ಧಾರ್ಮಿಕ

ಪಿ.ಜಿ‌ ಜಗನ್ನಿವಾಸ್ ರಾವ್ ಪುತ್ತೂರು ದೇವಳದ ಧ್ವಜಾರೋಹಣದಲ್ಲಿ ಭಾಗಿಯಾದರೆ, ಬ್ರಹ್ಮರಥ ಏರಿದರೆ ಕಾನೂನು ಹೋರಾಟ | ದೇವಳದ ಪದಾರ್ಥಿಗಳೇ ಧಾರ್ಮಿಕ ಕಾರ್ಯ ನೆರವೇರಿಸಲು ಆಗ್ರಹಿಸಿದ ಶೈವಕ್ಷೇತ್ರ ಸಂರಕ್ಷಣಾ ವೇದಿಕೆ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಾವುದೇ ಅನುಮತಿ ಇಲ್ಲದ, ಕ್ರಿಮಿನಲ್ ಆರೋಪಿಯ ತಂದೆ ಪಿ.ಜಿ. ಜಗನ್ನಿವಾಸ ರಾವ್ ಅವರು ಜಾತ್ರೆಯ ಧ್ವಜಾರೋಹಣ ಮಾಡಿದರೆ ದೇವಸ್ಥಾನದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಲಿದೆ ಎಂದು ಶೈವಕ್ಷೇತ್ರ ಸಂರಕ್ಷಣಾ ವೇದಿಕೆ ಸಂಸ್ಥಾಪಕ ಶ್ರೀನಾಥ್ ಟಿ.ಎಸ್. ಸುಬ್ರಹ್ಮಣ್ಯ ಹೇಳಿದರು.

maithri

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷ ಜಾತ್ರೋತ್ಸವದ ಧ್ವಜಾರೋಹಣ ಹಾಗೂ ಧ್ವಜ ಅವರೋಹಣ ಮಾಡುವ ಜವಾಬ್ದಾರಿ, ಅನುಮತಿ ಇರುವುದು ದೇವಸ್ಥಾನದಲ್ಲಿ ಖಾಯಂ ಪದಾರ್ಥಿ ಹುದ್ದೆಯಲ್ಲಿರುವ ನೌಕರರಿಗೆ ಮಾತ್ರ. ಈ ಮಾಹಿತಿಯನ್ನು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯವರು ಅಖಿತವಾಗಿ ನೀಡಿದ್ದಾರೆ. ದೇವಸ್ಥಾನದಲ್ಲಿ ಪ್ರಸಕ್ತ ನಾಗೇಶ್, ಬಾಲಕೃಷ್ಣ ಇವರು ಖಾಯಂ ಪದಾರ್ಥಿ ಹುದ್ದೆಯಲ್ಲಿರುವ ನೌಕರರು. ಸದ್ರಿ ದೇವಸ್ಥಾನದಲ್ಲಿ ಗರ್ಭಗುಡಿಯ ಎಡನಾಳಿಗೆ ಪ್ರವೇಶಿಸುವ ಅವಕಾಶ ಇರುವುದು ದೇವಳದ ತಂತ್ರಿಗಳಿಗೆ, ಅರ್ಚಕರಿಗೆ, ಸಂಬಂಧಪಟ್ಟ ನೌಕರರಿಗೆ ಮಾತ್ರ ಎಂಬುದು ದೇವಸ್ಥಾನದ ಅಧಿಕೃತ ಮಾಹಿತಿ. ಹೀಗಿರುವಾಗ ದೇವಸ್ಥಾನದಲ್ಲಿ ಯಾವುದೇ ನೇಮಕಾತಿ ಹುದ್ದೆಯಲ್ಲಿಲ್ಲದ, ದೇವಸ್ಥಾನದಲ್ಲಿ ಯಾವುದೇ ನಿಟ್ಟಿನಲ್ಲಿ ನೌಕರರೂ ಅಲ್ಲದ. ಅನುವಂಶಿಕ ಹಕ್ಕೂ ಇಲ್ಲದ ದೇವಸ್ಥಾನದಿಂದ, ಹಿಂದೂ ಧಾರ್ಮಿಕ ದತ್ತಿ ಇಲಾಖೆ, ತಂತ್ರಿಗಳಿಂದ ಯಾವುದೇ ಲಿಖಿತ ಅನುಮತಿ ಆದೇಶ ಇಲ್ಲದೆ ಪಿಜಿ ಜಗನ್ನಿವಾಸ ರಾವ್‌ರವರು ಜಾತ್ರೋತ್ಸವದ ಪವಿತ್ರ ಧ್ವಜಾರೋಹಣ / ಅವರೋಹಣವನ್ನು ಅಕ್ರಮವಾಗಿ ಮಾಡುತ್ತಾರೆ. ಅದೇ ರೀತಿ ಪಿ.ಜಿ. ಜಗನ್ನಿವಾಸ ರಾವ್ ಅವರ ಸಹೋದರ ಪಿ ಜಿ ಚಂದ್ರಶೇಖರ ರಾವ್, ಪಿ.ಜಿ. ಜಗನ್ನಿವಾಸ ರಾವ್ ಇವರ ಪುತ್ರ ಕೃಷ್ಣ ಜೆ ರಾವ್ ಅವರು ಜಾತ್ರೋತ್ಸವ, ಧನುಪೂಜೆ ಸೇರಿದಂತೆ ಪಂಚ ಪರ್ವಗಳ ವಿಶೇಷ ದಿನಗಳಂದು ಯಾವುದೇ ಅನುಮತಿ ಇಲ್ಲದೇ, ಅನಧಿಕೃತವಾಗಿ, ಅಕ್ರಮವಾಗಿ ದೇವಸ್ಥಾನದ ಗರ್ಭಗುಡಿಯ ಎಡನಾಳಿಗೆ ಪ್ರವೇಶಿಸುತ್ತಾರೆ ಎಂದು ಆರೋಪಿಸಿದರು.

ಅದೂ ಅಲ್ಲದೆ ಕಳೆದ ವರ್ಷದ ಜಾತ್ರೋತ್ಸವದ ಸಂದರ್ಭದಲ್ಲಿ ಪಿ.ಜಿ ಜಗನ್ನಿವಾಸ ರಾವ್ ಅವರು ಯಾವುದೇ ಅರ್ಹತೆಗಳಿಲ್ಲದೇ, ಅನುಮತಿ ಇಲ್ಲದೇ ರಥೋತ್ಸವದಂದು ದೇವರು ರಥ ಎರುವುದಕ್ಕೆ ಮುಂಚಿತವಾಗಿ ಪವಿತ್ರ ಬ್ರಹ್ಮರಥವನ್ನು ಏರಿ ನಿಂತಿದ್ದಾರೆ. ಜಾತ್ರೆಯ ಕೊನೆಯ ಅವಬೃತದ ಸಂದರ್ಭದಲ್ಲಿ ಶ್ರೀದೇವರು ವೀರಮಂಗಲದಲ್ಲಿ ಪವಿತ್ರ ಅವಭೃತ ಸ್ನಾನ ಮಾಡುವ ಸಮಯದಲ್ಲಿ ಕೂಡಾ ಪಿ.ಜಿ ಜಗನ್ನಿವಾಸ ರಾವ್ ಅವರು ಹಾಗೂ ಮತ್ತು ಕೃಷ್ಣ ಜೆ ರಾವ್‌ರವರು ಅಕ್ರಮವಾಗಿ ಶ್ರೀದೇವರ ಅತೀ ಸಮೀಪಕ್ಕೆ ಹೋಗಿದ್ದಾರೆ ಎಂದು ಆಪಾದಿಸಿದರು‌

ಪಿ.ಜಿ. ಜಗನ್ನಿವಾಸ ರಾವ್ ಇವರು ಯಾವುದೇ ಬ್ರಾಹ್ಮಣ ಪಂಗಡಕ್ಕೆ ಸೇರಿದವರಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಜನಜನಿತವಾಗಿದೆ. ಆದರೂ ಇವರು ರಥೋತ್ಸವದ ಪೂರ್ವದಲ್ಲಿ ಪವಿತ್ರ ಬ್ರಹ್ಮರಥವನ್ನು ಏರಿದ್ದಾದರೂ ಹೇಗೆ? ಶ್ರೀ ದೇವರ ಅವಭೃತದ ಸಂದರ್ಭದಲ್ಲಿ ಮಗನ ಜೊತೆ ದೇವರ ಜಳಕದ ಸಮಯ ದೇವರ ಅತೀ ಸಮಿಪಕ್ಕೆ ಹೇಗೆ ಉಪಕ್ರಮಿಸಿದರು? ಇದಕ್ಕೆ ಅನುಮತಿ ಕೊಟ್ಟವರು ಯಾರು? ಬ್ರಾಹ್ಮಣ ಪಂಗಡಕ್ಕೆ ಸೇರದ ಇವರು ಬ್ರಾಹ್ಮಣ ಎಂದು ಸುಳ್ಳು ಹೇಳಿ, ವೇದ ಸಂವರ್ಧನಾ ಪ್ರತಿಷ್ಠಾನದ ಮೂಲಕ ಶ್ರೀ ದೇವಳದಲ್ಲಿ ರುದ್ರಪಾರಾಯಣ ಮಾಡುತ್ತಾರೆ. ಬ್ರಾಹ್ಮಣ ಪಂಕ್ತಿಯಲ್ಲಿ ಬ್ರಾಹ್ಮಣರ ಮಧ್ಯೆ ಕುಳಿತು ಊಟ ಮಾಡುತ್ತಾರೆ – ಎಂಬ ಮಾತುಗಳು ಭಕ್ತವಲಯದಲ್ಲಿ ಸಾಕಷ್ಟು ಕೇಳಿ ಬರುತ್ತಿದೆ. ಇದೆಲ್ಲಾ ದೊಡ್ಡ ಪ್ರಮಾದ. ಶ್ರೀ ದೇವಳದ ಶುದ್ಧ ಪಾವಿತ್ರ್ಯತೆಗಳಿಗೆ ಭಂಗವನ್ನುಂಟು ಮಾಡತಕ್ಕ ಅಂಶಗಳೇ ಆಗಿರುತ್ತವೆ.

ಇದೀಗ ಪಿ.ಜಿ. ಜಗನ್ನಿವಾಸ ರಾವ್ ಇವರ ಮಗ ಕೃಷ್ಣ ಜೆ. ರಾವ್ ವಿರುದ್ಧ ತನ್ನ ಸಹಪಾಠಿ ಹಿಂದು ಹುಡುಗಿಗೆ ಮದುವೆಯಾಗುತ್ತೇನೆಂದು ನಂಬಿಸಿ ಮಗು ಕರುಣಿಸಿ ನಂತರ ಮದುವೆ ಆಗಲ್ಲ ಎಂದು ಮೋಸ ಮಾಡಿದ್ದಾನೆಂಬ ಕ್ರಿಮಿನಲ್ ಅಪಾದನೆ ಇದ್ದು ಪ್ರಕರಣ ತನಿಖೆಯಲ್ಲಿರುವ ವಿಚಾರ ಎಲ್ಲರಿಗೂ ತಿಳಿದಿರುವುದೇ ಆಗಿದೆ. ಈ ಪ್ರಕರಣದಲ್ಲಿ ಪಿ.ಜಿ ಜಗನ್ನಿವಾಸ ರಾವ್ ಇವರು ತನ್ನ ಮಗನನ್ನು ಅದೇ ಯುವತಿಯೊಂದಿಗೆ ಮದುವೆ ಮಾಡಿಸುತ್ತೇನೆಂದು ಪೋಲೀಸ್ ಠಾಣೆಯಲ್ಲಿ ದೃಢಪತ್ರ ಬರಕೊಟ್ಟಿದ್ದರೂ, ನಂತರ ಮದುವೆ ಮಾಡಿಸದೇ ವಚನಭ್ರಷ್ಟರಾಗಿ ಮೋಸ ಮಾಡಿರುತ್ತಾರೆ ಎಂದು ಸಂತ್ರಸ್ಥೆ ಯುವತಿಯ ತಾಯಿ ಬಹಿರಂಗವಾಗಿ ಆಪಾದಿಸಿರುತ್ತಾರೆ ಇದು ಮಾಧ್ಯಮಗಳಲ್ಲಿ ಬಿತ್ತರಗೊಂಡಿರುತ್ತದೆ.

ಇಂತಹ ಆರೋಪಗಳ ಸರಮಾಲೆಗಳನ್ನೇ ಹೊಂದಿರುವ ಪಿ.ಜಿ ಜಗನ್ನಿವಾಸ ರಾವ್ ಇವರು ದೇವಸ್ಥಾನದ ಜಾತ್ರೋತ್ಸವಗಳಲ್ಲಿ ಪವಿತ್ರ ಧ್ವಜಾರೋಹಣ ಮಾಡಿದರೆ, ಗರ್ಭಗೃಹದ ಎಡನಾಳಿ ಪ್ರವೇಶಿಸಿದರೆ ಅದು ಹಿಂದೂ ಭಕ್ತಾದಿಗಳ ಧಾರ್ಮಿಕ ನಂಬಿಕೆ, ಭಾವನೆಗಳಿಗೆ ಘಾಸಿಯುಂಟು ಮಾಡುವಂತಹದ್ದಾಗಿರುತ್ತದೆ. ಒಂದು ವೇಳೆ ಪಿ.ಜಿ ಜಗನ್ನಿವಾಸ ರಾವ್ ಇವರು ಜಾತ್ರೋತ್ಸವದ ಧ್ವಜಾರೋಹಣ ಮಾಡಿದರೆ ಅದು ದೇವಸ್ಥಾನದ ಇತಿಹಾಸದಲ್ಲೇ ಕಪ್ಪುಚುಕ್ಕೆಯಾಗಲಿದೆ. ಮಾತ್ರವಲ್ಲ, ಶ್ರೀಮಹತೋಭಾರ ಎಂಬ ಹೆಗ್ಗಳಿಕೆಯ ದೇವಸ್ಥಾನದ ಘನತೆ, ಗೌರವ, ಪಾವಿತ್ರ್ಯತೆ, ಶುದ್ಧಾಚಾರಗಳಿಗೆ ಕೂಡಾ ಧಕ್ಕೆಯನ್ನುಂಟು ಮಾಡುವುದೇ ಆಗಿರುತ್ತದೆ. ದೇವಸ್ಥಾನದಲ್ಲಿ ಖಾಯಂ ಪದಾರ್ಥಿ ಹುದ್ದೆಯ ನೌಕರರು ಈ ಹಿಂದಿನಿಂದ ಧ್ವಜಾರೋಹಣ ನಡೆಸುತ್ತಾ ಬಂದಿರುವುದು ಸಂಪ್ರದಾಯ ಮತ್ತು ನಿಯಮ. ಏನೂ ಅಲ್ಲದ ಪಿ ಜಿ ಜಗನ್ನಿವಾಸ ರಾವ್ ಕೆಲವು ವರ್ಷಗಳಿಂದ ಧ್ವಜಾರೋಹಣದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು, ಸಂಪ್ರದಾಯ ಮತ್ತು ವಿಧಿನಿಯಮಗಳ ನೇರಾ ನೇರ ಉಲ್ಲಂಘನೆಯಾಗಿರುತ್ತದೆ ಎಂದರು.

ಆದ್ದರಿಂದ, ಶ್ರೀ ದೇವಸ್ಥಾನದ ಧ್ವಜಾರೋಹಣವನ್ನು ದೇವಸ್ಥಾನದ ಅಧಿಕೃತ ಖಾಯಂ ಪದಾರ್ಥಿ ಹುದ್ದೆಯಲ್ಲಿರುವ ನೌಕರರಿಂದಲೇ ಮಾಡಿಸಿ, ಅಧಿಕೃತ ನೌಕರರಿಗೆ ಮಾತ್ರ ಗರ್ಭಗುಡಿಯ ಎಡನಾಳಿಯ ಪ್ರವೇಶಕ್ಕೆ ಅವಕಾಶ ನೀಡಿ, ಅನಧಿಕೃತ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ಧ್ವಜಾರೋಹಣ ಮಾಡಲು, ಬ್ರಹ್ಮರಥ ಎರಲು, ಅವಬೃತ ಸ್ನಾನದ ಸಮಯ ಸಮೀಪವರ್ತಿಗಳಾಗುವುದಕ್ಕೆ ಅವಕಾಶ ನೀಡತಕ್ಕದ್ದಲ್ಲ ಎಂದು ದೇವಳದ ತಂತ್ರಿಗಳಲ್ಲಿ, ಆಡಳಿತ ವರ್ಗದವರಲ್ಲಿ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳಲ್ಲಿ ಮಾಧ್ಯಮಗಳ ಮುಖಾಂತರ ಕಳಕಳಿಯ ವಿನಂತಿ ಮಾಡಿಕೊಳ್ಳುತ್ತೇನೆ. ಒಂದು ವೇಳೆ ಇದನ್ನು ಮೀರಿ ಧ್ವಜಾರೋಹಣ ನಡೆಸಿದರೆ ಕಾನೂನು ಹೋರಾಟ ನಡೆಸಲಾಗುವುದು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹಾಗೂ ಅರ್ಚಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಈ ಬಗ್ಗೆ ಈಗಾಗಲೇ ದೇವಳದ ಆಡಳಿತ ವರ್ಗಕ್ಕೆ, ಇಲಾಖಾ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಲಾಗಿದ್ದು, ಆದಾಗ್ಯೂ ಅಕ್ರಮ ಧಾರ್ಮಿಕ ಚಟುವಟಿಕೆಗಳಿಗೆ ಅಪಸವ್ಯಗಳಿಗೆ ಅವಕಾಶ ಮಾಡಿಕೊಟ್ಟರೆ ಅಂತಹವರ ವಿರುದ್ಧ ಸಮಷ್ಠಿಯಲ್ಲಿ ಹಾಗೂ ವೈಯಕ್ತಿವಾಗಿ ಕಾನೂನು ಹೋರಾಟ ನಡೆಸಲಾಗುವುದು. ಇಲ್ಲಿ ಪ್ರಸ್ತುತಪಡಿಸಲಾದ ವಿಚಾರಗಳು ಯಾರ ವಿರುದ್ಧವೂ ದ್ವೇಷ ಭಾವನೆಯಿಂದ ಕೂಡಿದ್ದಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ ಎಂದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಉಪ್ಪಿನಂಗಡಿ ವೃತ್ತದಲ್ಲಿ ಉಬಾರ್ ಮಂಜ ಬೈದ್ಯರ ಪುತ್ಥಳಿ ಸ್ಥಾಪಿಸಿ, ಅವರ ಹೆಸರನ್ನಿಡುವಂತೆ ಗೆಜ್ಜೆಗಿರಿ ಸಮಿತಿ ಮನವಿ

ಉಪ್ಪಿನಂಗಡಿ ಮುಖ್ಯ ರಸ್ತೆಯ ವೃತ್ತಕ್ಕೆ ವೀರ ಉಬಾರ್ ಮಂಜ ಬೈದ್ಯರ ತ್ಯಾಗವನ್ನು ಸಾರುವ ಸಲುವಾಗಿ…

ಅನಾಹುತ, ಮೃತ್ಯು ಕಂಟಕ ಪರಿಹಾರಕ್ಕಾಗಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೃತ್ಯುಂಜಯ ಸೂಕ್ತ ಜಪ, ವಿಶೇಷ ಪ್ರಾರ್ಥನೆ

ಪುತ್ತೂರು: ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಮೃತ್ಯುಂಜಯ…