು ಕೇಳ್ತಾರೆ. ಒಳ್ಳೆ ಸಂಸ್ಕಾರಯುತ ಅಪ್ಪ ಅಮ್ಮನಿಗೆ ಹುಟ್ಟಿದವರು ಹೀಗೆ ಮಾತನಾಡುವುದಿಲ್ಲ. ಇವತ್ತಿನವರೆಗೆ ಏನೂ ಮಾಡದೇ, ನನ್ನ ಅಪ್ಪ ಅಮ್ಮನ ಬಗ್ಗೆ ಮಾತನಾಡ್ತಾರೆ? ನಾನು ಅದಕ್ಕಿಂತ ಕಟುವಾದ ಭಾಷೆ ಬಳಕೆ ಮಾಡಬಹುದು. ಆದರೆ ನಾನು ಹಾಗೇ ಮಾಡುವುದಿಲ್ಲ ಎಂದರು.

ಆ ಮೂರು ಮನೆಯವರು 2020ರಲ್ಲಿ ಅರ್ಜಿ ನೀಡಿದ್ದರು. ಈಗ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಾಜಿ ಶಾಸಕರು 2023ರವರೆಗೆ ಶಾಸಕರಾಗಿದ್ದರು. ಅರ್ಜಿ ನೀಡಿದವರು ನಿರಂತರ ಓಡಾಟ ನಡೆಸಿದರು, ಅವರೂ ಕೂಡ ಹಕ್ಕುಪತ್ರ ನೀಡಿರಲಿಲ್ಲ. ಪ್ರತಿಭಟನೆ ನಡೆಸುವ ವಾರದ ಮೊದಲು ನನ್ನ ಕಚೇರಿಗೆ ಆಗಮಿಸಿದ್ದರಷ್ಟೇ. ಹಾಗೆಂದು 94ಸಿ ಹಕ್ಕುಪತ್ರವನ್ನು ಶಾಸಕರು, ಉಸ್ತುವಾರಿ ಸಚಿವರು, ಕಂದಾಯ ಸಚಿವರು ನೀಡಬೇಕೆಂಬ ನಿಯಮ ಇದೆ. ಮಾಜಿ ಶಾಸಕರಿಗೆ ಇದರ ಬಗ್ಗೆ ತಿಳಿದಿರಲಿಲ್ಲವೇ ಎಂದು ಪ್ರಶ್ನಿಸಿದರು.

ಇದೇ ಮಾಜಿ ಶಾಸಕರು ಹಕ್ಕುಪತ್ರ ನೀಡಲು 2 ಲಕ್ಷ ರೂ. ತಗೊಳ್ತಾ ಇದ್ರು. ಇದರ ಬಗ್ಗೆ ತಿಳಿಸಲು ಜನ ಇದ್ದಾರೆ. ಹೀಗಿದ್ದರೂ ನನ್ನ ಮೇಲೆ ವೃಥಾ ಆರೋಪ ಮಾಡ್ತಿದ್ದಾರೆ. ಈ ಹಿಂದೆಯೇ ಹೇಳಿದ್ದೆ – ನನ್ನ ಮೇಲೆ ಸುಮ್ಮನೆ ಆರೋಪ ಮಾಡಿದರೆ ಬಿಡುವುದಿಲ್ಲ ಎಂದು. ಒಂದು ವೇಳೆ ತಪ್ಪಿದ್ದರೆ ಆರೋಪ ಮಾಡಲಿ, ಹೋರಾಟ ಮಾಡಲಿ ಎಂದು ಸವಾಲೆಸೆದರು.

