ಕರಾವಳಿ

ದ.ಕ. ಜಿಲ್ಲಾ ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಸಮಿತಿ ಅಸ್ತಿತ್ವಕ್ಕೆ | ತುಳುನಾಡು ಹೋರಾಟದ ಕ್ರಾಂತಿವೀರ ಉಬಾರ್ ಮಂಜ ಬೈದ್ಯರ ಸ್ಮಾರಕ, ಪುತ್ಥಳಿ ನಿರ್ಮಾಣಕ್ಕೆ ಒತ್ತಾಯ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ತುಳುನಾಡು ಹೋರಾಟದ ಕ್ರಾಂತಿವೀರ ಉಪ್ಪಿನಂಗಡಿಯ ಮಂಜಯ್ಯ ಬೈದ್ಯ ಅವರ ಕ್ರಾಂತಿಯ ಹೋರಾಟದ ವಿಚಾರಗಳನ್ನು, ಜೀವನಗಾತೆ, ಅವರ ತ್ಯಾಗ ಬಲಿದಾನವನ್ನು ಜನರಿಗೆ ಇನ್ನಷ್ಟು ತಿಳಿಸುವ ಉದ್ದೇಶದಿಂದ ಅವರ ವಂಶಸ್ಥರನ್ನು ಒಳಗೊಂಡ ಕ್ರಾಂತಿಕಾರಿ ಮಂಜಯ್ಯ ಬೈದ್ಯ ಸಂಸ್ಮರಣ ಸಮಿತಿಯನ್ನು ರಚಿಸಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಸಂಪತ್ ಬಿ. ಸುವರ್ಣ ಹೇಳಿದರು.

maithri

ಪತ್ರಿಕಾಗೋಷ್ಠಿಯಲ್ಲಿ ಸಾವಿರದ ಸಂಸ್ಕೃತಿಗೆ ಸಾವಿರದ ಇತಿಹಾಸ ಎಂಬ ಮಾಹಿತಿ ಪತ್ರವನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಉಬಾರ್ ಮಂಜ ಬೈದ್ಯ ಎಂದು ಕರೆಸಿಕೊಳ್ಳುತ್ತಿದ್ದ ಉಪ್ಪಿನಂಗಡಿಯ ಮಂಜಯ್ಯ ಬೈದ್ಯ ಅವರು ಬ್ರಿಟಿಷರ ವಿರುದ್ಧ ಹೋರಾಡಿದ ಕರ್ನಾಟಕದ ಕರಾವಳಿಯ ಅಗ್ರಗಣ್ಯ ಸ್ವಾತಂತ್ರ್ಯ ಹೋರಾಟಗಾರರು. ಕ್ರಾಂತಿಕಾರಿ ರೈತ ನಾಯಕರೂ, ಬ್ರಿಟಿಷ್ ಸರಕಾರದಲ್ಲಿ ಉದ್ಯೋಗಿಯೂ ಆಗಿದ್ದರು. ಪುತ್ತೂರು ಅವರ ಹುಟ್ಟೂರು, ಅವರ ಕರ್ಮಭೂಮಿ ಹಾಗಾಗಿ ಇಲ್ಲಿ ವಿಶೇಷ ಮುತುವರ್ಜಿ ವಹಿಸಿಕೊಂಡು ಇಲ್ಲಿ ಪಕ್ಷ ರಹಿತ, ಜಾತ್ಯಾತೀತವಾಗಿ ಸಮಿತಿಯನ್ನು ಮುಂದಿನ ದಿನಗಳಲ್ಲಿ ಸಮಾಜದ ಎಲ್ಲಾ ಸಮುದಾಯದವರನ್ನು ಒಳಗೊಂಡು ದಕ್ಷಿಣ ಕನ್ನಡ ಜಿಲ್ಲೆಯ ಪ್ರತೀ ತಾಲೂಕಿನಲ್ಲಿ ಸಮಿತಿ ರಚಿಸಲಾಗುವುದು. ಅಲ್ಲದೆ ಕ್ರಾಂತಿವೀರ ಮಂಜ ಬೈದ್ಯರ ಸ್ಮಾರಕ ನಿರ್ಮಾಣ ಮಾಡುವಂತೆ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.

ಅಪ್ರತಿಮ ದೇಶ ಭಕ್ತ, ಅಗ್ರಗಣ್ಯ ಸ್ವಾತಂತ್ರ್ಯ ಹೋರಾಟಗಾರ ಬ್ರಿಟಿಷರ ವಿರುದ್ಧ ದಂಗೆ ಎದ್ದು ಹುತಾತ್ಮರಾದ ಉಪ್ಪಿನಂಗಡಿಯ ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣೆ ಸಾವಿರದ ಸಂಸ್ಕೃತಿಗೆ ಸಾವಿರದ ಇತಿಹಾಸ ಎನ್ನುವ ಪ್ರಚಾರ ಅಭಿಯಾನ ಕೈಗೊಳ್ಳಲಾಗಿದೆ. ಈಗಾಗಲೇ ಇಲ್ಲಿನ ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಎಲ್ಲಾ ಜನಪ್ರತಿನಿಧಿಗಳಿಗೆ ಇದಕ್ಕೆ ಪೂರಕವಾಗಿ ನಮ್ಮ ಬೇಡಿಕೆಗಳಿಗೆ ಸ್ಪಂಧಿಸಿದ್ದಾರೆ. ಈ ಹಿಂದೆಯೂ ಬೇರೆ ಬೇರೆ ಸಮಿತಿಯವರು ಮಂಜಬೈದ್ಯರ ಪುತ್ಥಳಿ ನಿರ್ಮಾಣಕ್ಕೆ, ವೃತ್ತ ನಿರ್ಮಾಣಕ್ಕೆ ಮನವಿ ಸಲ್ಲಿಸಿರುವುದು ನಾವು ಗಮನಿಸಿದ್ದೇವೆ ಎಂದು ಅವರು ತಿಳಿಸಿದರು.

ಮಂಜ ಬೈದ್ಯರ ಸ್ಮಾರಕ, ವೃತ್ತ ನಿರ್ಮಾಣದ ಬೇಡಿಕೆ:

ಮಂಜಯ್ಯ ಬೈದ್ಯ ಅವರ ಸ್ಮಾರಕವನ್ನು ಹಾಗೂ ಕಂಚಿನ ಪುತ್ಥಳಿಯನ್ನು ಉಪ್ಪಿನಂಗಡಿಯಲ್ಲಿ ನಿರ್ಮಾಣ ಮಾಡಬೇಕು, ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಬಳಿ ಅಥವಾ ನಗರದ ಪ್ರಮುಖ ಜಾಗದಲ್ಲಿ ಮಂಜ ಬೈದ್ಯರ ಪ್ರತಿಮೆ ಸ್ಥಾಪಿಸಬೇಕು. ಸರಕಾರಿ ಉದ್ಯೋಗಿಯಾಗಿದ್ದ ಮಂಜ ಬೈದ್ಯರ ನೆನಪಿಗೆ ಅವಿಭಜಿತ ಪುತ್ತೂರು ತಾಲೂಕಿನ (ಬೆಳ್ತಂಗಡಿ, ಬಂಟ್ವಾಳ, ಸುಳ್ಯ, ಪುತ್ತೂರು) ಯಾವುದಾದರೂ ಮಿನಿ ವಿಧಾನ ಸೌಧಕ್ಕೆ, ಸರಕಾರಿ ಕಾಲೇಜಿಗೆ ಮಂಜ ಬೈದ್ಯರ ಹೆಸರನ್ನು ಇಡಬೇಕು. ಉಪ್ಪಿನಂಗಡಿ – ಗುರುವಾಯನಕೆರೆ ಮುಖ್ಯರಸ್ತೆಗೆ ಉಪ್ಪಿನಂಗಡಿ ಮಂಜ ಬೈದ್ಯರ ಹೆಸರು ಇಡಬೇಕು. ಬೆಳ್ತಂಗಡಿ ಉಪ್ಪಿನಂಗಡಿ ಮಧ್ಯ ಭಾಗ ಕಲ್ಲೇರಿಯಲ್ಲಿ ಮಂಜ ಬೈದ್ಯರ ಹೆಸರಿನಲ್ಲಿ ವೃತ್ತ ನಿರ್ಮಿಸಬೇಕು, ಶಾಲಾ ಪಠ್ಯ ಪುಸ್ತಕಗಳಲ್ಲಿ ಮಂಜ ಬೈದ್ಯರ ಸ್ವಾತಂತ್ರ್ಯ ಹೋರಾಟದ ವಿಚಾರ ಅಳವಡಿಸಿ ವಿದ್ಯಾರ್ಥಿಗಳಲ್ಲಿ ಕರಾವಳಿಯ ಯೋಧರ ದೇಶ ಪ್ರೇಮದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು., ಸರಕಾರಿ ಆಚರಣೆಗಳಲ್ಲಿ ಮಂಜ ಬೈದ್ಯರ ಹುಟ್ಟು ಹಬ್ಬವನ್ನೂ, ವೀರ ಹುತಾತ್ಮ ದಿನವನ್ನು ಆಚರಿಸಬೇಕು, ಮಂಜ ವೈದ್ಯರನ್ನು ಗಲ್ಲಿಗೇರಿಸಿದ ಮಂಗಳೂರಿನ ಬಿಕರ್ನಕಟ್ಟೆಯ ಬಳಿ ಅವರ ಹೆಸರಿನಲ್ಲಿ ಥೀಮ್ ಪಾರ್ಕ್ ನಿರ್ಮಿಸಬೇಕು ಎಂದು ಹೇಳಿದ ಸಂಪತ್ ಸುವರ್ಣ ಅವರು ಈ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸಮಿತಿಯ ನೇತೃತ್ವದಲ್ಲಿ ಅಭಿಯಾನ ಕೈಗೊಳ್ಳಲಾಗುವುದು ಎಂದರು.

ಶಾಸಕರೇ ಉಲ್ಲೇಖಿಸಿದ್ದ ಮಂಜ ಬೈದ್ಯರ ವೃತ್ತ ನಿರ್ಮಾಣ: ಡಾ. ರಾಜರಾಮ್ ಕೆ.ಪಿ.

ಜಿಲ್ಲಾ ಸಮಿತಿ ಪ್ರಧಾನ ಸಂಚಾಲಕ ಡಾ. ರಾಜರಾಮ್ ಕೆ.ಪಿ ಮಾತನಾಡಿ, ಹಲವಾರು ಹೋರಾಟಗಾರರ ತ್ಯಾಗ ಬಲಿದಾನದಿಂದ ನಾವು ಇವತ್ತು ಸ್ವತಂತ್ರರಾಗಿದ್ದೇವೆ. ಈ ನಿಟ್ಟಿನಲ್ಲಿ ಅವರನ್ನು ನೆನೆಪಿಸುವುದು ನಮ್ಮ ಕರ್ತವ್ಯ. ಮಂಜಬೈದ್ಯರನ್ನು ಸ್ಮರಣೆ ಮಾಡುವ ನಿಟ್ಟಿನಲ್ಲಿ ನಾವೆಲ್ಲ ಸಮಿತಿ ರಚನೆ ಮಾಡಿದ್ದೇವೆ. ಉಪ್ಪಿನಂಗಡಿಯಲಿ ಮಂಜಬೈದ್ಯರ ವೃತ್ತ ನಿರ್ಮಾಣಕ್ಕೆ ಈ ಹಿಂದೆಯೇ ಶಾಸಕ ಅಶೋಕ್ ಕುಮಾರ್ ರೈ ಅವರು ಪತ್ರಿಕಾಗೋಷ್ಟಿಯಲ್ಲಿ ಉಲ್ಲೇಖಿಸಿದ್ದರು. ಇದರ ಜೊತೆಗೆ ಬೇರೆ ಸಮಿತಿಯಿಂದ ಈ ಕುರಿತು ಶಾಸಕರಿಗೆ ಮನವಿ ನೀಡಿದ್ದೇವೆ. ಕೆದಂಬಾಡಿ ರಾಮಯ್ಯ ಗೌಡರು, ಎನ್.ಕಿಲ್ಲೆ ಸಹಿತ ಹಲವಾರು ಮಂದಿ ತುಳುನಾಡಿನ ದೇಶ ಭಕ್ತರು ಇದ್ದಾರೆ. ಅದೇ ರೀತಿ ಮಂಜಬೈದ್ಯರು ಕೂಡ ಪುತ್ತೂರು ತಾಲೂಕಿನ ವೀರ ಪುರುಷರು. ಅವರ ಉಪಕಾರ ಸ್ಮರಣೆಯನ್ನು ನಾವು ಮಾಡಬೇಕಾಗಿದೆ ಎಂದರು.

ಮೇ 27ರಂದು ಸಂಸ್ಮರಣೆ: ಆರ್.ಸಿ. ನಾರಾಯಣ್
ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಸಮಿತಿ ಪುತ್ತೂರು ತಾಲೂಕಿನ ಪ್ರಧಾನ ಸಂಚಾಲಕ ಆರ್.ಸಿ.ನಾರಾಯಣ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ನೆನಪು ಮತ್ತು ಮನನ ಮಾಡುವ ನಿಟ್ಟಿನಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಪುತ್ಥಳಿಯನ್ನು, ವೃತ್ತ ನಿರ್ಮಾಣ ಮಾಡಿದ್ದೇವೆ. ಆದರೆ ಮಂಜಬೈದ್ಯರ ಸ್ಮರಣೆ ಕಾರ್ಯಕ್ರಮ ಆಗಿರಲಿಲ್ಲ. ಈ ಕುರಿತು ರಾಮಕೃಷ್ಣ ಆಚಾರ್ ಅವರ ತಮ್ಮ ಕೃತಿಯಲ್ಲಿ ಉಲ್ಲೇಖಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿಯ ರೈತ ಪರ ಹೋರಾಟಗಾರರಾಗಿದ್ದ ಮಂಜಬೈದ್ಯರು ಬ್ರಿಟೀಷರ ವಿರುದ್ಧ ಹೋರಾಟ ಮಾಡಿದವರು. ಈ ನಿಟ್ಟಿನಲ್ಲಿ ಅವರನ್ನು ಬಿಕರ‍್ನಕಟ್ಟೆಯಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿತ್ತು. ಮಂಜಬೈದ್ಯರ ಸಂಸ್ಮರಣೆ ಹಿನ್ನೆಲೆಯಲ್ಲಿ ಮೇ 27ಕ್ಕೆ ಕಾರ್ಯಕ್ರಮ ನಡೆಯಲಿದೆ. ಆ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕೆಂದರು.

ಉಪ್ಪಿನಂಗಡಿ ಗ್ರಾ.ಪಂ.ನಲ್ಲಿಯೂ ಒತ್ತಾಯಿಸಿದ್ದೆ: ಸುರೇಶ್ ಅತ್ರಿಮಜಲು
ಪುತ್ತೂರು ಸಮಿತಿಯ ಸಂಚಾಲಕ ಸುರೇಶ್ ಅತ್ರಿಮಜಲು ಮಾತನಾಡಿ ಯಾವಾಗ ರಾಮೇಗೌಡರ ಹೋರಾಟ ಸಮಿತಿ ಮೂಲಕ ರಾಮಯ್ಯ ಗೌಡರ ಪುತ್ಥಳಿಯನ್ನು ಮಂಗಳೂರಿನಲ್ಲಿ ಸ್ಥಾಪನೆ ಮಾಡಿದ್ದೇವೂ ಆಗ ಇತಿಹಾಸ ಗೊತ್ತಾಯಿತ್ತು. ಆಗ ಮಂಜಬೈದ್ಯರ ಬಗ್ಗೆ ವಿಚಾರ ಬಗ್ಗೆ ಮಾಹಿತಿ ಕಳೆ ಹಾಕಿದಾಗ ಉಪ್ಪಿನಂಗಡಿಯವರು ಎಂಬ ಮಾಹಿತಿ ತಿಳಿದ ಕೂಡಲೇ ನಾನು ಪಂಚಾಯತ್‌ನಲ್ಲಿ ಹಲವಾರು ಬಾರಿ ಉಪ್ಪಿನಂಗಡಿಯಲ್ಲಿ ವೃತ್ತಕ್ಕೆ ಮಂಜಬೈದ್ಯರ ನಾಮಕರಣ ಮಾಡಲು ಒತ್ತಾಯಿಸಿದ್ದೆ. ಆದರೆ ಮಂಜಬೈದ್ಯರ ಸ್ಪಷ್ಟ ಮಾಹಿತಿ ಇರಲಿಲ್ಲ. ಆದರೆ ಮತ್ತೆ ಮಾಹಿತಿ ಕೆದಕಿದಾಗ ಅವರ ವಂಶಸ್ಥರು ನಮ್ಮ ಮನೆಯ ಪಕ್ಕದವರೇ ಆಗಿದ್ದರು. ಈ ಕುರಿತು ಇತಿಹಾಸ ಪಡೆಯಲು ಹಿರಿಯ ಪತ್ರಕರ್ತರಾಗಿದ್ದ ಗೋಪಾಲಕೃಷ್ಣ ಕುಂಟಿನಿಯವರು ಬಹಳ ಶ್ರಮ ಪಟ್ಟಿದ್ದಾರೆ ಎಂದವರು ತಿಳಿಸಿದರು. ಒಟ್ಟಿನಲ್ಲಿ ಉಪ್ಪಿನಂಗಡಿಯಲ್ಲಿ ವೃತ್ತವಾಗಲಿ, ಪ್ರತಿಮೆಯಾಗಲಿ ಎಲ್ಲದಕ್ಕೂ ಧರ್ಮಾತಿತ, ಜಾತ್ಯಾತೀತವಾಗಿ ನಾವು ಒತ್ತಾಯಿಸುತ್ತೇವೆ ಎಂದರು.

ಮಂಜಬೈದ್ಯರ ಸಂಸ್ಮರಣೆ ನಿರಂತರ ನಡೆಯಬೇಕು: ವೆಂಕಪ್ಪ ಪೂಜಾರಿ
ಗೌರವ ಸಲಹೆಗಾರರು ಮತ್ತು ಮಂಜ ಬೈದ್ಯರ ವಂಶಸ್ಥರಾಗಿರುವ ವೆಂಕಪ್ಪ ಪೂಜಾರಿ ಮಾತನಾಡಿ, ನನ್ನ ಹಿರಿಯರು ಹೇಳಿದ ಮಾಹಿತಿಯಂತೆ ಹೆರಿಗೆ ಮಾಡಿಸುತ್ತಿದ್ದ ಅಜ್ಜಿಯ ವಂಶಸ್ಥರರು ಮಂಜಬೈದ್ಯರು ಎಂದು ವಿವರಿಸಿದ ಅವರು ಮಂಜಬೈದ್ಯರು ಅಜಾನುಬಾಹುವಾಗಿದ್ದು, 7 ಪೀಟ್ ಉದ್ದವಾಗಿದ್ದರು ಎಂದು ನನ್ನ ಅಜ್ಜಿ ಹೇಳಿದ್ದರು. ಮಂಜಬೈದ್ಯರು ಬ್ರಿಟೀಷರ ಖಜಾನೆ ಲೂಟಿ ಮಾಡಿದ್ದಾರೆಂಬ ಆರೋಪದಡಿಯಲ್ಲಿ ಬ್ರಿಟೀಷರು ಬೆಳಗ್ಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಂಜಬೈದ್ಯರನ್ನು ಹಿಡಿದುಕೊಂಡು ಹೋಗಲು ಬಂದಿದ್ದರು. ಆಗ ಮಂಜಬೈದ್ಯರು ಅವರನ್ನು ಹತ್ಯೆ ಮಾಡಿ ಕಾಡಿನ ಕಡೆ ಓಡಿ ಹೋಗಿದ್ದರು. ಅದಾದ ಬಳಿಕ ಏನಾಯಿತು ಎಂದು ಗೊತ್ತಿಲ್ಲ ಎಂದು ನಮ್ಮ ಹಿರಿಯರು ಹೇಳಿರುವ ಮಾತು. ಆದರೆ ಇದೀಗ ಅವರು ದಾಖಲೆಯ ಪ್ರಕಾರ ಬ್ರಿಟೀಷರಿಂದ ಬಂಧನಕ್ಕೆ ಒಳಗಾಗಿ ಗಲ್ಲಿಗೇರಿಸಿದ ವಿಚಾರ ನಮಗೆ ಗೊತ್ತಾಗಿದೆ. ಮುಂದೆ ಮಂಜಬೈದ್ಯರ ಸಂಸ್ಮರಣೆ ನಡೆಯಬೇಕಾಗಿದೆ ಎಂದವರು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ರಮಾನಾಥ್ ವಿಟ್ಲ, ಮಂಜಯ್ಯ ಬೈದ್ಯ ಅವರ ವಂಶದ ಜನಾರ್ದನ ಪೂಜಾರಿ, ವಸಂತ, ಪುತ್ತೂರು ಸಮಿತಿ ಸಂಚಾಲಕರಾಗಿರುವ ಕೋಡಿಂಬಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೆ. ರಾಮಚಂದ್ರ ಪೂಜಾರಿ ಶಾಂತಿನಗರ, ಸಂಚಾಲಕ ಸುನಿಲ್ ದಡ್ಡು, ಬೆಳ್ತಂಗಡಿ ಸಮಿತಿ ಸಂಚಾಲಕ ಶಶಿಧರ್, ಉಪ್ಪಿನಂಗಡಿ ಯುವವಾಹಿನಿ ಅಧ್ಯಕ್ಷ ಮನೋಜ್ ಸಾಲ್ಯಾನ್, ಕಾರ್ಯದರ್ಶಿ ರಮೇಶ್ ಬಿಳಿಯೂರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts