ಬಂಟ್ವಾಳ: ವೃದ್ಧೆಯೊಬ್ಬರನ್ನು ಕೊಲೆಗೈದು ಚಿನ್ನಾಭರಣ ದೋಚಿದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಮಂಗಳೂರು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಅಮ್ಮುಂಜೆ ನಿವಾಸಿ ಬೆನಡಿಕ್ಟ್ ಕಾರ್ಲೋ (73) ಅವರ ಆರೈಕೆ ನೋಡಿಕೊಳ್ಳುತ್ತಿದ್ದ ಅಮ್ಟಾಡಿ ನಿವಾಸಿ ಕು. ಏಲ್ಮಾ ಪ್ರೆಶ್ಚಿತ್ ಬರೆಟ್ರೋ (23) ಎಂಬಾಕೆ, ವೃದ್ಧೆಯ ಬಳಿಯಿದ್ದ ಚಿನ್ನಾಭರಣಗಳನ್ನು ದೋಚುವ ಉದ್ದೇಶದಿಂದ ತನ್ನ ಸ್ನೇಹಿತ ನರಿಕೊಂಬು ನಿವಾಸಿ ಸತೀಶ ನಾಯಕ್ (28)ನ ಸಹಾಯದಿಂದ ಆಹಾರದಲ್ಲಿ ವಿಷ ಬೆರೆಸಿ ಕೊಲೆ ಮಾಡಲು ಯತ್ನಿಸಿದ್ದಳು. ಆ ಯತ್ನ ವಿಫಲವಾದ ಬಳಿಕ ಮತ್ತೋರ್ವ ಆರೋಪಿ ನರಿಕೊಂಬು ನಿವಾಸಿ ಚರಣ್ ಕುಮಾರ್ (31)ನ ಸಹಾಯದಿಂದ 2021ರ ಜನವರಿ 25ರಂದು ರಾತ್ರಿ ಬೆನಡಿಕ್ಟ್ ಕಾರ್ಲೋರನ್ನು ಉಸಿರುಗಟ್ಟಿಸಿ ಹತ್ಯೆಗೈದಿದ್ದರು.
ಬಳಿಕ ವೃದ್ಧೆಯ ಬಳಿಯಿದ್ದ 61.070 ಗ್ರಾಂ ತೂಕದ, ಅಂದಿನ ಸುಮಾರು ₹3 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿ, ಪ್ರಕರಣದ ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸಿದ್ದರು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 22/2021ರಡಿ ಐಪಿಸಿ ಕಲಂ 302, 392, 120(ಬಿ), 201 ಹಾಗೂ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಆಗಿನ ಬಂಟ್ವಾಳ ಗ್ರಾಮಾಂತರ ಠಾಣೆಯ ಉಪನಿರೀಕ್ಷಕರಾಗಿದ್ದ ಪ್ರಸನ್ನ ಎಂ.ಎಸ್. ಆರೋಪಿಗಳನ್ನು ಬಂಧಿಸಿದ್ದು, ಆಗಿನ ಪೊಲೀಸ್ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಪ್ರಕರಣದ ತನಿಖೆ ನಡೆಸಿ ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಮೂವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನಡೆಸಿದ್ದು, ಜುಲೈ 28, 2026ರಂದು ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಅವರು ಮೂವರು ಆರೋಪಿಗಳೂ ಅಪರಾಧಿಗಳೆಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
