ಈಗಾಗಲೇ ನಾವು ಅಕ್ರಮ ಸಕ್ರಮ ಮಾಡಿದ್ರಲ್ಲಿ ಬಿಜೆಪಿ ಗ್ರಾಪಂ ಅಧ್ಯಕ್ಷರು, ಜಿಪಂ ಮಾಜಿ ಸದಸ್ಯರು, ಶಕ್ತಿ ಕೇಂದ್ರದ ಅಧ್ಯಕ್ಷರಿದ್ದಾರೆ. ಪಕ್ಷಾತೀತವಾಗಿ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದೇನೆ. ಆದರೆ ಮಾಜಿ ಶಾಸಕರು ತಮ್ಮ ಪಕ್ಷದವರದ್ದೇ ಮಾಡಿ ಕೊಟ್ಟಿಲ್ಲ. ಇನ್ನು ಬೇರೆಯವರಿಗೆ ಕೆಲಸ ಮಾಡಿ ಕೊಡ್ತಾರಾ ಎಂದು ಪ್ರಶ್ನಿಸಿದರು.

ಅರ್ಜಿ ಕೊಟ್ಟು ಒಂದೇ ದಿನಕ್ಕೆ ಪ್ರತಿಭಟನೆ:

ರಾಜಕೀಯ ಹೋರಾಟದಿಂದ 5 ಕುಟುಂಬಗಳಿಗೆ ಅನ್ಯಾಯವಾಗಿದೆ. 5 ಮನೆಯವರು ಗೊತ್ತಿಲ್ಲದೇ ಅವರ ಜೊತೆ ಹೋಗಿದ್ದಾರೆ. ಕಳೆದ ಹದಿನೈದು ವರ್ಷದಿಂದ ಅಲ್ಲಿ ವಾಸವಾಗಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಬಂಟ್ವಾಳ ತಹಸೀಲ್ದಾರ್ ಅವರು ಬೈಠಕ್ ಮಾಡಬೇಕೆಂದು ಹೇಳಿದ್ರಿಂದ ಹದಿನೈದು ದಿನ ತಡವಾಗಿದೆ. 2026ರ ಮೇ 14ರಂದು ಮೂರು ಮನೆಯವರು ದುಡ್ಡು ಕಟ್ಟಿದ್ದು, ರಶೀದಿ ಪಾವತಿ ಆಗಿದೆ. ಮೇ 16ರಂದು ಪ್ರತಿಭಟನೆ ನಡೆಸಿದ್ದಾರೆ. ಅರ್ಜಿ ನೀಡಿ ವರ್ಷಗಳೇ ಕಳೆದಿದೆ. ಆಗ ಏನು ಮಾಡಿಲ್ಲ. ಈಗ 1 ದಿನವಷ್ಟೇ ಆಗಿದೆ. ಅಷ್ಟರಲ್ಲೇ ಪ್ರತಿಭಟನೆ ನಡೆಸಿದ್ದಾರೆ ಎಂದರು.

ಆ ಮನೆಗಳವರಿಗೆ 94ಸಿ ಹಕ್ಕುಪತ್ರ ನೀಡಬಾರದು ಎಂದು ಅಬ್ಜೆಕ್ಷನ್ ಇದೆ. ಪಕ್ಕದ ಜಮೀನಿನವರು ತಮ್ಮ ಪ್ಲಾಟಿಂಗ್ ಆಗಿಲ್ಲ. ಆ ಜಾಗ ಅತಿಕ್ರಮಣ. ಅಲ್ಲದೇ ಕಳೆದ 15 ವರ್ಷದಿಂದ ಅವರು ವಾಸವಾಗಿದ್ದಾರೆ ಎನ್ನುವುದು ಸುಳ್ಳು. ಹಾಗೆಂದು ಪ್ಲಾಟಿಂಗ್ ನಲ್ಲಿ ಅತಿಕ್ರಮಿತ ಜಾಗ ತಮ್ಮದಲ್ಲವೆಂದು ಕಂಡುಬಂದರೆ, ನಮ್ಮದೇನೂ ಅಬ್ಜೆಕ್ಷನ್ ಇಲ್ಲ ಎಂದು ತಿಳಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಈ ಮೂರು ಮನೆಗಳವರು ಮನೆ ಕಟ್ಟುವಾಗ ಶೀಟ್, ಸಿಮೆಂಟ್ ಅನ್ನು ಟ್ರಸ್ಟ್ ವತಿಯಿಂದ ನೀಡಿದ್ದೇನೆ. ಈಗ ತನ್ನ ವಿರುದ್ಧವೇ ಪ್ರತಿಭಟನೆ ಮಾಡುತ್ತಾರೆ ಎಂದು ಶಾಸಕರು ಅಸಮಾಧಾನ ಹೊರಹಾಕಿದರು.

