80 ನೇ ವರ್ಷದ ಸ್ವಾತಂತ್ರ್ಯ ದಿನದ ಶುಭಾಶಯಗಳು, ಪ್ರತಿ ವರ್ಷದಂತೆ ಈ ವರ್ಷವೂ ಸಂಭ್ರಮದಿಂದ ಸ್ವಾತಂತ್ರ್ಯ ಆಚರಿಸಲಾಗುತ್ತದೆ. ಸುಮಾರು 200 ವರ್ಷಗಳ ಕಾಲ ಬ್ರಿಟಿಷರ ಅಳ್ವಿಕೆಯಿಂದ ಭಾರತಕ್ಕೆ ಸ್ವಾತಂತ್ರ್ಯ ದೊರೆತ ದಿನವಿದು. ನಮ್ಮ ಪ್ರೀತಿಯ ಮಾತೃಭೂಮಿಗಾಗಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ವೀರರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ದಿನವಾಗಿದೆ. ಸ್ವಾತಂತ್ರ್ಯ ದಿನ ಕೇವಲ ಆಗಸ್ಟ್ 15ಕ್ಕೆ ಮಾತ್ರ ಸೀಮಿತವಾಗಿಲ್ಲ. ಸ್ವಾತಂತ್ರ್ಯ ದಿನಾಚರಣೆ ವರ್ಷಕ್ಕೊಮ್ಮೆ ಬಂದರೂ ನಾವು ನಮ್ಮ ಸಂವಿಧಾನದ ಕಾನೂನಿಗೆ ಒಳಪಟ್ಟು ಪ್ರತಿ ದಿನ ಸ್ವಾತಂತ್ರ್ಯ ಹೊಂದಿರುತ್ತೇವೆ. ಆಗಸ್ಟ್ 15 ಎಲ್ಲರಿಗೂ ಹಬ್ಬದ ದಿನವಾಗಿದೆ. ತ್ರಿವರ್ಣ ಧ್ವಜವನ್ನು ಆರಿಸಿ ರಾಷ್ಟ್ರ ಗೀತೆಯನ್ನು ಹಾಡಿ ರಾಷ್ಟ್ರ ನಾಯಕರಿಗೆ ಗೌರವ ಸಲ್ಲಿಸಿ ಅದ್ದೂರಿಯಿಂದ ಈ ಹಬ್ಬವನ್ನು ಆಚರಿಸುತ್ತೇವೆ. ಸ್ವಾತಂತ್ರ್ಯ ದಿನಾಚರಣೆ ದೇಶದ ಏಕತೆ ಎತ್ತಿ ತೋರಿಸುವ ದಿನವಾಗಿದೆ.
ಶೋಕಿಯ ಆಚರಣೆ ಸಲ್ಲದು:
ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧ ಮಾದರಿಯ ಒಂದು ಸಂದೇಶ ಭಾಷಣ, ರಾಷ್ಟ್ರಧ್ವಜ, ಭೂಪಟ, ಮಹಾತ್ಮ ಗಾಂಧಿ ಚಿತ್ರ ಇರುವ ಚಿತ್ರ ಸಂದೇಶವನ್ನು ವಾಟ್ಸ್‌ಆ್ಯಪ್‌ನಲ್ಲಿ ತೇಲಿ ಬಿಡುತ್ತಾರೆ. ‘ಹ್ಯಾಪಿ ಇಂಡಿಪೆಂಡೆನ್ಸ್ ಡೇ ಎಂದು ಹೇಳಿ ತಾವು ಸ್ವಾತಂತ್ರ್ಯ ದಿನಾಚರಣೆ ಆಚರಿಸಿದೆವು ಎಂದು ಸಂಭ್ರಮಿಸುತ್ತಾರೆ. ಈ ಸಂದೇಶಗಳನ್ನು ಎಲ್ಲರಿಗೂ ಕಳುಹಿಸುತ್ತಾರೆ. ಈ ಮೂಲಕ ಸ್ವಾತಂತ್ರ್ಯವನ್ನು ಆಚರಿಸುವವರು ನಮ್ಮಲ್ಲಿ ಇದ್ದಾರೆ. ಕೇವಲ ಶೋಕಿಗಾಗಿ ಆಚರಿಸಿ ನಾವೇ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಹೇಳುವವರಲ್ಲಿ ನಮ್ಮ ಹೋರಾಟಗಾರರ ಶ್ರಮ ತ್ಯಾಗದ ಬಗ್ಗೆ
ಮತ್ತೆ ಹಲವರು ಇಂತಹ ಸಂದೇಶಗಳನ್ನು ತೆರೆದೇ ನೋಡುವುದಿಲ್ಲ. ರಜಾ ಸಿಕ್ಕಿತೆಂದು ಪ್ರವಾಸಕ್ಕೆ ಹೊರಡುತ್ತಾರೆ. ಮನೆಯಲ್ಲಿ ಕುಳಿತು ಟಿ.ವಿಯಲ್ಲಿ ಹಾಕುವ ಸಿನಿಮಾಗಳನ್ನು ವೀಕ್ಷಿಸುತ್ತಾರೆ. ಇಲ್ಲವೇ ಮನೆಯಲ್ಲಿ ನಿದ್ದೆಗೆ ಜಾರುತ್ತಾರೆ.
ಅತ್ತ ಜಿಲ್ಲಾಡಳಿತ ಆಚರಿಸುವ ಸ್ವಾತಂತ್ರ್ಯ ದಿನಾಚರಣೆ ಜನರಿಲ್ಲದೇ ಬಣಗುಡುವಂತಾಗುತ್ತಿದೆ. ಅಧಿಕಾರಿಗಳು ಕಡ್ಡಾಯವಾಗಿ ಬರಲೇಬೇಕು ಎಂದು ಆದೇಶ ಹೊರಡಿಸುವ ಮಟ್ಟಕ್ಕೆ ಅಧಿಕಾರಿ ಗಳ ಬದ್ಧತೆ ಇಳಿದಿದೆ. ಮನಸೊಳಗೆ ಬೈಯ್ದುಕೊಳ್ಳುತ್ತ ಬರುವವರು ಅನೇಕರು. ಧ್ವಜಾರೋಹಣ ದಂದು ಸೇರುವ ಬಹುತೇಕ ಮಂದಿ ಶಾಲಾ ಮಕ್ಕಳ ಪೋಷಕರು. ಅದೂ ಅವರು ತಮ್ಮ ಮಕ್ಕಳು ಹೇಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸುತ್ತಾರೆ, ಎನ್‌ಸಿಸಿಯಲ್ಲಿ ಹೇಗೆ ಕವಾಯತು ಮಾಡುತ್ತಾರೆ ಎಂದು ವೀಕ್ಷಿಸು ವುದಕ್ಕೆ ಬಂದಿರುತ್ತಾರೆ. ಕೇವಲ ಕಾಟಾಚಾರ ಆಚರಣೆ ಮಾಡದೆ, ಸಾರ್ಥಕತೆ ಯಿಂದ ಈ ಉತ್ಸವ ಆಚರಿಸಬೇಕು. ಕೆಲವು ಶಾಲಾ ಕಾಲೇಜುಗಳಲ್ಲಿ ಆ 14 ರಂದು ಸ್ವಾತಂತ್ರ್ಯ ದಿನಾಚರಣೆ ಮಾಡುವುದು ಕಂಡು ಬರುತ್ತಿದೆ ಕಾರಣ ಆ.15ರಂದು ರಜೆ ಕಾರಣ ….! ನಮ್ಮ ಮಕ್ಕಳಿಗೆ ಗಾಂಧೀಜಿಯವರು ನಮಗೆ ಏನು ಕೊಟ್ಟರು ಎಂದು ಕೇಳಿದರೆ ಆ.15ರಂದು ರಜೆ ಕೊಟ್ಟರು ಎಂದು ಹೇಳುವವರು ಇದ್ದಾರೆ…!
ಒಂದು ಲೆಕ್ಕದಲ್ಲಿ ಹೇಳುವುದಾದರೆ ಉತ್ತಮ ರೀತಿಯ ಸಂತೋಷದ ಅವಕಾಶವೇ ಸ್ವಾತಂತ್ರ್ಯ ಎಂದು ಹೇಳಬಹುದು. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತ ದೇಶ ಹೇಗೆ ಇತ್ತು? ಸ್ವಾತಂತ್ರ್ಯ ನಂತರ ಭಾರತ ಹೇಗೆ ಇದೆ ನಮ್ಮ ಇತಿಹಾಸ ನೋಡಿದಾಗ ಗೊತ್ತಾಗುತ್ತದೆ. ಹಿಂದೆ ಬ್ರಿಟಿಷರ ಕೈಗೊಂಬೆ ಆಗಿದ್ದ ಭಾರತೀಯರು ಸ್ವಾತಂತ್ರ್ಯ ನಂತರ ತನ್ನದೇ ಸ್ವಂತ ಯೋಚನೆ ಮೂಲಕ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.
ನಮ್ಮ ಸಂವಿಧಾನ ಕಾನೂನುಗಳನ್ನು ನಮಗೆ ಸ್ವಾತಂತ್ರ್ಯ ನೀಡಿದರೂ ಕೆಲವು ಬಲಾಡ್ಯ ಶಕ್ತಿಗಳು ನಮ್ಮ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತವೆ. ಕೆಲವೊಂದು ಸಲ ಸ್ವಾತಂತ್ರ್ಯ ಹೆಚ್ಚಾಗಿ ದೇಶದಲ್ಲಿ ನಡೆಯಬಾರದ ಕೆಲಸ ನಡೆದು ಹೋಗುತ್ತದೆ. ವೀರರ ತ್ಯಾಗ ಬಲಿದಾನದ ಜೊತೆಗೆ ಇತಿಹಾಸವನ್ನು ಮರೆಯಬಾರದು, ವ್ಯಾಪಾರದ ನೆಪದಲ್ಲಿ ಯಾರಿಗೂ ಮತ್ತೆ ಆಡಳಿತ ನಡೆಸಲು ಅವಕಾಶ ನೀಡಬಾರದು ಮತ್ತು ಸ್ವಾತಂತ್ರ್ಯ ಹೋರಾಟದ ಭವ್ಯ ಇತಿಹಾಸವನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸಬೇಕು ಎಂದು ಈ ಹಬ್ಬವು ನೆನಪಿಸುತ್ತದೆ. ತ್ತದೆ. ಸ್ವಾತಂತ್ರ್ಯ ದಿನವನ್ನು ಆಚರಿಸಲು ಪ್ರತಿಯೊಬ್ಬರಿಗೂ ವಿಭಿನ್ನ ವಿಧಾನಗಳಿದ್ದರೂ ಅವರ ಉದ್ದೇಶ ಮಾತ್ರ ಒಂದೇ ಆಗಿರುತ್ತದೆ. ದೇಶದ ಜನತೆ ಎಲ್ಲರೂ ಒಟ್ಟಾಗಿ ಒಂದು ದಿನವನ್ನು ಸಂಭ್ರಮದಿಂದ ಆಚರಿಸೋಣ.
ಜಯಶ್ರೀ ಸಂದೇಶ್ ಚಾಕೋಟೆ
ಕಾವು ಪುತ್ತೂರು


































