ಟ್ರೆಂಡಿಂಗ್ ನ್ಯೂಸ್

ಫೆ. 1ರಂದು ಗೋಕುಲ ಬಡಾವಣೆಯಲ್ಲಿ ದ್ವಾರಕೋತ್ಸವ 2026

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರು ದ್ವಾರಕಾ ಪ್ರತಿಷ್ಠಾನದ ವತಿಯಿಂದ ಫೆ. 1ರಂದು ಬೆಳಿಗ್ಗೆ 10ರಿಂದ ಮುಕ್ರಂಪಾಡಿ ಗೋಕುಲ ಬಡಾವಣೆಯಲ್ಲಿ ದ್ವಾರಕೋತ್ಸವ 2026 ಹಮ್ಮಿಕೊಳ್ಳಲಾಗಿದೆ ಎಂದು ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಗೋಪಾಲಕೃಷ್ಣ ಭಟ್ ಹೇಳಿದರು.

chennai-shopping
maithri

ಶುಕ್ರವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ನಿರ್ಮಾಣ ಕ್ಷೇತ್ರದಲ್ಲಿ ಕಳೆದ 21 ವರ್ಷಗಳಿಂದ ಜಿಲ್ಲೆಯಲ್ಲಿ ವಿಶಿಷ್ಟ ಹೆಜ್ಜೆ ಗುರುತು ಸಾಧಿಸಿರುವ ಪುತ್ತೂರಿನ ದ್ವಾರಕಾ ಕಾರ್ಪೋರೇಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ “ನಿಮ್ಮ ಸೈಟ್ / ಮನೆಯ ಕನಸು ನಮ್ಮಲ್ಲಿ ನನಸು” ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಗುಣಮಟ್ಟ, ಶಾಸ್ತ್ರ, ಪ್ರಮಾಣ, ಆಧುನಿಕತೆ, ತಂತ್ರಜ್ಞಾನ, ಪರಿಪೂರ್ಣತೆಯೊಂದಿಗೆ ನಿರ್ಮಾಣ ಕ್ಷೇತ್ರದಲ್ಲಿ ಪ್ರಗತಿ ಹೊಂದಿ, ಗುಣಮಟ್ಟದ ಖಾತ್ರಿಗಾಗಿ ISO ಪ್ರಮಾಣ ಪತ್ರವನ್ನು ಪಡೆದಿದೆ ಎಂದರು.

ಫೆ. 1ರಂದು ಬೆಳಿಗ್ಗೆ 10ಕ್ಕೆ ದ್ವಾರಕಾ ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಭಟ್ಟ ಅರ್ತ್ಯಡ್ಕ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಮಹೇಶ ಕಜೆ ಉದ್ಘಾಟನೆ ನೆರವೇರಿಸಲಿದ್ದಾರೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಬೊಳ್ವಾರು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ, ನಿವೃತ್ತ ಪ್ರಾಂಶುಪಾಲ ಬಿ.ವಿ. ಸೂರ್ಯನಾರಾಯಣ ಪ್ರಮುಖ ಅಭ್ಯಾಗತರಾಗಿರುವರು. ಇದೇ ಸಂದರ್ಭ ವೈದಿಕ ವಿದ್ವಾಂಸ ವೇದ ವಿದ್ವಾನ್ ಗಣೇಶ ಭಟ್ಟ ಪರಕ್ಕಜೆ, ಪುತ್ತೂರು ಎಸ್.ಡಿ.ಪಿ. ರೆಮಿಡೀಸ್’ನ ಡಾ. ಹರಿಕೃಷ್ಣ ಪಾಣಾಜೆ, ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಕಲಾದೀಪ ವಿದ್ವಾನ್ ದೀಪಕ್ ಕುಮಾರ್, ಕಾಸರಗೋಡು ನೆಕ್ರಂಪಾರೆ ಸ್ಕಂದ ಪ್ಲಾಸ್ಟಿಕ್ಸ್’ನ ಮುರಳೀಕೃಷ್ಣ ಅವರನ್ನು ಸನ್ಮಾನಿಸಲಾಗುವುದು. ಹರಿಕೃಷ್ಣ ಭಟ್ಟ ಅರ್ತ್ಯಡ್ಕ ರಚಿಸಿರುವ ಉತ್ತರನ ಜಂಬ, ಭಕ್ತಿ ತರಂಗ, ಒಗಟಿನ ಕೈಚೀಲ ಹಾಗೂ ನವೀನಕೃಷ್ಣ ಎಸ್. ಉಪ್ಪಿನಂಗಡಿ ರಚಿಸಿರುವ ಬಾಳಿನ ಬುತ್ತಿ ಕೃತಿಯನ್ನು ರಾಮಕುಂಜದ ನಿವೃತ್ತ ಪ್ರಾಂಶುಪಾಲ ಗಣರಾಜ ಕುಂಬ್ಳೆ ಅವರು ಗ್ರಂಥ ಅನಾವರಣಗೊಳಿಸಲಿದ್ದಾರೆ ಎಂದು ವಿವರಿಸಿದರು.

ದ್ವಾರಕಾ ಕಲಾಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ರಾಮಾಯಣ, ಮಹಾಭಾರತ ಪರೀಕ್ಷೆಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಬಹುಮಾನ, ಪುರಸ್ಕಾರ ನೀಡುವ ಕಾರ್ಯಕ್ರಮವೂ ನಡೆಯಲಿದೆ ಎಂದರು.

ಮಧ್ಯಾಹ್ನ 12ಕ್ಕೆ ಸ್ವಾವಲಂಬನೆಗಾಗಿ ಆರ್ಥಿಕ ಹೂಡಿಕೆ ವಿಷಯದಲ್ಲಿ ವಿಚಾರಗೋಷ್ಠಿ ನಡೆಯಲಿದ್ದು, ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳು ವಿಚಾರ ಮಂಡಿಸಲಿದ್ದಾರೆ. ಸಮನ್ವಯಕಾರರಾಗಿ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ. ವಿಜಯ ಸರಸ್ವತಿ ಸಹಕರಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಕುಂಬ್ಳೆ ಸೋಲಾರ್ ಎನರ್ಜಿ ಸೊಲ್ಯೂಷನ್ ಪ್ರೈ ಲಿ.ನ ಸಿಇಒ ಕುಂಬ್ಳೆ ನರಸಿಂಹ ಪ್ರಭು ಭಾಗವಹಿಸಲಿದ್ದಾರೆ ಎಂದರು.

ಮಧ್ಯಾಹ್ನ 1.30ರಿಂದ ದ್ವಾರಕಾ ಕಲಾಶಾಲೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ಹಿಮ್ಮೇಳದ ಅಬ್ಬರತಾಳ ಹಾಗೂ ಕೀಬೋರ್ಡ್ ವಾದನ ಲಯವಾದ್ಯ ರಂಜನಿ ನಡೆಯಲಿದೆ. 2.30ರಿಂದ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಕಲಾರಾಧನೆ, ಸಂಜೆ 4 ಗಂಟೆಗೆ ಝೀ ಕನ್ನಡ ಖ್ಯಾತಿಯ ಗಾಯಕಿ ಅಖಿಲಾ ಪಜಿಮಣ್ಣು ಮತ್ತು ಬಳಗದಿಂದ ಗಾನ ರಸಧಾರೆ ನಡೆಯಲಿದೆ. 5.30ರಿಂದ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಕಲಾದೀಪ ವಿದ್ವಾನ್ ದೀಪಕ್ ಕುಮಾರ್ ಬಳಗದಿಂದ ಶಂಭೋ ಸ್ವಯಂಭೋ ಭರತನಾಟ್ಯ ಪ್ರದರ್ಶನಗೊಳ್ಳಲಿದೆ. ರಾತ್ರಿ 7ರಿಂದ ಪಟ್ಟೆ ಶ್ರೀ ಕೃಷ್ಣ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಭೂಮಿಪುತ್ರ ಯಕ್ಷಗಾನ ಬಯಲಾಟ ಜರಗಲಿದೆ ಎಂದರು.

ಊಟ, ಉಪಹಾರ, ಸನ್ಮಾನನೀಯರ ಭವ್ಯ ಮೆರವಣಿಗೆ, ಗ್ರಾಹಕರೊಂದಿಗೆ ವಿಚಾರ ವಿನಿಮಯಗಳೊಂದಿಗೆ ಹನ್ನೆರಡು ಗಂಟೆಗಳ ನಿರಂತರ ಕಾರ್ಯಕ್ರಮವಿದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಮೃತಕೃಷ್ಣ ಎನ್., ಕಾರ್ಯದರ್ಶಿ ಗಣರಾಜ ಕುಂಬ್ಳೆ, ಆಪರೇಷನ್ ಹೆಡ್ ದುರ್ಗಾ ಗಣೇಶ್ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts