ಪುತ್ತೂರು: ಕೆಂಪು ಕಲ್ಲು ಹಾಗೂ ಮರಳು ನೀತಿಯನ್ನು ರೂಪಿಸಿ, ಜನಸಾಮಾನ್ಯರಿಗೆ ಸುಲಭವಾಗಿ ಸಿಗುವಂತೆ ಮಾಡಬೇಕು ಎಂದು ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಒತ್ತಾಯಿಸಿದರು.
ಎಸ್.ಡಿ.ಪಿ.ಐ. ಮಂಗಳೂರು ಗ್ರಾಮಾಂತರ ಜಿಲ್ಲಾಯ 2024-27ನೇ ಅವಧಿಯ ಮಧ್ಯಂತರ ಜಿಲ್ಲಾ ಪ್ರತಿನಿಧಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಕೆಂಪು ಕಲ್ಲು ಹಾಗೂ ಮರಳು ಅತೀ ಅಗತ್ಯ. ಸದ್ಯ ಕಲ್ಲು ಸಿಗ್ತಾ ಇದೆ ಎಂಬ ಮಾಹಿತಿ ಇದೆ. ಆದರೆ ಅಧಿಕೃತವಾಗಿ ಸಿಗ್ತಾ ಇಲ್ಲ. ಬದಲಾಗಿ ಬ್ಲಾಕ್ ನಲ್ಲಿ ಕೆಂಪು ಕಲ್ಲುಗಳನ್ನು ಮಾರಾಟ ಮಾಡಲಾಗುತ್ತಿದೆ. ಹೀಗೆ ಮಾರಾಟ ಮಾಡುವುದರಿಂದ ಯಾರಿಗೆ ಲಾಭ? ವ್ಯಾಪಾರಿಗಳು ಹೇಗೋ ಕದ್ದು ಮುಚ್ಚಿ ಕಲ್ಲು ಮಾರಾಟ ಮಾಡುತ್ತಿದ್ದಾರೆ. ಇನ್ನು ಭ್ರಷ್ಟ ಅಧಿಕಾರಿಗಳು ಲಾಭ ಪಡೆಯುತ್ತಿದ್ದಾರೆ. ನಿಜವಾಗಿಯೂ ಇದರಿಂದ ಸಮಸ್ಯೆ ಎದುರಿಸುತ್ತಿರುವುದು ಜನಸಾಮಾನ್ಯರು. ಇದನ್ನು ಸರಕಾರ ಅರ್ಥ ಮಾಡಿಕೊಳ್ಳಬೇಕು. ಮಾತ್ರವಲ್ಲ ಸರಕಾರಕ್ಕೆ ಆಗುತ್ತಿರುವ ಕೋಟ್ಯಾಂತರ ರೂಪಾಯಿ ನಷ್ಟವನ್ನು ಭರಿಸಬೇಕಾಗಿದೆ. ಹಾಗಾಗಿ ಮರಳು ಹಾಗೂ ಕೆಂಪು ಕಲ್ಲು ನೀತಿಯನ್ನು ರೂಪಿಸಿ, ಸುಲಭವಾಗಿ ಜನಸಾಮಾನ್ಯರಿಗೆ ಸಿಗುವಂತೆ ಕಾನೂನು ರೂಪಿಸುವಂತೆ ಒತ್ತಾಯಿಸಿದರು.
ತಾಲೂಕಿಗೊಂದು ಕಸಾಯಿಖಾನೆ ಬೇಕು:
ಆಹಾರ ನಮ್ಮ ಹಕ್ಕು. ಅದರಲ್ಲೂ ಗೋ ಮಾಂಸ ತಿನ್ನಬಾರದು ಎಂದು ಎಲ್ಲಿಯೂ ಇಲ್ಲ. ಕುರಿ, ಮೇಕೆ, ಎತ್ತು ಮಾಂಸಕ್ಕೆ ಅಧಿಕೃತ ಕಸಾಯಿಖಾನೆಯನ್ನೇ ಬಳಸಿಕೊಳ್ಳಬೇಕು ಎಂದು ಹೇಳುತ್ತಾರೆ. ಆದರೆ ಅಧಿಕೃತ ಕಸಾಯಿಖಾನೆ ಎಲ್ಲಿದೆ? ಅಧಿಕೃತ ಕಸಾಯಿಖಾನೆ ಇದ್ದರೆ ಅನಧಿಕೃತ ಕೆಲಸಗಳು ನಡೆಯುವುದಿಲ್ಲ. ಹಾಗಾಗಿ ಪ್ರತಿಯೊಂದು ಹೋಬಳಿಯಲ್ಲಿ ತಪ್ಪಿದರೆ, ತಾಲೂಕಿನಲ್ಲಿಯಾದರೂ ಕಸಾಯಿಖಾನೆಗಳನ್ನು ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
6-7 ವರ್ಷಗಳ ಹಿಂದೆ ಕುದ್ರೋಳಿ ಬಳಿಯಲ್ಲಿ ಕಸಾಯಿಖಾನೆ ಇತ್ತು. ಆದರೆ ಅದಕ್ಕೆ ವಿವಿಧ ಕಾರಣಗಳನ್ನು ನೀಡಿ ಬಂದ್ ಮಾಡಿಸಿದ್ದಾರೆ. ಈಗ ಕಸಾಯಿಖಾನೆಯೇ ಇಲ್ಲ. ಕಸಾಯಿಖಾನೆ ಇದ್ದರೆ ಅದಕ್ಕೆ ವೈದ್ಯರೊಬ್ಬರು ಬೇಕು, ಸೂಕ್ತ ಸವಲತ್ತುಗಳು ಬೇಕು. ಸೂಕ್ತ ಪರೀಕ್ಷೆಗಳನ್ನು ನಡೆಸಿದ ಬಳಿಕವಷ್ಟೇ ಮಾಂಸ ತಯಾರಿಸಲಾಗುತ್ತದೆ. ಇವೆಲ್ಲವೂ ಕಾನೂನು ಪ್ರಕಾರವೇ ನಡೆಯುವುದರಿಂದ, ಅನಧಿಕೃತ ವಿಚಾರಗಳಿಗೆ ಆಸ್ಪದವೇ ಇರುವುದಿಲ್ಲ ಎಂದರು.
ಪ್ರವಾಸೋದ್ಯಮ ಅಭಿವೃದ್ಧಿ:
ಜಿಲ್ಲೆಯಲ್ಲಿ ಹೊಸ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಬಗ್ಗೆ ಸರಕಾರ ಈಗಾಗಲೇ ಹಲವು ಸಭೆಗಳನ್ನು ನಡೆಸಿದೆ, ಆದರೆ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ. ಬಯಲು ಸೀಮೆಗೆ ಸಿಗುವ ಅನುದಾನದಲ್ಲಿ ಶೇ. 10ರಷ್ಟು ಕರಾವಳಿಗೆ ಬರುತ್ತಿಲ್ಲ. ಆದ್ದರಿಂದ ಸರಕಾರ ಕೂಡಲೇ ಸಮಗ್ರ ಯೋಜನೆಗಳನ್ನು ರೂಪಿಸಿ ಸೂಕ್ತ ಅನುದಾನವನ್ನು ಬಿಡುಗಡೆ ಮಾಡಿ ಕಾರ್ಯರೂಪಕ್ಕೆ ತರಲು ಸರಕಾರ ಕ್ರಮಕೈಗೊಳ್ಳಬೇಕು.
ಸರಕಾರಿ ಆಸ್ಪತ್ರೆ, ಮೆಸ್ಕಾಂಗಳ ಖಾಸಗೀಕರಣಕ್ಕೆ ವಿರೋಧ:
ಜಿಲ್ಲೆಯ ಸರಕಾರಿ ಆಸ್ಪತ್ರೆಗಳ ಖಾಸಗೀಕರಣವನ್ನು ಈ ಪ್ರತಿನಿಧಿ ಸಭೆಯು ತೀವ್ರವಾಗಿ ಖಂಡಿಸುತ್ತಿದೆ, ಇದು ಜನಸಾಮಾನ್ಯರ ಆರೋಗ್ಯದ ಹಕ್ಕಿನ ಮೇಲೆ ಸರಕಾರ ನಡೆಸುತ್ತಿರುವ ಹಸ್ತಕ್ಷೇಪವಾಗಿದೆ ಆದ್ದರಿಂದ ಸರಕಾರ ಕೂಡಲೇ ಈ ತೀರ್ಮಾನವನ್ನು ಹಿಂಪಡೆಯಬೇಕು. ಅಲ್ಲದೇ, ಮೆಸ್ಕಾಂ ಖಾಸಾಗೀಕರಣ ನಡೆಸಲು ಉದ್ದೇಶಿಸಿರುವುದು ಭವಿಷ್ಯದಲ್ಲಿ ಜನ ಸಾಮಾನ್ಯರಿಗೆ ಮಾರಕವಾಗಲಿದೆ, ಇದನ್ನು ಸರಕಾರ ಕೂಡಲೇ ಹಿಂಪಡೆಯಬೇಕು ಎಂದರು.
ಟೋಲ್ ಮುಕ್ತ ರಸ್ತೆ ಆಗಬೇಕು:
ಜಿಲ್ಲೆಯ ರಸ್ತೆಗಳಲ್ಲಿ ಟೋಲ್ ಸಂಗ್ರಹಿಸುವುದು ಖಂಡಿಸುತ್ತೇವೆ. ಜಿಲ್ಲೆಯ ಎಲ್ಲಾ ರಸ್ತೆಗಳನ್ನು ಟೋಲ್ ಮುಕ್ತ ರಸ್ತೆಯನ್ನಾಗಿ ಮಾಡಬೇಕು. ಈಗಾಗಲೇ ಜಿಲ್ಲೆಯ 7-8 ಕಡೆಗಳಲ್ಲಿ ಟೋಲ್ ಸಂಗ್ರಹ ನಡೆಯುತ್ತಿದೆ ಎಂದರು.
ಸುಸಜ್ಜಿತ ಕ್ರೀಡಾಂಗಣ ಬೇಕು:
ಪುತ್ತೂರು ಬಂಟ್ವಾಳ, ಬೆಳ್ತಂಗಡಿ ಮತ್ತು ಸುಳ್ಯದಲ್ಲಿ ಸುಸಜ್ಜಿತ ಕ್ರೀಡಾಂಗಣವನ್ನು ಸರಕಾರ ನಿರ್ಮಿಸಬೇಕು ಮತ್ತು ಕ್ರೀಡಾಳುಗಳಿಗೆ ಉಚಿತವಾಗಿ ಅವಕಾಶ ನೀಡಬೇಕು. ಈಗಾಗಲೇ ಪುತ್ತೂರಿನಲ್ಲಿ ಶಾಸಕರು ಕ್ರೀಡಾಂಗಣಕ್ಕೆ ಜಾಗ ಮೀಸಲಿಟ್ಟಿದ್ದಾರೆ ಎಂದು ಗಮನ ಸೆಳೆದಾಗ, ಪುತ್ತೂರಿನ ಶಾಸಕರು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡೆಯಲಿಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಅನುದಾನ ತಂದಿದ್ದೇನೆ ಎನ್ನುತ್ತಾರೆ. ಆದರೆ ಎಲ್ಲಿಯೂ ಕೆಲಸ ಕಾಣ್ತಾ ಇಲ್ಲ. ಈಗಾಗಲೇ 3 ವರ್ಷ ಆಗಿದೆ ಎಂದರು.
ಕುಚ್ಚಲು ಅಕ್ಕಿಗೆ ಬೇಡಿಕೆ:
ಸರಕಾರವು ಕರಾವಳಿ ಜನತೆಯ ಪ್ರಮುಖ ಆಹಾರವಾದ ಕುಚ್ಚಲು ಅಕ್ಕಿಯನ್ನು ಪಡಿತರ ಅಂಗಡಿಯ ಮೂಲಕ ಗ್ರಾಹಕರಿಗೆ ವಿತರಿಸಬೇಕು ಎಂದರು.
ಬಸ್ ಸಮಸ್ಯೆ:
ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲೂಕಿನಲ್ಲಿ ಸರಕಾರಿ ಬಸ್ಸು ಇಲ್ಲದ ಪ್ರದೇಶಗಳಲ್ಲಿ ಸರಕಾರಿ ಬಸ್ಸು ಓಡಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಕಡಬ ತಾಲೂಕಿನ ಕೊಯಿಲದಲ್ಲಿ ಕಳೆದ ಹದಿನಾಲ್ಕು ವರ್ಷಗಳಿಂದ ನಿದಾನಗತಿಯಲ್ಲಿ ಸಾಗುತ್ತಿರುವ ಪಶುವೈದ್ಯಕೀಯ ಮತ್ತು ಮೀನುಗಾರಿಕಾ ವಿಶ್ವವಿಧ್ಯಾಲಯದ ಕಾಮಗಾರಿಯನ್ನು ಪೂರ್ತಿಗೊಳಿಸಿ ಲೋಕಾರ್ಪಣೆ ನಡೆಸಲು ಸರಕಾರ ಮುಂದಾಗಬೇಕು.
ಪತ್ರಿಕಾಗೋಷ್ಟಿಯಲ್ಲಿಉಪಾಧ್ಯಕ್ಷ ಇನಾಸ್ ರೋಡ್ರಿಗಸ್, ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ, ಶಾಕಿರ್ ಅಳಕೆಮಜಲು, ಅಶ್ರಫ್ ಬಾವು ಉಪಸ್ಥಿತರಿದ್ದರು.






