ಭಾರತ್ ಮಾತಾ ಕೀ ಜೈಗೆ ಪೇಟೆಂಟ್ ತಗೊಂಡಿದ್ದಾರೆಯೇ?

ಅಶೋಕ್ ಕುಮಾರ್ ರೈ ಬಿಜೆಪಿಯಿಂದ ಬೆಳೆದು ಬಂದದ್ದು ಎಂದು ಪ್ರತಿಭಟನೆಯಲ್ಲಿ ಹೇಳಿದ್ರು. ಬಿಜೆಪಿಯಿಂದ ಬೆಳೆದು ಬಂದದ್ದಲ್ಲ. ಬಿಜೆಪಿಯವರು ಮೇಲಿನಿಂದ ಕುಟ್ಟಿದ್ದರು ಎಂದರು. ಇದೇ ಪ್ರತಿಭಟನೆಯಲ್ಲಿ ಭಾರತ್ ಮಾತಾ ಕೀ ಜೈ ಅನ್ತಾರೆ. ಮೋದಿಜಿಗೆ ಬೈತಾರೆ ಅಂದಿದ್ದಾರೆ. ಭಾರತ್ ಮಾತಾ ಕೀ ಜೈಗೆ ಅವರೇನು ಪೆಟೆಂಟ್ ತಗೊಂಡಿದ್ದಾರಾ? ನನ್ನ ಧರ್ಮದ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತೇನೆ. ನನ್ನ ಕೊನೆಯ ಉಸಿರು ಇರುವವರೆಗೆ ಭಾರತ್ ಮಾತಾ ಕೀ ಜೈ ಅನ್ತೇನೆ. ಮೋದಿ ಬಗ್ಗೆ ಬೇಡದ ಶಬ್ದ ಬಳಸಿಲ್ಲ. ವೈಯಕ್ತಿಕವಾಗಿ ಮಾತನಾಡಿಲ್ಲ. ಜನಪ್ರತಿನಿಧಿಯಾಗಿ ಅವರ ಬಗ್ಗೆ ಗೌರವಯುತವಾಗಿ ಮಾತನಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕಕ್ಕೇ ಪ್ರಸಾದಂ ಸ್ಕೀಂ, ಖೇಲೋ ಇಂಡಿಯಾ ಬಂದೇ ಇಲ್ಲ:

ಪ್ರಸಾದ ಸ್ಕೀಂ ಬಗ್ಗೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಉಲ್ಲೇಖ ಮಾಡಿದ್ರು. ಅವರು ಬಜೆಟ್ ಪುಸ್ತಕ ಓದುವ ಅಗತ್ಯ ಇದೆ. ಪ್ರಸಾದಂ ಸ್ಕೀಂ ಜನರನ್ನು ಮಂಗ ಮಾಡಿದೆ. ತೊಡಿಕಾನ, ಪುತ್ತೂರು, ಉಪ್ಪಿನಂಗಡಿ ದೇವಸ್ಥಾನಕ್ಕೆ ಪ್ರಸಾದಂ ಸ್ಕೀಂ ನೀಡುವಂತೆ ಕಳುಹಿಸಿದ್ದೆ. ಚೌಟಾ ಅವರಿಗೂ ಕೇಳಿಕೊಂಡಿದ್ದೆ. ಬಂತಾ? ಒಂದೇ ಒಂದು ಸ್ಕೀಂ ಕರ್ನಾಟಕಕ್ಕೆ ಬಂದಿಲ್ಲ ಎಂದರು.

ಖೇಲೋ ಇಂಡಿಯಾಕ್ಕೆ ಒಂದಾದ್ರು ಬಂತಾ? ಕೊಂಬೆಟ್ಟು ಗ್ರೌಂಡಿಗೆ ಕೇಳಿದ್ದೆ. ಅದೂ ಬಂದಿಲ್ಲ. ಬ್ರಿಜೇಶ್ ಚೌಟಾ ಅವರು ತಿಳಿದುಕೊಂಡವ್ರು ಅಂತ ಅಂದುಕೊಂಡಿದ್ದೆ. ಹಾಗೆಂದು ಅವರನ್ನು ಹೆಚ್ಚು ಪ್ರಶ್ನಿಸಲ್ಲ. ಮಾಡೋದಾದ್ರೆ ಪ್ರಶ್ನೆಗಳ ಸುರಿಮಳೆಯೇ ಇದೆ. ದಕ್ಷಿಣ ಕನ್ನಡದ ಅಭಿವೃದ್ಧಿಗೆ ಕೆಲಸ ಮಾಡಿ. ಹೈವೇ ಕೆಲಸವನ್ನು ಸ್ಪೀಡ್ ಅಪ್ ಮಾಡಿ ಎಂದು ಸಲಹೆ ನೀಡಿದರು.

ಗಿರಿಧರ್ ನಾಯ್ಕ್ ಅವರಿಂದ ಮೋಸ:

ಗಿರಿಧರ್ ನಾಯ್ಕ್ ಎಂಬವರು ಇದ್ದಾರೆ. ಎಲ್ಲಾರ ಕಡೆಯಿಂದ ಹಣ ತಗೊಂಡು ರಸ್ತೆ ಮಾಡಿ ಕೊಡ್ತೇನೆ ಎಂದು ಹೇಳುವುದು. ಈ ರೀತಿ ಜನರಿಗೆ ಮೋಸ ಮಾಡುತ್ತಿದ್ದಾರೆ. ವಿಟ್ಲ ಠಾಣೆಯಲ್ಲಿ ಧರಣಿ ಕೂತಿದ್ದಾರೆ. ಬೆಟ್ಟಂಪಾಡಿಯಲ್ಲೂ ಘಟನೆ. ಜನರು ಮೋಸ ಹೋಗಬೇಡಿ. ನ್ಯಾಯಯುತ ಬೇಡಿಕೆಗಳನ್ನು ನಮಗೆ ತಿಳಿಸಿದ್ರೆ ಮಾಡಿ ಕೊಡ್ತೇವೆ. ಅದರ ಬದಲು ಮೋಸಕ್ಕೆ ಒಳಗಾಗಬೇಡಿ ಎಂದು ಕಿವಿಮಾತು ಹೇಳಿದರು.

ಮಲತ್ಯಾಜ್ಯ ಸಂಸ್ಕರಣಾ ಘಟಕ ಅಲ್ಲೇ ಆಗ್ತದೆ:

ಮಲತ್ಯಾಜ್ಯ ಸಂಸ್ಕರಣಾ ಘಟಕ ಘಟಕ ಬೆದ್ರಾಳದಲ್ಲೇ ಆಗ್ತದೆ. ಕೋರ್ಟ್ ಓಪನ್ ಆದ ತಕ್ಷಣ ಇಂಜೆಕ್ಷನ್ ತೆರವು ಮಾಡ್ತೇವೆ. ಲೇಔಟ್ ನಿವಾಸಿಗಳಿಗೆ ವಾಸನೆ ಬರುತ್ತದೆ ಎಂಬ ಭಯವಿದೆ. ಹಾಗೇ ಭಯಪಡುವ ಅಗತ್ಯ ಇಲ್ಲ. ವಾಸನೆ ಬರುವುದಿಲ್ಲ. ಅವರ ಮನವೊಲಿಸಿ ಯೋಜನೆ ಜಾರಿ. ಒಂದು ವೇಳೆ ಪರ್ಯಾಯ 5 ಎಕರೆ ಜಾಗ ನೀಡಿದರೆ ಅಲ್ಲಿಗೆ ಶಿಫ್ಟ್ ಮಾಡಲು ತೊಂದರೆ ಇಲ್ಲ ಶಾಸಕರು ಸ್ಪಷ್ಟಪಡಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts