tamanvi
ಅಪರಾಧ

ಕುಕ್ಕರ್ ಬಾಂಬ್ ಪ್ರಕರಣ: ಆರೋಪಿ ಯಾಸೀನ್ ಖಾತೆ ಇಡಿ ಮುಟ್ಟುಗೋಲು

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ನಗರದಲ್ಲಿ 2022ರಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಓರ್ವನಾದ ಸೈಯದ್ ಯಾಸಿನ್ ಖಾತೆಯಲ್ಲಿದ್ದ 29,176 ರೂ.ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

2002 ರ ಹಣ ವರ್ಗಾವಣೆ ತಡೆ ಕಾಯಿದೆಯ ನಿಬಂಧನೆಗಳ ಅಡಿ ಆ.5ರಂದು ಹಣ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 2022ರ ನ.19ರಂದು ಸಂಜೆ ಮಂಗಳೂರಿನ ಕಂಕನಾಡಿ ಸಮೀಪ ಸ್ಫೋಟ ಸಂಭವಿಸಿತ್ತು. ಕುಕ್ಕರ್ ಬಾಂಬ್‌ನ್ನು ಆಟೋರಿಕ್ಷಾದಲ್ಲಿ ಸಾಗಿಸುತ್ತಿದ್ದ ಆರೋಪಿ ಮಹಮ್ಮದ್ ಶಾರೀಕ್ ಗಂಭೀರವಾಗಿ ಗಾಯಗೊಂಡಿದ್ದ. ಆಟೋರಿಕ್ಷಾ ಚಾಲಕ ಕೂಡ ಗಾಯಗೊಂಡಿದ್ದರು. ಈ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಲಾಗಿತ್ತು. ಇದು ಐಸಿಸ್ ಸಂಘಟನೆಯ ಭಯೋತ್ಪಾದನಾ ಕೃತ್ಯವೆಂಬುದು ತನಿಖೆಯಲ್ಲಿ ತಿಳಿದುಬಂದಿತ್ತು.

ಕದ್ರಿ ಮಂಜುನಾಥ ದೇವಸ್ಥಾನ ಭಯೋತ್ಪಾದಕರ ಗುರಿಯಾಗಿತ್ತು. ಆದರೆ ಅಲ್ಲಿಗೆ ಸಾಗಿಸುವ ಮೊದಲೇ ಬಾಂಬ್ ಸ್ಫೋಟಗೊಂಡಿತ್ತು. ಬಾಂಬ್ ಟೈಮರ್‌ನ್ನು 90 ನಿಮಿಷಗಳ ಬದಲಿಗೆ 9 ಸೆಕೆಂಡುಗಳಿಗೆ ಹೊಂದಿಸಿದ್ದು ಇದಕ್ಕೆ ಕಾರಣವಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿತ್ತು. ಇಡಿ ಕೂಡ ತನಿಖೆ ಆರಂಭಿಸಿತ್ತು.

ಕರ್ನಲ್’ ಎಂಬ ಐಸಿಸ್ ಆನ್‌ಲೈನ್ ಹ್ಯಾಂಡ್ಲರ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಅಲಿಯಾಸ್‌ ಪ್ರೇಮ್‌ರಾಜ್ ಮತ್ತು ಇತರ ಆರೋಪಿಗಳಿಗೆ ವಿರ್ಕ ಆ್ಯಪ್/ಟೆಲಿಗ್ರಾಮ್ ಇತ್ಯಾದಿ ಮೂಲಕ ಸುಧಾರಿತ ಸ್ಫೋಟಕ ಸಾಧನ /ಬಾಂಬ್ ತಯಾರಿಸಲು ತರಬೇತಿ ನೀಡಿದ್ದ. ಅಲ್ಲದೆ ವಿವಿಧ ಬೇನಾಮಿ ಖಾತೆಗಳು ಮತ್ತು ಕ್ರಿಸ್ಟೋಕರೆನ್ಸಿಗಳ ಮೂಲಕ ಹಣವನ್ನು ವ್ಯವಸ್ಥೆ ಮಾಡಿದ್ದ. ಈ ಕ್ರಿಸ್ಟೋಕರೆನ್ಸಿಗಳನ್ನು ಸೈಯದ್ ಯಾಸಿನ್ ಮತ್ತು ಮೊಹಮ್ಮದ್ ಶಾರಿಕ್ ಏಜೆಂಟರ ಮೂಲಕ ನಗದೀಕರಿಸುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ನಗದೀಕರಿಸಿದ ಕ್ರಿಸ್ಟೋಕರೆನ್ಸಿಗಳನ್ನು ಫಿನೋ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಮೋಸದಿಂದ ತೆರೆಯಲಾದ ಬೇನಾಮಿ ಖಾತೆಗಳ ಮೂಲಕ ವರ್ಗಾಯಿಸಲಾಗುತ್ತಿತ್ತು. ಈ ರೀತಿಯಾಗಿ ವಿವಿಧ ಕ್ರಿಸ್ಟೋಕರೆನ್ಸಿ ಮಾರಾಟಗಾರರಿಂದ ಒಟ್ಟು 2,86,008 ರೂ. ಹಣವನ್ನು ಬೇನಾಮಿ ಖಾತೆಗಳಿಗೆ ಜಮೆ ಮಾಡಲಾಗಿತ್ತು. ಅಲ್ಲದೆ ಏಜೆಂಟ್‌ಗಳಿಂದ 41,680 ರೂ. ನಗದು ರೂಪದಲ್ಲಿ ಸಂಗ್ರಹಿಸಲಾಗಿತ್ತು.

ಭಯೋತ್ಪಾದಕ ಚಟುವಟಿಕೆಗಳಿಗೆ ಬಳಕೆ

ಈ ರೀತಿ ಪಡೆದ ಹಣವನ್ನು ಐಇಡಿ ಸ್ಫೋಟಕ ಜೋಡಿಸಲು ಬೇಕಾದ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಲು, ಮೈಸೂರು ನಗರ ಮತ್ತು ಇತರ ಸ್ಥಳಗಳಲ್ಲಿ ಅಡಗುತಾಣಗಳನ್ನು ಬಾಡಿಗೆಗೆ ಪಡೆಯಲು ಹಾಗೂ ತಮಿಳುನಾಡು, ಕೇರಳ ಮತ್ತು ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು ಬಳಸಲಾಗಿತ್ತು. ಇನ್ನೊಬ್ಬ ಆರೋಪಿ ಮಾಜ್ ಮುನೀರ್, ಆನ್‌ಲೈನ್ ಹ್ಯಾಂಡ್ಲರ್ “ಕರ್ನಲ್’ ಕಳುಹಿಸಿದ ವಿವಿಧ ಹಣವನ್ನು ಸ್ವೀಕರಿಸಲು ಮೊಹಮ್ಮದ್ ಶಾರಿಕ್‌ಗೆ ಫಿನೋ ಪೇಮೆಂಟ್ಸ್ ಬ್ಯಾಂಕ್‌ನ ಬೇನಾಮಿ ಖಾತೆಗಳ ವಿವರಗಳನ್ನು ಒದಗಿಸಿದ್ದನು.

ಶಾರಿಕ್ ಬ್ಯಾಗ್‌ನಿಂದಲೂ ವಶ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮೊಹಮ್ಮದ್ ಶಾರಿಕ್‌ನ ಚೀಲದಿಂದ ಕರ್ನಾಟಕ ಪೊಲೀಸರು ವಶಪಡಿಸಿಕೊಂಡ 39,228 ಮೊತ್ತವನ್ನು ಎನ್‌ಐಎ ವಶಕ್ಕೆ ಪಡೆದಿತ್ತು. ಇದೀಗ ಸೈಯದ್ ಯಾಸಿನ್ ಬ್ಯಾಂಕ್ ಖಾತೆಯಲ್ಲಿ ಲಭ್ಯ ವಿರುವ 29,176 ರೂ. ಮೊತ್ತವನ್ನು ಕೂಡ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮನೆಗೆ ಬಿಡುವುದಾಗಿ ಬೈಕ್‌ನಲ್ಲಿ ಕರೆತಂದು ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೋ ಪ್ರಕರಣ ದಾಖಲು

ಮಂಗಳೂರು: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಪ್ರಾಪ್ತ ಬಾಲಕಿಯನ್ನು ಮನೆಗೆ ಬಿಡುವುದಾಗಿ…

1 of 118